Advertisement

Cabinet Decision: ಸಿಬಿಐ ಪವರ್‌ ಕಟ್‌: ರಾಜ್ಯ ಸರಕಾರ ಸಮರ್ಥನೆ

12:42 AM Sep 28, 2024 | Team Udayavani |

ಬೆಂಗಳೂರು: ಸಿಬಿಐ ತನಿಖೆಗೆ ಸರಕಾರದ ಅನುಮತಿ ಪಡೆಯಬೇಕೆಂಬ ನಿಯಮ ಮಾಡಿದ್ದನ್ನು ರಾಜ್ಯ ಸರಕಾರ ಸಮರ್ಥಿಸಿಕೊಂಡಿದ್ದು ಈ ವಿಚಾರವಾಗಿ ಸಚಿವರಲ್ಲೂ ಗೊಂದಲದ ಹೇಳಿಕೆಗಳು ವ್ಯಕ್ತವಾಗಿವೆ.

Advertisement

ದ್ವೇಷದ ರಾಜಕಾರಣಕ್ಕೆ ದಾರಿ ಆಗಬಾರದು ಎನ್ನುವ ಕಾರಣಕ್ಕೆ ಸಿಬಿಐಗೆ ನೀಡಿದ್ದ ಮುಕ್ತ ಅನುಮತಿಯ ಅಧಿಕಾರವನ್ನು ಹಿಂದಕ್ಕೆ ತೆಗದುಕೊಳ್ಳಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದರೆ, ಇದು ಜನಪ್ರತಿನಿಧಿಗಳಿಗೆ ಮಾತ್ರವಲ್ಲ, ಅಧಿಕಾರಿಗಳನ್ನು ತನಿಖೆ ಮಾಡುವ ಸಂದರ್ಭದಲ್ಲಿಯೂ ಅನ್ವಯಿ
ಸುತ್ತದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಹೇಳಿದ್ದಾರೆ. ಇದು ಜನಪ್ರತಿನಿಧಿಗಳಿಗೆ ಅನ್ವಯಿಸುವುದಿಲ್ಲ. ಕೇಂದ್ರ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕೆಲಸ ಮಾಡುವವರ ತನಿಖೆಗೆ ಸಂಬಂಧಿಸಿದ್ದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ವಿವರಣೆ ನೀಡಿದ್ದ ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಕೂಡ ಇದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ತನಿಖೆಗೆ ಅನ್ವಯಿಸುತ್ತದೆ ಎಂದಿದ್ದರು. ಒಟ್ಟಾರೆ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯವೊಂದು ಗೊಂದಲದ ಗೂಡಾಗಿದೆ.
ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಗಂಭೀರ ಪ್ರಕರಣಗಳು ಎದುರಾದಾಗ ನಮ್ಮ ಅಧಿಕಾರಿಗಳು ತನಿಖೆಗೆ ಸೂಕ್ತರಲ್ಲ ಎನ್ನುವ ಅಭಿಪ್ರಾಯ ಬಂದರೆ, ಆ ವೇಳೆ ಸಿಬಿಐಗೆ ನೀಡುವ ಬಗ್ಗೆ ಚಿಂತನೆ ಮಾಡುತ್ತೇವೆ. ದ್ವೇಷದ ರಾಜಕಾರಣಕ್ಕೆ ದಾರಿ ಆಗಬಾರದು ಎನ್ನುವ ಕಾರಣಕ್ಕೆ ಸಿಬಿಐಗೆ ನೀಡಿದ್ದ ಮುಕ್ತ ಅನುಮತಿಯ ಅಧಿಕಾರವನ್ನು ಹಿಂಪಡೆದಿದ್ದೇವೆ ಎಂದರು.

ಕಾಂಗ್ರೆಸ್‌ ಬ್ಯೂರೋ ಏಜೆನ್ಸಿ ಎಂದವರು ಯಾರು?
ಸಿಬಿಐ ಬಗ್ಗೆ ಜನತಾದಳದ ದೇವೇಗೌಡರು, ಕುಮಾರಸ್ವಾಮಿ ಏನು ಮಾತನಾಡಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ. ಬಿಜೆಪಿಯವರು ಸಿಬಿಐ ಅನ್ನು ಕಾಂಗ್ರೆಸ್‌ ಬ್ಯೂರೋ ಆಫ್‌ ಏಜೆನ್ಸಿ ಎಂದು ಕರೆದಿದ್ದರು. ಸಿಬಿಐಗೆ ಯಾವ, ಯಾವ ಪ್ರಕರಣಗಳನ್ನು ನೀಡಲಾಗಿತ್ತು. ಅವುಗಳು ಏನಾಗಿವೆ? ಐಎಂಎ ಪ್ರಕರಣ ಏನಾಗಿದೆ ಎಂಬುದರ ಬಗ್ಗೆ ನಾನು ಚರ್ಚಿಸುವುದಿಲ್ಲ ಎಂದಷ್ಟೇ ಹೇಳಿದರು.


