Advertisement
ನಾಲ್ಕೈದು ಮಂದಿಯನ್ನು ಸಂಪುಟದಿಂದ ಕೈಬಿಟ್ಟು ಪುನಾರಚಿಸಬೇಕೆಂಬ ಯಡಿಯೂರಪ್ಪ ಅವರ ಮನವಿಗೆ ವರಿಷ್ಠರಿಂದ ಸಕಾರಾತ್ಮಕ ಸ್ಪಂದನೆ ದೊರೆತಂತಿಲ್ಲ. ಸಂಪುಟ ವಿಸ್ತರಣೆಗಷ್ಟೇ ಒಪ್ಪಿಗೆ ಸೂಚಿಸಲಾಗಿದೆ ಎನ್ನಲಾಗಿದ್ದು, ಎಷ್ಟು ಮಂದಿಯನ್ನು ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ತಿಳಿಸುವುದಾಗಿ ಜೆ.ಪಿ. ನಡ್ಡಾ ತಿಳಿಸಿದ್ದಾರೆ. ಬಹುತೇಕ ಶನಿವಾರ ಸ್ಪಷ್ಟ ಚಿತ್ರಣ ಸಿಗಲಿದೆ ಎನ್ನಲಾಗಿದೆ.
ದಿಲ್ಲಿ ಪ್ರವಾಸದಲ್ಲಿರುವ ಸಿಎಂ ಯಡಿಯೂರಪ್ಪ ಅವರು ಶುಕ್ರವಾರ ಸಂಸತ್ ಭವನದಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಚರ್ಚಿಸಿದರು. ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಚರ್ಚಿಸುವಂತೆ ಪ್ರಧಾನಿ ಸೂಚಿಸಿರುವುದಾಗಿ ಭೇಟಿ ಬಳಿಕ ಬಿಎಸ್‌ವೈ ಹೇಳಿದ್ದರು. ಹಾಗಾಗಿ ವರಿಷ್ಠರಿಂದ ಶುಕ್ರವಾರವೇ ಸ್ಪಷ್ಟ ಸೂಚನೆ ಹೊರಬೀಳುವ ನಿರೀಕ್ಷೆ ಮೂಡಿತ್ತು. ಆದರೆ ರಾತ್ರಿ ಹೊತ್ತಿಗೆ ನಿರೀಕ್ಷೆ ಹುಸಿಯಾಯಿತು.
Related Articles
Advertisement
ನಾಳೆ ಸಂಪುಟ ವಿಸ್ತರಣೆ?ವರಿಷ್ಠರು ಶನಿವಾರ ವಿಸ್ತರಣೆಗೆ ಒಪ್ಪಿಗೆ ನೀಡಿದರೆ ರವಿವಾರವೇ ಕೆಲವರು ಸಂಪುಟ ಸೇರುವ ಸಾಧ್ಯತೆ ಇದೆ. ಹೀಗಾಗಿ ಶನಿವಾರ ಸಂಜೆ ದಿಲ್ಲಿಯಿಂದ ಹೊರಡಲು ಚಿಂತಿಸಿದ್ದ ಯಡಿಯೂರಪ್ಪ ಅವರು ಜೆ.ಪಿ. ನಡ್ಡಾ ಭೇಟಿ ಬಳಿಕ ಶನಿವಾರ ಬೆಳಗ್ಗೆ 10 ಗಂಟೆಗೆ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಮರಳಲಿದ್ದಾರೆ. ಹಾಗಾಗಿ ಅಧಿವೇಶನಕ್ಕೂ ಮೊದಲೇ ಸಂಪುಟ ವಿಸ್ತರಿಸಿ ಕೊಟ್ಟ ಮಾತು ಉಳಿಸಿಕೊಳ್ಳಬೇಕೆಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಲೆಕ್ಕಾಚಾರ ಕೈಗೂಡುವುದೇ ಎಂಬುದನ್ನು ಕಾದು ನೋಡಬೇಕಿದೆ. ಈ ಮಧ್ಯೆ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲು ದಿಲ್ಲಿಗೆ ತೆರಳಿದ್ದ ಮಾಜಿ ಸಚಿವ ಎಚ್. ವಿಶ್ವನಾಥ್, ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಶುಕ್ರವಾರ ದಿಲ್ಲಿಯಿಂದ ನಿರ್ಗಮಿಸಿದ್ದಾರೆ. ಅವಕಾಶ ನೀಡಿದರೆ ಸಚಿವನಾಗಿ ಕೆಲಸ
ಸಂಪುಟ ವಿಸ್ತರಣೆ ಸಿಎಂ ಅವರ ಪರಮಾಧಿಕಾರ. ಅವಕಾಶ ನೀಡಿದರೆ ಸಚಿವನಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ. ಕೇಂದ್ರ ಸಚಿವರಾದ ಸದಾನಂದ ಗೌಡ, ಪ್ರಹ್ಲಾದ ಜೋಶಿ, ಪಕ್ಷದ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿದ್ದೇನೆ. ಹಿಂದೆ ಅಬಕಾರಿ ಸಚಿವನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಈ ಬಾರಿ ಅವಕಾಶ ಮಾಡಿದರೆ ಚೆನ್ನಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ದಿಲ್ಲಿಗೆ ತೆರಳಿದ್ದ ಅವರು ಹೇಳಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರೊಂದಿಗೆ ವಿವರವಾಗಿ ಮಾತುಕತೆ ನಡೆಸಿದ್ದೇನೆ. ಪ್ರಧಾನಿ ಅವರೊಂದಿಗೆ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದಾರೆ. ಹಿಂದೆಯೂ ಈ ರೀತಿಯ ಚರ್ಚೆಯಾಗಿದೆ. ನಡ್ಡಾ ಅವರು ಪ್ರಧಾನಿ ಜತೆಗೆ ಶನಿವಾರ ಚರ್ಚಿಸಿ ತಿಳಿಸುತ್ತಾರೆ. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತಂತೆ ಅವರು ಯಾವ ಸೂಚನೆ ಕೊಡುತ್ತಾರೆಯೋ ಅದರಂತೆ ಮುಂದುವರಿಯಲಾಗುವುದು. ಅಧಿವೇಶನಕ್ಕೂ ಮೊದಲೇ ಮಾಡಬೇಕು ಎಂಬ ಅಪೇಕ್ಷೆ ಇದೆ. ವರಿಷ್ಠರು ಚರ್ಚಿಸಿ ನೀಡುವ ಸೂಚನೆಯಂತೆ ತೀರ್ಮಾನ ಕೈಗೊಳ್ಳಬೇಕಾಗುತ್ತದೆ.
– ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ನಾಯಕತ್ವ ಬದಲಾವಣೆ ಇಲ್ಲ. ಯಡಿಯೂರಪ್ಪ ಅವರೇ ಪೂರ್ಣ ಅವಧಿ ಪೂರೈಸುತ್ತಾರೆ. ಅವರು ದಿಲ್ಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿರುವುದು ಬೇರೆ ವಿಷಯಗಳಿಗೆ.
– ಬಿ. ಶ್ರೀರಾಮುಲು, ಆರೋಗ್ಯ ಸಚಿವ