Advertisement

ಕೆಪಿಎಸ್‌ಸಿ 2011 ರ ಅಭ್ಯರ್ಥಿಗಳ ಸಕ್ರಮಕ್ಕೆ ಕಾಯ್ದೆ ತರಲು ಸಂಪುಟ ನಿರ್ಧಾರ

07:26 PM Feb 09, 2022 | Team Udayavani |

ಬೆಂಗಳೂರು: 2011 ರ ಕೆಪಿಎಸ್‌ಸಿ 362 ಪ್ರೊಬೆಷನರಿ ಅಭ್ಯರ್ಥಿಗಳ ಆಯ್ಕೆಯನ್ನು ಸಕ್ರಮಗೊಳಿಸಲು ಕಾನೂನು ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

Advertisement

ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, 2011ರ ಪ್ರೊಬೆಷನರಿ ಹುದ್ದೆಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಕೆಲವು ಅಭ್ಯರ್ಥಿಗಳು ಕೋರ್ಟ್‌ ಮೆಟ್ಟಿಲು ಹತ್ತಿದ್ದರಿಂದ ಸುಪ್ರೀಂ ಕೋರ್ಟ್‌ ಆ ನೇಮಕಾತಿಯನ್ನು ರದ್ದುಗೊಳಿಸಿತ್ತು.

ಆದರೆ, ಕೋರ್ಟ್‌ನ ಈ ಆದೇಶದಿಂದ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ರಾಜ್ಯದ ಅನೇಕ ಮಠಾಧೀಶರು, ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು, 362 ಅಭ್ಯರ್ಥಿಗಳ ನೇಮಕಕ್ಕೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದರು.

ರಾಜ್ಯ ಸರ್ಕಾರ ಅಸಿಂಧುಗೊಂಡಿರುವ ಅಭ್ಯರ್ಥಿಗಳ ನೇಮಕ ಮಾಡಿಕೊಳ್ಳಲು ಕರ್ನಾಟಕ ನಾಗರೀಕ ಸೇವೆಗಳು (2011ರ ಗೆಜೆಟ್‌ ಪ್ರೊಬೆಷನರಿ ನೇಮಕಾತಿ ಊರ್ಜಿತಗೊಳಿಸಲು) ವಿಶೇಷ ನೇಮಕಾತಿ ಕಾಯ್ದೆಯನ್ನು ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಮಂಡನೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಕಾನೂನೂ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.

ಈ ಹಿಂದೆ ಕೆಪಿಎಸ್‌ಸಿಯಿಂದ ಊರ್ಜಿತಗೊಳಿಸಿರುವ ಪಟ್ಟಿಯನ್ನು ಒಪ್ಪಿಕೊಂಡು ಅದರಂತೆ ಕಾನೂನು ರೂಪಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

