Advertisement

ಮಹಿಷಿ ವರದಿ ಜಾರಿಗೆ ಸಂಪುಟ ತೀರ್ಮಾನ

01:51 AM Feb 15, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸ್ಥಾಪನೆಯಾಗುವ ಕೈಗಾರಿಕೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಕನ್ನಡಿಗರ ನೇಮಕಕ್ಕೆ ಆದ್ಯತೆ ನೀಡುವಂತೆ ಕರ್ನಾಟಕ ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ 1961 ಕಾಯ್ದೆಗೆ ತಿದ್ದುಪಡಿ ತರಲು ಹಾಗೂ ಅಂಗವಿಕಲರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.4, ಸರ್ಕಾರಿ ಸವಲತ್ತಿನಲ್ಲಿ ಶೇ.5 ರಷ್ಟು ಮೀಸಲಾತಿ ಕಲ್ಪಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನ ಮಾಡಿದೆ.

Advertisement

ಜತೆಗೆ, ಸರ್ಕಾರಿ ಕಚೇರಿಗಳಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ, ಸಂಶೋಧನಾ ವಿದ್ಯಾರ್ಥಿಗಳು 2 ತಿಂಗಳು ಇಂಟರ್ನ್ಶಿಫ್ (ತರಬೇತಿ) ಪಡೆಯಲು ಅವಕಾಶ ಕಲ್ಪಿಸಲು, ಪೊಲೀಸ್‌ ಇಲಾಖೆಯಲ್ಲಿ ಮಹಿಳಾ ಮೀಸಲಾತಿ ಪ್ರಮಾಣವನ್ನು ಶೇ. 25 ಕ್ಕೆ ಹೆಚ್ಚಳ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ.

ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಕೃಷ್ಣ ಬೈರೇಗೌಡ, “ಡಾ. ಸರೋಜಿನಿ ಮಹಿಷಿ ವರದಿ ಅನ್ವಯ ಕನ್ನಡಿಗರಿಗೆ ಸಿ ಮತ್ತು ಡಿ ದರ್ಜೆಯಲ್ಲಿ ಶೇ. 100 ರಷ್ಟು ಉದ್ಯೋಗ ನೀಡಬೇಕೆಂಬ ಬೇಡಿಕೆ ಇದೆ. ಆ ಹಿನ್ನೆಲೆಯಲ್ಲಿ ರಾಜ್ಯ ದಲ್ಲಿ ಸ್ಥಾಪಿತವಾಗುವ ಕೈಗಾರಿಕೆಗಳು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸರ್ಕಾರದ ಸವಲತ್ತು ಪಡೆದುಕೊಂಡಿದ್ದರೆ ಅಂತಹ ಕಾರ್ಖಾನೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಲಭ್ಯತೆಯ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವಂತೆ ಕಾಯ್ದೆಗೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ’ ಎಂದು ಹೇಳಿದರು.

ಗುಮಾಸ್ತರು, ವರ್ಕ್‌ಮೆನ್‌ ಹುದ್ದೆಗಳ ನೇಮಕಾತಿ ಯಲ್ಲಿ ಲಭ್ಯವಿದ್ದ ಸಂದರ್ಭದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಒಂದು ವೇಳೆ ಅರ್ಹ ಕನ್ನಡಿಗರಿಗೆ ಅವಕಾಶ ನೀಡದಿದ್ದರೆ, ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ. ದೂರಿನ ಪ್ರಕಾರ ಅರ್ಹರಿಗೆ ಅವಕಾಶ ನೀಡದೇ ಹೋದರೆ, ಸಂಬಂಧ ಪಟ್ಟ ಕೈಗಾರಿಕೆಗೆ ಸರ್ಕಾರದಿಂದ ರಿಯಾಯ್ತಿ ದರದಲ್ಲಿ ನೀಡುವ ನೀರು, ವಿದ್ಯುತ್‌ ಸೇರಿದಂತೆ ಸರ್ಕಾರದ ಸವಲತ್ತುಗಳನ್ನು ಕಡಿತಗೊಳಿಸಲಾಗುವುದು ಎಂದರು.

ಸರ್ಕಾರದಿಂದ ಯಾವುದೇ ರಿಯಾಯ್ತಿ ಪಡೆಯದೇ ಸ್ಥಾಪನೆಯಾಗುವ ಕೈಗಾರಿಕೆಗಳಿಗೂ ಈ ನಿಯಮ ಅಳವಡಿಕೊಳ್ಳಲು ಸೂಚನೆ ನೀಡಲಾಗುವುದು. ಆದರೆ, ಐಟಿ ಬಿಟಿ ಸಂಸ್ಥೆಗಳು ಈ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ಹೇಳಿದರು.

Advertisement

ಕಳೆದ ಮೂವತ್ತು ವರ್ಷಗಳಿಂದ ಸರೋಜಿನಿ ಮಹಿಷಿ ವರದಿ ಮಂಡನೆಯಾಗಿದ್ದರೂ ಯಾವುದೇ ಕಾನೂನು ಬಲ ಇಲ್ಲದಿರುವುದರಿಂದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈಗ ಅಧಿಕಾರಿಗಳಿ ಬಲ ತುಂಬಲು ಕಾನೂನು ತಿದ್ದುಪಡಿ ಮಾಡಲಾಗುತ್ತಿದೆ. ಇದೇ ಕಾಯ್ದೆಯನ್ವಯ ಅಂಗವಿಕಲರಿಗೆ ಶೇ.5 ರಷ್ಟು ಮೀಸಲಾತಿ ಕಲ್ಪಿಸಲೂ ಕಾನೂನಿಗೆ ತಿದ್ದುಪಡಿ ತರಲಾಗುತ್ತಿದೆ ಎಂದು ಹೇಳಿದರು.

