Advertisement
ಸಚಿವ ಸ್ಥಾನ ನೀಡುವ ಪ್ರಕ್ರಿಯೆ ನಿರಂತರವಾಗಿ ಮುಂದೂಡಿಕೆಯಾಗುತ್ತಿರುವ ಬೆನ್ನಲ್ಲೇ ಅಸಮಾಧಾನಗೊಂಡಿರುವ ಬಿಜೆಪಿಯ ಕೆಲ ನೂತನ ಶಾಸಕರು ಕಾಲಮಿತಿಯಲ್ಲಿ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ. ಹಾಗಾಗಿ ಕೇಂದ್ರ ಗೃಹ ಸಚಿವರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲೇ ಚರ್ಚಿಸಿ ಒಪ್ಪಿಗೆ ಪಡೆದು ಸಂಪುಟ ವಿಸ್ತರಣೆ ಇಲ್ಲವೇ ಪುನಾರಚಿಸಬೇಕಾದ ಅನಿವಾರ್ಯತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಎದುರಾದಂತಿದೆ.
Related Articles
Advertisement
ಉಪಚುನಾವಣೆಯಲ್ಲಿ ಗೆದ್ದ ನೂತನ ಶಾಸಕರ ಒತ್ತಡ: ಉಪಚುನಾವಣೆಯಲ್ಲಿ ಗೆದ್ದ ಶಾಸಕರು 24 ಗಂಟೆಯಲ್ಲಿ ಸಚಿವರಾಗಲಿದ್ದಾರೆ ಎಂದು ಹೇಳಿದ್ದ ಯಡಿಯೂರಪ್ಪ ಅವರು ಅದರಂತೆ ಸಚಿವ ಸ್ಥಾನ ಹಂಚಿಕೆ ಮಾಡಲು ಹರಸಾಹಸ ಪಡುವಂತಾಗಿದೆ. ಉಪಚುನಾವಣೆ ಫಲಿತಾಂಶ ಪ್ರಕಟವಾಗಿ ತಿಂಗಳು ಕಳೆದಿದ್ದು, ಸಂಕ್ರಾಂತಿ ನಂತರವೂ ಸಂಪುಟ ವಿಸ್ತರಣೆಯಾಗುವ ಲಕ್ಷಣ ಕಾಣದ ಕಾರಣ ನೂತನ ಶಾಸಕರು ಕೂಡ ತೀವ್ರ ಒತ್ತಡ ಹೇರಲಾರಂಭಿಸಿದ್ದಾರೆ. ಕೆಲವರು ಇತ್ತೀಚೆಗೆ ದೆಹಲಿಗೆ ತೆರಳಿ ಲಾಬಿ ನಡೆಸುವ ಪ್ರಯತ್ನವನ್ನೂ ನಡೆಸಿದ್ದರು.
ವರಿಷ್ಠರು ಭೇಟಿಗೆ ಅವಕಾಶ ನೀಡದ ಕಾರಣ ಸಂಪುಟ ವಿಸ್ತರಣೆ ಮುಂದೂಡಿಕೆಯಾಗುತ್ತಿದ್ದು, ಇದರಿಂದ ಬೇಸರಗೊಂಡಿರುವ ನೂತನ ಶಾಸಕರು ಕಾಲಮಿತಿಯೊಳಗೆ ಸಚಿವ ಸ್ಥಾನ ನೀಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಎರಡು ಬಾರಿ ಸಂಪುಟ ವಿಸ್ತರಣೆ ಪ್ರಕ್ರಿಯೆ ಮುಂದೂಡಿಕೆಯಾದಂತಾಗಿದೆ. ಫೆ. 1ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಫೆ. 10ಕ್ಕೆ ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಹಾಗಾಗಿ ಮಾಸಾಂತ್ಯಕ್ಕೆ ಮುಂದೂಡಿಕೆಯಾದಂತಿರುವ ಸಂಪುಟ ವಿಸ್ತರಣೆ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗುವ ಭೀತಿಯೂ ಸಚಿವಾಕಾಂಕ್ಷಿಗಳನ್ನು ಕಾಡುತ್ತಿದೆ.
