Advertisement

ಆಗುವುದೇ? ಇಲ್ಲವೇ? ಸಂಪುಟ ವಿಸ್ತರಣೆ ಮುಂದೂಡಿಕೆ ಬಗ್ಗೆ ನಾನಾ ವ್ಯಾಖ್ಯಾನ

11:05 PM Apr 07, 2022 | Team Udayavani |

ಬೆಂಗಳೂರು : ಸಂಪುಟ ವಿಸ್ತರಣೆ ಅಥವಾ ಪುನಾರಚನೆಯನ್ನು ನಿರಂತರವಾಗಿ ಮುಂದೂಡುತ್ತಿರುವುದು ರಾಜ್ಯ ಬಿಜೆಪಿಯಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ನಾನಾ ರೀತಿಯ ವ್ಯಾಖ್ಯಾನಗಳು ಕೇಳಿಬರುತ್ತಿವೆ.

Advertisement

ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗ ಒಳ್ಳೆಯ ಸಚಿವ ಸಂಪುಟದೊಂದಿಗೆ ಸಜ್ಜಾಗಬೇಕು ಎಂಬ ಮಾತು ಪಕ್ಷದ ವಲಯದಲ್ಲಿ ಇದೆ. ಆದರೆ ಪ್ರಸಕ್ತ ವಿದ್ಯಮಾನವನ್ನು ಗಮನಿಸಿದರೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಆಗುವುದೇ ಇಲ್ಲವೇ ಎಂದು ಆಕಾಂಕ್ಷಿಗಳು ಕಾತರಿಸುವಂತಾಗಿದೆ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 8 ತಿಂಗಳುಗಳಲ್ಲಿ 6 ಬಾರಿ ದಿಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಪ್ರತೀ ಬಾರಿಯೂ ಸಂಪುಟ ಪುನಾರಚನೆಯ ವಿಚಾರ ಮುನ್ನಲೆಗೆ ಬಂದರೂ ಪುನಾರಚನೆ ಬಿಡಿ, ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಲು ಕೂಡ ಆಗದಿರುವುದು ಸಚಿವ ಸ್ಥಾನಾಕಾಂಕ್ಷಿಗಳಲ್ಲಿ ಸಾಕಷ್ಟು ಬೇಸರ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.

ಈ ಹಿಂದೆ ಸಿಎಂ ದಿಲ್ಲಿ ಭೇಟಿ ವೇಳೆ ಕೊರೊನಾ, ರಾಜ್ಯದ ಉಪ ಚುನಾವಣೆ, ಪಂಚರಾಜ್ಯ ಚುನಾವಣೆ, ವಿಧಾನ ಪರಿಷತ್‌ ಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳು, ಅಧಿವೇಶನ ಹೀಗೆ ಸಂಪುಟ ಪುನಾರಚನೆ ಮುಂದೂಡಿಕೆಗೆ ಒಂದಲ್ಲೊಂದು ಕಾರಣ ನೀಡಲಾಗಿತ್ತು. ಆದರೆ ಈ ಬಾರಿ ಎಲ್ಲವೂ ಬಗೆಹರಿದಿದೆ. ಆದರೂ ಪಕ್ಷದ ವರಿಷ್ಠರು ಸ್ಪಷ್ಟ ನಿಲುವು ಪ್ರಕಟಿಸದೇ ಇರುವುದರಿಂದ ಆಕಾಂಕ್ಷಿಗಳಷ್ಟೇ ಅಲ್ಲದೆ ರಾಜ್ಯದ ಅನೇಕ ಹಿರಿಯ ನಾಯಕರೂ ಬೇಸರಗೊಂಡಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ.

ನುಂಗಲಾರದ ತುತ್ತು
ಖಾಲಿ ಇರುವ 4 ಸ್ಥಾನ ಭರ್ತಿ ಹಾಗೂ ಹೊಸಬರಿಗೆ ಸಂಪುಟ ಸೇರಲು ಅವಕಾಶ ಕಲ್ಪಿಸಬೇಕೆಂದು ಅನೇಕ ಶಾಸಕರು ನಿರಂತರವಾಗಿ ಸಿಎಂ ಬೊಮ್ಮಾಯಿ ಅವರ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ಇನ್ನೊಂದೆಡೆ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಪುತ್ರ ವಿಜಯೇಂದ್ರ ಅವರನ್ನು ಸಂಪುಟದಲ್ಲಿ ಸೇರಿಸಿಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ. ಆದರೆ ಈ ಪ್ರಸ್ತಾವವನ್ನು ಸಿಎಂ ಅವರು ವರಿಷ್ಠರ ಮುಂದಿಟ್ಟರೂ ಅವರು ತಲೆ ಕೆಡಿಸಿಕೊಳ್ಳದಿರುವುದು ರಾಜ್ಯ ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿದೆ.