ನನ್ನ ಕಚೇರಿಗೇ ಡಿನೋಟಿಫಿಕೇಶನ್‌ ಕಡತ ಬಂದಿತ್ತು: ಡಿಕೆಶಿ

ಅನೇಕ ವಿಚಾರಗಳನ್ನು ಮುಖ್ಯಮಂತ್ರಿಗಳು ಹಾಗೂ ಸಂಪುಟದ ಗಮನಕ್ಕೆ ತರದೆ ತೀರ್ಮಾನ ಮಾಡಲು ಆಗುತ್ತದೆಯೇ? ಆದ ಕಾರಣ ರಾಜ್ಯಪಾಲರ ಪತ್ರಕ್ಕೆ ಸಂಪುಟದಲ್ಲಿ ಒಪ್ಪಿಗೆ ಪಡೆದು ಉತ್ತರ ನೀಡಬೇಕು ಎನ್ನುವ ತೀರ್ಮಾನ ತಗೆದುಕೊಂಡಿದ್ದೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು. ನನಗೂ ನೀತಿ, ನಿಯಮಗಳ ಬಗ್ಗೆ ಸ್ವಲ್ಪ ತಿಳಿವಳಿಕೆಯಿದೆ. ನಾನು ವಿದ್ಯಾವಂತ, ಬುದ್ಧಿವಂತ ಅಲ್ಲದಿದ್ದರೂ ಪ್ರಜ್ಞಾವಂತಿಕೆ ಹೊಂದಿದ್ದೇನೆ.

Advertisement

ರಾಜ್ಯಪಾಲರ ಕಚೇರಿಗೆ ಮುಖ್ಯ ಕಾರ್ಯದರ್ಶಿಗಳ ಮೂಲಕ ಉತ್ತರ ಹೋಗಬೇಕು. ನನ್ನ ಕಚೇರಿಗೇ ಕೆಲವು ದಿನಗಳ ಹಿಂದೆ ಡಿನೋಟಿಫಿಕೇಶನ್‌ ಅಥವಾ ರೀಡೂ ಸಂಬಂಧಪಟ್ಟ ಕಡತ ಬಂದಿತ್ತು. ನನ್ನ ಕಾರ್ಯದರ್ಶಿ ನನಗೆ ಕಳುಹಿಸಿದ್ದರು. ಇದಕ್ಕೆ ನಾನು, ಬೇರೆಯವರಿಗೆ ಉತ್ತರ ಕೊಡಲು ಆಗುವುದಿಲ್ಲ. ಕ್ಯಾಬಿನೆಟ್‌ನಲ್ಲಿ ಈ ಹಿಂದೆ ತೀರ್ಮಾನವಾದಂತೆ, ಈ ಕುರಿತು ಸಂಪುಟ ಉಪ ಸಮಿತಿ ರಚನೆಯಾಗಿದೆ, ಅಲ್ಲಿಗೆ ಕಳುಹಿಸಲು ಸೂಚಿಸಿದ್ದೆ ಎಂದು ಹೇಳಿದರು.

