ಶಿಕಾರಿಪುರ/ದಾವಣಗೆರೆ/ಹಾವೇರಿ: ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ ನಂತರ ಸಚಿವ ಸಂಪುಟ ವಿಸ್ತರಣೆ ಮಾಡ ಲಾಗುವುದೆಂದು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.18ರಂದು ಹುಬ್ಬಳ್ಳಿಗೆ ಅಮಿತ್ ಶಾ ಬರಲಿದ್ದು, ಅವರೊಂದಿಗೆ ಚರ್ಚಿಸಿ, ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು.
ಮಾ.5 ರಂದು ರಾಜ್ಯ ಬಜೆಟ್ ಮಂಡಿಸಲಿದ್ದು, ಇದಕ್ಕಾಗಿ ಒಂದು ತಿಂಗಳ ಕಾಲ ತಯಾರಿ ನಡೆಯಲಿದೆ ಎಂದರು. ಬಳಿಕ, ದಾವಣಗೆರೆಯಲ್ಲಿ ಮಾತನಾಡಿ, ನಾನೂ ಸಹ ರೈತನ ಮಗ. ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ಬಾರಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವ ಬಗ್ಗೆ ಇನ್ನೂ ಆಲೋಚಿಸಿಲ್ಲ. ಆದರೆ, ಬಜೆಟ್‌ನಲ್ಲಿ ಕೃಷಿ ಕ್ಷೇತ್ರ ಹಾಗೂ ರೈತರ ಹಿತ ಕಾಯಲಾಗುವುದು ಎಂದರು.
ನಂತರ, ಹಾವೇರಿಯ ನರಸೀಪುರದಲ್ಲಿ ನಡೆದ ಅಂಬಿಗರ ಚೌಡಯ್ಯನವರ 900ನೇ ಜಯಂತ್ಯುತ್ಸವ ಕಾರ್ಯಕ್ರಮ ದಲ್ಲಿ ಪಾಲ್ಗೊಂಡರು. ಈ ವೇಳೆ ಮಾತ ನಾಡಿ, ಅಂಬಿಗರ ಸಮುದಾಯದ ಅಭಿವೃದ್ಧಿಗೆ ಮುಂಬರುವ ಬಜೆಟ್‌ನಲ್ಲಿ 10 ಕೋಟಿ ರೂ. ಮೀಸಲಿಡುತ್ತೇನೆ. ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ರಚಿಸಿದ್ದೇನೆ. ಬಾಬುರಾವ್ ಚಿಂಚಸೂರ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಲಾಗಿದ್ದು,
ಅವರ ಮೂಲಕ ಸಮಾಜಕ್ಕೆ ಆಗಬೇಕಾದ ಕೆಲಸ ಮಾಡಿ ಕೊಡುತ್ತೇನೆ ಎಂದು ಭರವಸೆ ನೀಡಿದರು. ಅತಿವೃಷ್ಟಿ ಹಾಗೂ ಪ್ರವಾಹದಿಂದ ರಾಜ್ಯದಲ್ಲಿ ಅಪಾರ ಹಾನಿಯಾಗಿದೆ. ಸಮಯ ಕೊಡಿ ಮೂರು ವರ್ಷದಲ್ಲಿ ಹಂತ, ಹಂತವಾಗಿ ಎಲ್ಲ ಬೇಡಿಕೆಗಳನ್ನೂ ಈಡೇರಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಗಂಗಾಮತ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿ ಸುವ ವಿಚಾರ ಕೇಂದ್ರದಲ್ಲಿ ಚರ್ಚೆಯಾಗುತ್ತಿದೆ.
ಕೇಂದ್ರದ ಸಚಿವರೊಂದಿಗೆ ಮಾತನಾಡಿ ಆದಷ್ಟು ಬೇಗ ಪರಿಶಿಷ್ಟ ವರ್ಗಕ್ಕೆ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎಲ್ಲ ಸಮಾಜ, ಸಮುದಾಯವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಹಂಬಲ ಇದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಸಹಕಾರ ಇದ್ದಾಗ ಇನ್ನಷ್ಟು ಅಭಿವೃದ್ಧಿ ಮಾಡಲು ಸಾಧ್ಯ ಎಂದರು.