ಹೊಸದಿಲ್ಲಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂಬ ಮಾತುಗಳು ಕಳೆದ ಕೆಲ ದಿನಗಳಿಂದ ಕೇಳಿಬರುತ್ತಿದೆ. ಇದಕ್ಕೆ ಪುಷ್ಠಿ ಕೊಡುವಂತೆ ಗೃಹ ಸಚಿವ ಅಮಿತ್ ಶಾ ಅವರು ಇಂದು ಕೆಲ ಸಂಸದರೊಂದಿಗೆ ಚರ್ಚೆ ನಡೆಸಿದ್ದಾರೆ. ಅದಲ್ಲದೆ ಕಳೆದ ಐದು ದಿನಗಳಿಂದ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಕೆಲವು ಸಚಿವರೊಂದಿಗೆ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್ ಸೇರಿದಂತೆ ಕೆಲ ರಾಜ್ಯಗಳ ಸಂಸದರೊಂದಿಗೆ ಅಮಿತ್ ಶಾ ಅವರು ಚರ್ಚೆ ನಡೆಸಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಸಂಸದರು ಮತ್ತು ಕೆಲ ಸಚಿವರ ಜೊತೆ ಶನಿವಾರ ಮತ್ತು ಭಾನುವಾರ ಶಾ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ: ಬಿಎಸ್ ವೈ, ವಿಜಯೇಂದ್ರ ಸೇರಿ 6 ಜನರ ವಿರುದ್ಧ EDಗೆ ದೂರು: ಏನಿದು ಕೋಟಿ ಹಣ -ವಾಟ್ಸಪ್ ವಿವಾದ?
ಕೋವಿಡ್ ಎರಡನೇ ಅಲೆ ಪ್ರಭಾವ ಕಡಿಮೆಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಮತ್ತು ಭೇಟಿಗಳು ಆರಂಭವಾಗಿದೆ. ಹಂಚಿಕೆ ಮಾಡದೇ ಇರುವ ಮತ್ತು ಹೆಚ್ಚುವರಿ ಖಾತೆಗಳನ್ನು ಹೊಸಬರಿಗೆ ನೀಡಿ ಸಂಪುಟ ವಿಸ್ತರಣೆ ಮಾಡಲು ಹೈಕಮಾಂಡ್ ವಲಯದಲ್ಲಿ ಚಿಂತನೆ ನಡೆಯತ್ತಿದೆ ಎಂದು ವರದಿಗಳು ತಿಳಿಸಿದೆ.
ಸಚಿವರಾಗಿದ್ದ ಎಲ್ ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದ ಬಳಿಕ ಒಂದು ಸಚಿವ ಸ್ಥಾನಕ್ಕೆ ಎಲ್ ಜೆಪಿ ಬೇಡಿಕೆಯಿಟ್ಟಿದೆ. ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಕೂಡಾ ಸಚಿವ ಸ್ಥಾನದ ಆಕಾಂಕ್ಷಿಯಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಪಂಜಾಬ್ ಸಿಎಂ ಮನೆ ಮುಂದೆ ಪ್ರತಿಭಟನೆ : ಸುಖ್ಬೀರ್ ಸಿಂಗ್ ಬಾದಲ್ ಬಂಧನ
ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದಿರುವ ಮಧ್ಯಪ್ರದೇಶದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಲಾಗುತ್ತದೆ ಎನ್ನುವ ಮಾತುಗಳು ಬಲವಾಗಿ ಕೇಳಿ ಬರುತ್ತಿದೆ. ಸಿಂಧಿಯಾ ಅವರನ್ನು ಈಗಾಗಲೇ ರಾಜ್ಯಸಭೆಗೆ ಆಯ್ಕೆ ಮಾಡಲಾಗಿದೆ.
ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಕೆಲ ರಾಜ್ಯಗಳಲ್ಲಿ ಇನ್ನು ಕೆಲವು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣ ಸಂಪುಟದಲ್ಲಿ ಆ ರಾಜ್ಯಗಳ ಸಂಸದರು ಹೆಚ್ಚಿನ ಪಾಲು ಪಡೆಯಬಹುದು ಎಂದು ಅಂದಾಜಿಸಲಾಗಿದೆ.