ಸಂದರ್ಭ ಸರಿ ಇಲ್ಲದಿರಬಹುದು, ತೀರ್ಮಾನ ಸರಿಯಿದೆ
ಗೃಹ ಸಚಿವ ಡಾ| ಜಿ. ಪರಮೇಶ್ವರ್‌ಮಾತನಾಡಿ, ದಿಲ್ಲಿ ಪೊಲೀಸ್‌ ಕಾಯ್ದೆಯಡಿ ಸಿಬಿಐಗೆ ಇದ್ದ ಮುಕ್ತ ಅಧಿಕಾರವನ್ನು ಹಿಂಪಡೆಯುತ್ತಿರುವುದು ಕರ್ನಾಟಕದಲ್ಲಿ ಇದೇ ಮೊದಲಲ್ಲ. ಆಶ್ಚರ್ಯಪಡುವಂಥದ್ದು ಏನೂ ಇಲ್ಲ. ಮೊದಲ ಬಾರಿಯಾಗಿದ್ದರೆ ಏನೋ ಉದ್ದೇಶವಿದೆ ಎನ್ನಬಹುದಿತ್ತು. ಹಿಂದೆಯೂ ನಾಲ್ಕೈದು ಬಾರಿ ಹಿಂಪಡೆಯಲಾಗಿದೆ. ರಾಜ್ಯ ಸರಕಾರದ ಗಮನಕ್ಕೆ ತಾರದೆ, ಮಾಹಿತಿ ನೀಡಿದೆ ತನಿಖೆ ಸರಿಯಲ್ಲ ಎಂಬ ಅಭಿಪ್ರಾಯದೊಂದಿಗೆ ಈ ತೀರ್ಮಾನ ಮಾಡಿದ್ದೇವೆ. ನಾವು ತೀರ್ಮಾನ ತೆಗೆದುಕೊಂಡ ಸಮಯ-ಸಂದರ್ಭ ಸರಿ ಇಲ್ಲದೇ ಇರಬಹುದು. ಆದರೆ, ತೀರ್ಮಾನ ಸರಿಯಿದೆ ಎಂದರು.

“ರಾಜಭವನದಲ್ಲಿ ಸೋರಿಕೆಯಾದರೆ ರಾಜಭವನವೇ ಜವಾಬ್ದಾರಿ. ನಾವು ಹೇಗೆ ಜವಾಬ್ದಾರಿ ಆಗಲು ಸಾಧ್ಯ? ರಾಜಭವನದಿಂದ ಸರಕಾರಕ್ಕೆ ಅನೇಕ ಪತ್ರಗಳು ಬರುತ್ತಿವೆ, ತನಿಖೆ ಮಾಡಿ ಎಂದೂ ಬರೆದರೆ ನಾವು ಮಾಡುತ್ತೇವೆ. ರಾಜ್ಯಪಾಲರು ಅನುಮತಿಸಿದರೆ ಪೊಲೀಸರು ಒಳಪ್ರವೇಶಿಸಿ ರಾಜಭವನದ ಸಿಬಂದಿಯನ್ನೂ ತನಿಖೆಗೆ ಒಳಪಡಿಸುತ್ತಾರೆ.”  -ಡಾ| ಜಿ. ಪರಮೇಶ್ವರ್‌, ಗೃಹಸಚಿವ

“ಕೇಂದ್ರದ ಹಿಡಿತದಲ್ಲಿರುವ ಸಿಬಿಐನಿಂದ ಅಧಿಕಾರ ದುರ್ಬಳಕೆಯಾಗುತ್ತಿರುವ ಹಿನ್ನೆ ಲೆ ಯಲ್ಲಿ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆಯಲು ನಾನೇ 8 ತಿಂಗಳ ಹಿಂದೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೆ, ಸಿಬಿಐ ಮೇಲೆ ಕೇಂದ್ರ ಸರ್ಕಾರದ ಒತ್ತಡವಿದೆ. ಇದರಿಂದ ಅಧಿಕಾರ ದುರ್ಬಳಕೆಯಾಗುತ್ತದೆ ಎಂಬ ಉದ್ದೇಶದಿಂದ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆಯುವಂತೆ ಪತ್ರ ಬರೆದಿದ್ದೆ.” -ಪ್ರಿಯಾಂಕ್‌ ಖರ್ಗೆ, ಸಚಿವ

“ರಾಜಭವನದಿಂದ ಮಾಹಿತಿ, ಸೋರಿಕೆ ಆಗಿದ್ದರೆ ಅದು ರಾಜಭವನದ ಆಂತರಿಕ ವಿಚಾರ. ಇದರ ಬಗ್ಗೆ ನನಗೆ ಮಾಹಿತಿಯಿಲ್ಲ. ಲೋಕಾ ಯುಕ್ತಕಚೇರಿ ಯಲ್ಲಿ ಏನು ನಡೆಯುತ್ತಿದೆ ಎನ್ನುವ ಬಗ್ಗೆಯೂ ಮಾಹಿತಿಯಿಲ್ಲ. ಸಿಎಂ ವಿರುದ್ಧ ಎಫ್ಐಆರ್‌ ಆದರೆ ಯಾವ ಮುಜುಗರವೂ ಆಗುವುದಿಲ್ಲ.”
-ಡಿ.ಕೆ. ಶಿವಕುಮಾರ್‌, ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next