CM Post: 2028ರಲ್ಲಿ ಸಿಎಂ ಕುರ್ಚಿ ಕುರಿತು ಮಾತನಾಡೋಣ: ಸಚಿವ ಡಾ.ಎಚ್.ಸಿ.ಮಹದೇವಪ್ಪ
ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿ ಮೇಲೆ ಗಟ್ಟಿಯಾಗಿ ಕುಳಿತಿದ್ದಾರೆ, ಮುಂದೆಯೂ ಕುಳಿತಿರುತ್ತಾರೆ
Team Udayavani, Jan 16, 2025, 7:20 AM IST
ಮೈಸೂರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಕುರ್ಚಿ ಮೇಲೆ ಗಟ್ಟಿಯಾಗಿ ಕುಳಿತಿದ್ದಾರೆ, ಮುಂದೆಯೂ ಕುಳಿತಿರುತ್ತಾರೆ. ಆದ್ದರಿಂದ ಕುರ್ಚಿ ಅಲುಗಾಡುತ್ತಿದೆ, ಕುರ್ಚಿ ಖಾಲಿಯಾಗುತ್ತಿದೆ ಎಂಬ ಯಾವ ಚರ್ಚೆಯೂ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಕುರ್ಚಿಗಾಗಿ ಸ್ಪರ್ಧೆಯೇ ನಡೆಯುತ್ತಿಲ್ಲ. ಸ್ಪರ್ಧೆ ನಡೆಯದ ಮೇಲೆ ಆಕಾಂಕ್ಷಿಯ ಪ್ರಶ್ನೆಯೇ ಬರುವುದಿಲ್ಲ, ಸ್ಪರ್ಧೆ ಮುಗಿದುಹೋಗಿದೆ. 2028ರಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಆಗ ಬೇಕಾದರೇ ಸಿಎಂ ಸ್ಪರ್ಧೆಯ ಬಗ್ಗೆ ಮಾತನಾಡೋಣ. ಸದ್ಯಕ್ಕೆ ಅಂತಹ ಯಾವ ಪ್ರಶ್ನೆಗಳು ಇಲ್ಲ ಎಂದರು.
ವಿಪಕ್ಷಗಳಿಗೆ ಸಂವಿಧಾನಿಕವಾಗಿ ಕೆಲಸ ಮಾಡಲು ಯಾವ ವಿಚಾರಗಳು ಇಲ್ಲ. ಈ ಕಾರಣಕ್ಕಾಗಿ ಇಲ್ಲ-ಸಲ್ಲದ ವಿಚಾರಗಳನ್ನು ಇದೇ ಎನ್ನುವ ರೀತಿ ಮಾತನಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರವನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆ ವಿಚಾರದಲ್ಲಿ ನಾನು ಏನನ್ನೂ ಹೇಳುವುದಿಲ್ಲ ಎಂದರು.