Advertisement

ನಾಯಕತ್ವ ಬದಲಾವಣೆಯ ಗುಮ್ಮ
ಈ ನಡುವೆ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ 6 ತಿಂಗಳು ಪೂರೈಸಿದ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ನಿರಂತರವಾಗಿ ಮಾತುಗಳು ಕೇಳಿ ಬರುತ್ತಿವೆ. ಈ ಬೆಳವಣಿಗೆಗಳ ಬಗ್ಗೆ ಸ್ವತಃ ಮುಖ್ಯಮಂತ್ರಿಯವರೇ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಅನಗತ್ಯ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿರುವುದು ಪಕ್ಷ ಮತ್ತು ಸರಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಆಪ್ತರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಸಿಎಂ ಅವರು ಈ ಬಾರಿ ಎರಡು ದಿನ ದಿಲ್ಲಿಯಲ್ಲಿದ್ದರೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿಗೆ ಅವಕಾಶ ಸಿಕ್ಕಿಲ್ಲ. ಆದರೆ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರಿಗೆ ಅಮಿತ್‌ ಶಾ ಭೇಟಿಯ ಅವಕಾಶ ಲಭ್ಯವಾಗಿದೆ. ಇದನ್ನು ಬಿಜೆಪಿಯಲ್ಲಿ ಹಲವು ರೀತಿಗಳಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಸಂಪುಟ ವಿಸ್ತರಣೆ ಪ್ರಸ್ತಾವವನ್ನು ವರಿಷ್ಠರು ಮುಂದೂಡುತ್ತಿರುವುದಕ್ಕೂ ನಾಯಕತ್ವ ಬದಲಾವಣೆಗೂ ಸಂಬಂಧ ಕಲ್ಪಿಸಲಾಗುತ್ತಿದೆ. ಇದರ ನಡುವೆಯೇ ಮುಖ್ಯಮಂತ್ರಿ ಬದಲಾವಣೆ ವದಂತಿಯನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಳ್ಳಿ ಹಾಕಿದ್ದಾರೆ. ಪಕ್ಷದ ಅಧ್ಯಕ್ಷ ನಡ್ಡಾ ಅವರೊಂದಿಗೆ ಸಿಎಂ ಬೊಮ್ಮಾಯಿ ಸಾಕಷ್ಟು ಚರ್ಚೆ ಮಾಡಿ¨ªಾರೆ. ಹಾಗಾಗಿ ಬದಲಾವಣೆ ಕಪೋಲಕಲ್ಪಿತ. ಸಿಎಂ ದಿಲ್ಲಿ ಭೇಟಿ ವೇಳೆ ಅಮಿತ್‌ ಶಾ ಭೇಟಿಗೆ ಅವಕಾಶ ಸಿಗಲಿಲ್ಲ ಎಂದೇನೂ ಇಲ್ಲ. ಶಾ ರಾಜ್ಯಕ್ಕೆ ಭೇಟಿ ನೀಡಿ¨ªಾಗ ಮಾತನಾಡಿದ್ದಾರೆ ಎಂದು ಸಿ.ಟಿ. ರವಿ ಹೇಳಿದ್ದಾರೆ.

ನಾನು ಯಾವುದೇ ಹುದ್ದೆಯ ಆಕಾಂಕ್ಷಿ ಅಲ್ಲ. ನಾನು ಪಕ್ಷದ ಕಾರ್ಯಕರ್ತ. ಪಕ್ಷ ನೀಡುವ ಜವಾಬ್ದಾರಿಗೆ ಬದ್ಧ. ಬಿಜೆಪಿಯಲ್ಲಿ ಯಾವುದೂ ಶಾಶ್ವತ ಅಲ್ಲ. ಕಾಲಕಾಲಕ್ಕೆ ಎಲ್ಲರೂ ಬದಲಾವಣೆ ಆಗುತ್ತಾರೆ.
– ಸಿ.ಟಿ. ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಮಾಸಾಂತ್ಯಕ್ಕೆ ಪುನಾರಚನೆಯ ವಿಶ್ವಾಸ
ಎ. 16, 17ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರಾಜ್ಯಕ್ಕೆ ಆಗಮಿಸಲಿದ್ದಾರೆ. ಆಗ ಸಂಪುಟ ವಿಸ್ತರಣೆಯ ಕುರಿತು ಇನ್ನಷ್ಟು ಚರ್ಚೆ ನಡೆದು, ಈ ಮಾಸಾಂತ್ಯದೊಳಗೆ ಸಂಪುಟ ಪುನಾರಚನೆಯಾಗಲಿದೆ ಎನ್ನುವ ವಿಶ್ವಾಸವನ್ನು ಬಿಜೆಪಿಯ ಕೆಲವು ಶಾಸಕರು ವ್ಯಕ್ತಪಡಿಸಿದ್ದಾರೆ. ಖಾಲಿ ಇರುವ 4 ಸ್ಥಾನಗಳನ್ನು ಹಾಗೆಯೇ ಇರಿಸಿಕೊಂಡು ಚುನಾವಣೆಗೆ ಹೋಗುವುದಿಲ್ಲ. ನಾಲ್ಕೈದು ಹಿರಿಯ ಸಚಿವರನ್ನು ಚುನಾವಣೆಗಾಗಿ ಪಕ್ಷ ಸಂಘಟನೆಗೆ ಬಳಸಿಕೊಳ್ಳಲು ಕೈ ಬಿಡುವ ಸಾಧ್ಯತೆ ಇರುವುದರಿಂದ ಈ ಮಾಸಾಂತ್ಯದೊಳಗೆ ಸಂಪುಟ ಪುನಾರಚನೆ ಆಗುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ.

ಎ. 12ಕ್ಕೆ ವಿಜಯೇಂದ್ರ ಸಚಿವ?
ಈ ಎಲ್ಲ ಬೆಳವಣಿಗೆಗಳ ನಡುವೆ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಏಕಾಂಗಿಯಾಗಿ ಎ. 12ರಂದು ಸಂಪುಟ ಸೇರಲಿದ್ದಾರೆ ಎಂಬುದು ಅವರ ಅಭಿಮಾನಿ ಬಳಗದಲ್ಲಿ ಕೇಳಿಬರುತ್ತಿರುವ ಸುದ್ದಿ. ವಿಜಯೇಂದ್ರ ಅವರ ಅಭಿಮಾನಿ ಬಳಗದ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಸುದ್ದಿ ಹರಿದಾಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next