18 ಜಿಲ್ಲೆಗೆ ಬಿಜೆಪಿ ಅಧ್ಯಕ್ಷರ ನೇಮಕಬೆಂಗಳೂರು: ರಾಜ್ಯ ಬಿಜೆಪಿಯಿಂದ ವಿವಿಧ ಜಿಲ್ಲೆಗಳ ಅಧ್ಯಕ್ಷರ ನೇಮಕ ಕಾರ್ಯ ಪೂರ್ಣಗೊಂಡಿದ್ದು, ಸಂಘಟನಾತ್ಮಕವಾಗಿ ಮಾಡಿಕೊಂಡಿರುವ 18 ಜಿಲ್ಲೆಗಳ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಬಿಜೆಪಿ ಸಾಂಸ್ಥಿಕ ಚುನಾವಣೆಗಳ ಪದ್ಧತಿಯಂತೆ ಈ ವರ್ಷ ದೇಶಾದ್ಯಂತ ನಡೆಯುತ್ತಿದೆ. ಅದರಂತೆ ಕರ್ನಾಟಕದ 18 ಸಂಘಟನಾತ್ಮಕ ಜಿಲ್ಲೆಗಳಲ್ಲಿ ನೂತನ ಜಿಲ್ಲಾಧ್ಯಕ್ಷರ ಚುನಾವಣೆ ನಡೆದಿದ್ದು, ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಚುನಾವಣಾ ವೀಕ್ಷಕರಾದ ಪಕ್ಷದ ರಾಷ್ಟ್ರೀಯ ಸಾಂಸ್ಥಿಕ ಚುನಾವಣೆಗಳ ಸಹ ಉಸ್ತುವಾರಿ ಸಿ.ಟಿ.ರವಿ, ರಾಜ್ಯ ಉಪಾಧ್ಯಕ್ಷರಾದ ಎಂ.ಬಿ.ಭಾನುಪ್ರಕಾಶ್, ನಿರ್ಮಲ್‌ಕುಮಾರ್ ಸುರಾನ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ರಾಜ್ಯ ಸಾಂಸ್ಥಿಕ ಚುನಾವಣೆಗಳ ಉಪ ಚುನಾವಣಾಧಿಕಾರಿ ಹಾಲಪ್ಪ ಆಚಾರ್ ಉಪಸ್ಥಿತಿಯಲ್ಲಿ ಅಂತಿಮ ಆಯ್ಕೆ ಪೂರ್ಣಗೊಂಡಿದೆ. ನೂತನ ಅಧ್ಯಕ್ಷರ ಪಟ್ಟಿ: ಹಾಸನಕ್ಕೆ ಎಚ್.ಕೆ. ಸುರೇಶ್, ಕೊಡಗು- ರಾಬೀನ್ ದೇವಯ್ಯ, ದಕ್ಷಿಣ ಕನ್ನಡ- ಸುದರ್ಶನ್ ಮೂಡಬಿದರೆ, ಚಿಕ್ಕಮಗಳೂರು- ಎಚ್.ಸಿ ಕಲ್ಮರುಡಪ್ಪ, ಶಿವಮೊಗ್ಗ- ಟಿ.ಡಿ.ಮೇಘ ರಾಜ್, ಹಾವೇರಿ- ಸಿದ್ದರಾಜ್ ಕಲಕೋಟಿ, ಗದಗ- ಮೋಹನ್ ಮಾಳಶೆಟ್ಟಿ, ಬೆಳಗಾವಿ ನಗರ- ಶಶಿ ಪಾಟೀಲ್, ಬೆಳಗಾವಿ ಗ್ರಾಮಾಂತರ- ಸಂಜಯ್ ಪಾಟೀಲ್, ಚಿಕ್ಕೋಡಿ- ಡಾ. ರಾಜೇಶ್ ನಿರಲಿ, ವಿಜಯ ಪುರ- ಆರ್.ಎಸ್. ಪಾಟೀಲ್, ಕಲಬುರಗಿ ಗ್ರಾಮಾಂತರ- ಶಿವರಾಜ ಪಾಟೀಲ್ ರದ್ದೆವಾಡಿ, ಯಾದಗಿರಿ- ಶರಣ ಭೂಪಾಲ್ ರೆಡ್ಡಿ, ಕೊಪ್ಪಳ- ದೊಡ್ಡನ ಗೌಡ ಎಚ್. ಪಾಟೀಲ್, ಚಿತ್ರದುರ್ಗ- ಎ.ಮುರುಳಿ, ಚಿಕ್ಕಬಳ್ಳಾಪುರ- ರಾಮಲಿಂಗಪ್ಪ, ಕೋಲಾರ- ಡಾ. ವೇಣುಗೋಪಾಲ್ ಹಾಗೂ ಬೆಂಗಳೂರು ಉತ್ತರ ಜಿಲ್ಲೆಗೆ ಬಿ.ನಾರಾಯಣ ವರನ್ನು ಆಯ್ಕೆ ಮಾಡಲಾಗಿದೆ.