Advertisement

ಸಂಪುಟ ವಿಸ್ತರಣೆ: ಮುಂದುವರಿದ ಗೊಂದಲ

06:45 AM Jun 10, 2019 | Lakshmi GovindaRaj |

ಬೆಂಗಳೂರು: ಜೂ.12 ರಂದು ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಮಾಡಿಕೊಂಡಿರುವ ಸಿಎಂ ಕುಮಾರಸ್ವಾಮಿ ಜೆಡಿಎಸ್‌ ಕೋಟಾದಡಿ ಖಾಲಿ ಇರುವ 2 ಸ್ಥಾನಗಳಿಗೆ ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಎಂಬ ಬಗ್ಗೆ ಒಂದು ಹಂತದ ನಿರ್ಧಾರಕ್ಕೆ ಬರಲಾಗಿದ್ದರೂ, ಗೊಂದಲ ಮುಂದುವರಿದಿದೆ.

Advertisement

ಕಾಂಗ್ರೆಸ್‌ ಕೋಟಾದಡಿ ಪಕ್ಷೇತರ ಶಾಸಕ ಆರ್‌. ಶಂಕರ್‌ಗೆ ಸಚಿವ ಸ್ಥಾನ ನೀಡಲು ನಿರ್ಧರಿಸಲಾಗಿದ್ದು, ಮುಳಬಾಗಿಲು ಪಕ್ಷೇತರ ಶಾಸಕ ಎಚ್‌.ನಾಗೇಶ್‌ಗೆ ಜೆಡಿಎಸ್‌ನಿಂದ ಸಚಿವ ಸ್ಥಾನ ನೀಡಬೇಕೇ ಅಥವಾ ಕಾಂಗ್ರೆಸ್‌ನಿಂದಲೇ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಸಂಪುಟ ದರ್ಜೆಯ ಸ್ಥಾನ ನೀಡಬೇಕೇ ಎಂಬ ಕುರಿತು ಸೋಮವಾರ ಕಾಂಗ್ರೆಸ್‌ ನಾಯಕರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರನ್ನು ಭಾನುವಾರ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಅಲ್ಲದೇ ಪಕ್ಷದಲ್ಲಿ ಖಾಲಿ ಇರುವ ಇನ್ನೊಂದು ಸ್ಥಾನವನ್ನು ಭರ್ತಿ ಮಾಡಬೇಕಾ ಅಥವಾ ಬೇಡವೋ ಎನ್ನುವ ಬಗ್ಗೆಯೂ ಚರ್ಚಿಸಿದ್ದಾರೆ ಎನ್ನಲಾಗಿದೆ. ಅಲ್ಪ ಸಂಖ್ಯಾತ ಕೋಟಾದಡಿ ವಿಧಾನ ಪರಿಷತ್‌ ಸದಸ್ಯ ಬಿ.ಎಂ. ಫಾರೂಕ್‌ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಆದರೆ, ಪಕ್ಷದಲ್ಲಿ ಅನೇಕ ಹಿರಿಯ ನಾಯಕರು ಸಚಿವಾಕಾಂಕ್ಷಿಗಳಾಗಿದ್ದು, ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನ ತೊರೆದಿರುವ ಎಚ್‌.ವಿಶ್ವನಾಥ್‌ ಅವರಿಗೆ ಸಚಿವ ಸ್ಥಾನ ನೀಡುವುದು ಅಥವಾ ರಾಜ್ಯಾಧ್ಯಕ್ಷ ಹುದ್ದೆಯಲ್ಲೇ ಮುಂದುವರಿಯುವಂತೆ ಮನವೊಲಿಸುವ ಬಗ್ಗೆ ಚರ್ಚೆನಡೆದಿದೆ.

ಹಿರಿಯ ನಾಯಕರಾಗಿರುವ ಬಸವರಾಜ ಹೊರಟ್ಟಿ, ಎಚ್‌.ಕೆ. ಕುಮಾರಸ್ವಾಮಿ, ಅನ್ನದಾನಿ ಅವರೂ ಸಚಿವಾಕಾಂಕ್ಷಿಗಳಾಗಿರುವುದರಿಂದ ಒಂದು ಸ್ಥಾನ ಭರ್ತಿ ಮಾಡುವ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ ಎನ್ನಲಾಗಿದೆ.

Advertisement

ಇನ್ನೊಂದೆಡೆ ಕಾಂಗ್ರೆಸ್‌ನಲ್ಲಿ ಬಂಡಾಯ ಹೆಚ್ಚಾಗುತ್ತಿರುವುದರಿಂದ ನಾಗೇಶ್‌ಗೆ ನಿಗಮ ಮಂಡಳಿ ಸ್ಥಾನ ನೀಡಿ ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರಗೆ ಸಚಿವ ಸ್ಥಾನ ಕೊಡಿಸುವ ಬಗ್ಗೆ ಕಾಂಗ್ರೆಸ್‌ ನಾಯಕರೊಂದಿಗೆ ಚರ್ಚಿಸಿ ತೀರ್ಮಾನಿಸಲು ಮುಖ್ಯಮಂತ್ರಿ ಮುಂದಾಗಿದ್ದಾರೆ.

ಈಗಾಗಲೇ ಸಂಪುಟದಲ್ಲಿ ಸ್ಥಾನ ಸಿಗುವುದಿಲ್ಲ ಎಂದು ಖಾತ್ರಿಯಾಗಿರುವ ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್‌ ಬಹಿರಂಗವಾಗಿಯೇ ಪಕ್ಷದ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಅಲ್ಲದೇ ಸಚಿವಾಕಾಂಕ್ಷಿಗಳಾಗಿರುವ ಹಿರಿಯ ನಾಯಕರದಾರ ರಾಮಲಿಂಗಾರೆಡ್ಡಿ, ಅಮರೇಗೌಡ ಬಯ್ನಾಪುರ, ವಿ. ಮುನಿಯಪ್ಪ, ರೋಷನ್‌ ಬೇಗ್‌ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.

ಹೀಗಾಗಿ ಕಾಂಗ್ರೆಸ್‌ನಲ್ಲಿನ ಬೆಳವಣಿಗೆಗಳ ಕುರಿತು ಸೋಮವಾರ ಆ ಪಕ್ಷದ ನಾಯಕರೊಂದಿಗೆ ಚರ್ಚಿಸಿ ಖಾಲಿ ಇರುವ ಸ್ಥಾನ ಭರ್ತಿ ಮಾಡಬೇಕಾ ಅಥವಾ ಹಾಗೆಯೆ ಉಳಿಸಿಕೊಳ್ಳಬೇಕಾ ಎನ್ನುವುದನ್ನು ಮುಖ್ಯಮಂತ್ರಿ ನಿರ್ಧರಿಸಲಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next