Advertisement

ಸಚಿವ ಸಂಪುಟದ ಪ್ರಮುಖ ನಿರ್ಧಾರಗಳು
– ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಎಲ್ .ಆರ್‌ಓ.ಟಿ. ಆಧಾರದ ಮೇಲೆ ಬೆಂಗಳೂರಿನ ಗಿರಿಜಾರಮಣ ಇಂಪಕ್‌ ಪ್ರೈವೇಟ್‌ ಲಿ.ಗೆ 40 ವರ್ಷಗಳ ಅವಧಿಗೆ 320 ಕೋಟಿಗೆ ಗುತ್ತಿಗೆ ನೀಡಿ ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ
– ಬೆಳಗಾವಿ ಜಿಲ್ಲೆ , ಅಥಣಿ ತಾಲ್ಲೂಕಿನ ಝಂಜುರವಾಡ ಗ್ರಾಮದ ಹತ್ತಿರ ಕೃಷ್ಣಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ಯಲ್ಲಮ್ಮನವಾಡಿ ಕೆರೆಗೆ ನೀರು ತುಂಬಿಸುವ ಯೋಜನೆಯ ಮೊದಲನೇ ಹಂತದ ಕಾಮಗಾರಿಯನ್ನು ರೂ. 49.51 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ
– ಕಲಬುರಗಿ ಜಿಲ್ಲೆ ಯ ಅಫ‌ಜಲಪೂರ ತಾಲ್ಲೂಕಿನ ಬಾದನಳ್ಳಿಯಿಂದ ಗೌಡಗಾಂವ ಜಿಲ್ಲಾ ಮುಖ್ಯ ರಸ್ತೆ 9.60 ಕಿ.ಮೀ ರಸ್ತೆ ಸುಧಾರಣೆ ಕಾಮಗಾರಿಯ ರೂ. 10.97 ಕೋಟಿಗಳ ಪರಿಷ್ಕೃತ ಅಂದಾಜಿಗೆ ಕೆಕೆಆರ್‌ಡಿಬಿ ಅನುದಾನ ಒದಗಿಸಲು ಆಡಳಿತಾತ್ಮಕ ಒಪ್ಪಿಗೆ
– ಕೋಲಾರ ಜಿಲ್ಲೆ , ಮಾಲೂರು ತಾಲ್ಲೂಕು, ಮಾಸ್ತಿ ಗ್ರಾಮದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಹಿಂದುಳಿದ ವರ್ಗ ವಸತಿ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಯ ರೂ. 17.00 ಕೋಟಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ
– ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಭಿವೃದ್ಧಿಪಡಿಸುತ್ತಿರುವ ರೂ. 28.63 ಕೋಟಿಗಳ ಮೊತ್ತದ ಆರು ರಸ್ತೆ ಕಾಮಗಾರಿಗಳ ಸ್ಥಳಗಳನ್ನು ಬದಲಾವಣೆ ಮಾಡಲು ಅನುಮೋದನೆ
– ವಿಜಯಪುರ ಮಹಾನಗರಪಾಲಿಕೆಯಲ್ಲಿ ದೀರ್ಘಾವಧಿ ಗುತ್ತಿಗೆಗೆ ನೀಡಿರುವ ಆಸ್ತಿಗಳ ಪೈಕಿ ಉಳಿಕೆ 366 ಲೀಸ್‌ ಆಸ್ತಿಗಳನ್ನೂ ಸಹ ಸರ್ಕಾರ ಈಗಾಗಲೇ ನಿಗದಿಪಡಿಸಿರುವ ದರಕ್ಕೆ ಬಡ್ಡಿ ಮೊತ್ತ ಸೇರಿಸಿ ಖರೀದಿಗೆ ಮಂಜೂರಾತಿ
– ಬೀದರ್‌ ಜಿಲ್ಲೆಯ ಬಸವಕಲ್ಯಾಣದಲ್ಲಿ ನಿರ್ಮಿಸಲಾಗುವ ನೂತನ ಅನುಭವ ಮಂಟಪದ ನಿರ್ಮಾಣ ಕಾಮಗಾರಿಯ ಅಂದಾಜು 560 ಕೋಟಿಗೆ ಆಡಳಿತಾತ್ಮಕ ಅನುಮೋದನೆ
– ಉತ್ತರ ಕನ್ನಡ ಜಿಲ್ಲೆ, ಕುಮಟಾ ತಾಲ್ಲೂಕು, ಮಿನಿ ವಿಧಾನ ಸೌಧ ಕಟ್ಟಡದ ಕಾಮಗಾರಿಯ ರೂ. 16.28 ಕೋಟಿಗಳ ಪರಿಷ್ಕೃತ ಅಂದಾಜು ಪಟ್ಟಿಗೆ ಅನುಮೋದನೆ
– ಕರ್ನಾಟಕ ಮುದ್ರಾಂಕ (ತಿದ್ದುಪಡಿ) ವಿಧೇಯಕ, 2022 ಅನುಮೋದನೆ
– ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ನಿಡುಗುರ್ತಿ ಮತ್ತು ಇತರೆ 60 ಜನವಸತಿಗಳಿಗೆ ಜಲ ಜೀವನ ಮಿಷನ್‌ ಅಡಿ ಬಹುಗ್ರಾಮ ಕುಡಿಯುವ ನೀರು ಸರಬರಾಜಿನ ರೂ. 131.21 ಕೋಟಿಗಳ ಅಂದಾಜು ಮೊತ್ತದ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ
– ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆವಿನಹಳ್ಳಿ ಮತ್ತು ಇತರೆ 336 ಜನವಸತಿಗಳನ್ನೊಳಗೊಂಡ 122 ಗ್ರಾಮಗಳಿಗೆ ಜಲ ಮಿಷನ್‌ ಅಡಿ ಬಹುಗ್ರಾಮ ಕುಡಿಯುವ ಜೀವನ ಸರಬರಾಜಿನ ರೂ. 88 ಕೋಟಿಗಳ ಅಂದಾಜು ಮೊತ್ತದ ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಮೋದನೆ
– ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಅಮಾನಿ ಬೈರಸಾಗರ ಕೆರೆಯ ಸುತ್ತಮುತ್ತಲಿನ 28 ಜನವಸತಿಗಳಿಗೆ ಜೀವನ್‌ ಮಿಷನ್‌ ಅಡಿ ಬಹುಗ್ರಾಮ ಕುಡಿಯುವ ನೀರು ಸರಬರಾಜಿನ 15 ಕೋಟಿಗಳ ಅಂದಾಜು ಮೊತ್ತದ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ
– ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲ್ಲೂಕಿನ ಗೋವಿಂದಪುರ ಹಾಗೂ ಇತರೆ ಜನವಸತಿಗಳು ಮತ್ತು ಗೋಪಿಶೆಟ್ಟಿಕೊಪ್ಪದ ನಗರ ಪ್ರದೇಶಕ್ಕೆ ಜಲ ಜೀವನ್‌ ಮಿಷನ್‌ ಅಡಿ ಬಹುಗ್ರಾಮ ಕುಡಿಯುವ ನೀರು ಸರಬರಾಜಿನ ರೂ. 16.73 ಕೋಟಿಗಳ ಅಂದಾಜು ಮೊತ್ತದ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ
– ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ವಾಸರಕುದ್ರಿಗೆ ಮತ್ತು ಇತರೆ 5 ಗ್ರಾಮಗಳಿಗೆ (23 ಜನವಸತಿಗಳು) ಜಲ ಜೀವನ್‌ ಮಿಷನ್‌ ಅಡಿ ಬಹುಗ್ರಾಮ ಕುಡಿಯುವ ನೀರು ಸರಬರಾಜಿನ ರೂ. 30.27 ಕೋಟಿಗಳ ಅಂದಾಜು ಮೊತ್ತದ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ
– ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ 22 ಗ್ರಾಮಗಳ (43 ಜನವಸತಿಗಳು) ಜಲ ಜೀವನ್‌ ಮಿಷನ್‌ ಅಡಿ ಹಾಗೂ ಕೆರವಾಡಿ ಮತ್ತು ಇತರೆ 17 ಗ್ರಾಮಗಳ (42 ಜನವಸತಿಗಳು) ಸಂಯೋಜಿತ ಬಹುಗ್ರಾಮ ಕುಡಿಯುವ ನೀರು ಸರಬರಾಜಿನ ರೂ. 88.50 ಕೋಟಿಗಳ ಮೊತ್ತದ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ
– ಬೆಂಗಳೂರು ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣ-ಹಲವು ಮಾರ್ಪಾಡುಗಳೊಂದಿಗೆ ನಿರ್ಮಾಣ ಮಾಡುವ ಪ್ರಸ್ತಾವನೆಗೆ ಅನುಮೋದನೆ
– ಕೇಂದ್ರ ಹಾಗೂ ರಾಜ್ಯ 45 : 55 ಅನುಪಾತದಲ್ಲಿ 4500 ಕೋಟಿ ರೂ ಸಾಲ ಪಡೆಯಲು ರಾಜ್ಯ ಸರ್ಕಾರದ ತೀರ್ಮಾನ.