ವಿಕಲಚೇತನರಿಗೆ ಶೇ 5 ಮೀಸಲಾತಿ: ರಾಜ್ಯ ಸರ್ಕಾರಿ ನೇಮಕಾತಿಗಳಲ್ಲಿ ವಿಕಲಚೇತನರಿಗೆ ಶೇ.4, ಸೌಲಭ್ಯ ಗಳಲ್ಲಿ ಶೇ. 5 ರಷ್ಟು ಮೀಸಲಾತಿ ಕಡ್ಡಾಯ ಗೊಳಿಸಲು ಸಂಪುಟದಲ್ಲಿ ನಿರ್ಧರಿಸಲಾಗಿದೆ. 2017 ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಯ ಪ್ರತಿರೂಪ ದಂತೆಯೇ ರಾಜ್ಯ ಸರ್ಕಾರವೂ ವಿಕಲಚೇ ತನರ ಕಾಯ್ದೆ ಜಾರಿಗೆ ತರಲಾಗಿದೆ. ಇದುವರೆಗೂ ಕೇವಲ 7 ದೈಹಿಕ ಅಸಮರ್ಥತೆಯನ್ನು ಮಾತ್ರ ವಿಕಲಚೇತನಕ್ಕೆ ಪರಿಗಣಿಸಲಾಗುತ್ತಿತ್ತು. ಈಗ 21 ದೈಹಿಕ ವಿಕಲಚೇತನ ವನ್ನು ಪರಿಗಣಿಸಲು ನಿರ್ಧರಿಸಲಾಗಿದೆ ಎಂದರು.

“ಎಸ್‌ಐಟಿ ರಚನೆ ಬಗ್ಗೆ ಚರ್ಚೆಯಾಗಿಲ್ಲ’: ಆಪರೇಷನ್‌ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ನೇಮಕ ಮಾಡುವ ಕುರಿತು ಸಂಪುಟದಲ್ಲಿ ಯಾವುದೇ ರೀತಿಯ ಚರ್ಚೆ ನಡೆದಿಲ್ಲ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿ ದಂತೆ ಸರ್ಕಾರ ಈಗಾಗಲೇ ಸದನದಲ್ಲಿಯೇ ಘೋಷಣೆ ಮಾಡಿರುವುದರಿಂದ ಸಂಪುಟದಲ್ಲಿ ಈ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ ಮುಖ್ಯಮಂತ್ರಿಯೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಅಧಿಕಾರವಿದೆ. ಸಂಪುಟಕ್ಕೆ ತರದೇ ಎಸ್‌ಐಟಿ ರಚನೆ ಮಾಡಬಹುದು ಎಂದರು.

ಪೊಲೀಸ್‌ ಇಲಾಖೆಯಲ್ಲಿ ಮಹಿಳಾ ಮೀಸಲಾತಿ ಹೆಚ್ಚಳ
ಪೊಲೀಸ್‌ ಇಲಾಖೆಯಲ್ಲಿ ಮಹಿಳಾ ಮೀಸಲಾತಿ ಪ್ರಮಾಣವನ್ನು ಶೇ.25 ಕ್ಕೆ ಹೆಚ್ಚಳ ಮಾಡಲು
ನಿರ್ಧರಿಸಲಾಗಿದೆ. ಇದುವರೆಗೂ ಕೇವಲ ಎರಡು ಕೇಡರ್‌ಗಳಿಗೆ ಮಾತ್ರ ಶೇ.20 ರಷ್ಟು ಮಹಿಳೆಯರಿಗೆ
ಮೀಸಲು ನೀಡಲಾಗುತ್ತಿತ್ತು. ಅದನ್ನು ಮುಂದಿನ ಐದು ವರ್ಷಗಳಲ್ಲಿ ಶೇ.25 ಕ್ಕೆ ಹೆಚ್ಚಳ ಮಾಡಲು
ನಿರ್ಧರಿಸಲಾಗಿದೆ. ಡಿಟೆಕ್ಟಿವ್‌ ಸಬ್‌ ಇನ್‌ಸ್ಪೆಕ್ಟರ್‌, ಸಬ್‌ ಇನ್‌ಸ್ಪೆಕ್ಟರ್‌, ಪೊಲಿಸ್‌ ಕಾನ್‌ಸ್ಟೆàಬಲ್‌, ವೈರ್‌
ಲೆಸ್‌ ಕಾನ್‌ಸ್ಟೆàಬಲ್‌, ಗುಪ್ತದಳ ಕಾನ್‌ಸ್ಟೆàಬಲ್‌ ಹುದ್ದೆಗಳಿಗೆ ನೇರ ನೇಮಕಾತಿಯಲ್ಲಿ ಮಹಿಳೆಯರಿಗೆ
ಶೇ.25 ರಷ್ಟು ಮೀಸಲಾತಿ ಕಲ್ಪಿಸಲು ಸಂಪುಟ ತೀರ್ಮಾನ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next