ಹಿಜಾಬ್‌ ಕೋರ್ಟ್‌ ತೀರ್ಪಿಗೆ ಕಾಯಲು ತೀರ್ಮಾನ
ರಾಜ್ಯದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ಮುಸ್ಲಿಂ ವಿದ್ಯಾರ್ಥಿಗಳು ಧರಿಸುವ ಹಿಜಾಬ್‌ ಪ್ರಕರಣದ ಕುರಿತು ಸಚಿವ ಸಂಪುಟ ಸಭೆಯಲ್ಲಿ ಅನೌಪಚಾರಿಕ ಚರ್ಚೆಗೆ ಪ್ರಪ್ತಾವ ಮಾಡುವ ಮುನ್ನವೇ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಹಿಜಾಬ್‌ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಸಂಪುಟದಲ್ಲಿ ಚರ್ಚಿಸುವುದು ಸರಿಯಲ್ಲ. ಆ ವಿಷಯದ ಪ್ರಸ್ತಾಪವೇ ಬೇಡ ಎಂದು ಸಲಹೆ ನೀಡಿದರು ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಹಿಜಾಬ್‌ ಪ್ರಕರಣದ ಕುರಿತು ಸಂಪುಟದಲ್ಲಿ ಚರ್ಚೆಯಾಗಿಲ್ಲ ಎಂ ದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next