ಹೊಸದಿಲ್ಲಿ : ಕೇಂದ್ರ ಸಚಿವ ಸಂಪುಟ ಇಂದು ಬುಧವಾರ ಕೇಂದ್ರ ಸರಕಾರಿ ನೌಕರರ ತುಟ್ಟಿ ಭತ್ಯೆಯನ್ನು (ಡಿಎ) ಹೆಚ್ಚುವರಿಯಾಗಿ ಶೇ.2 ಏರಿಸಿದೆ. ಈ ಹಚ್ಚುವರಿ ಡಿಎ 2018ರ ಜುಲೈ 1ರಿಂದ ಜಾರಿಗೆ ಬರಲಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಂಪುಟವು ಪಿಂಚಣಿದಾರರಿಗೆ ಹೆಚ್ಚುವರಿ ಡಿಎ ಕಂತನ್ನು ಬಿಡುಗಡೆ ಮಾಡುವ ಪ್ರಸ್ತಾವಕ್ಕೂ ಅನುಮೋದನೆ ನೀಡಿದೆ.
ಮೂಲ ವೇತನ ಅಥವಾ ಪಿಂಚಣಿ ಮೇಲೆ ಈಗಿರುವ ಶೇ.7ರ ಡಿಎ ಮೇಲೆ ಇನ್ನೂ 2 ಶೇಕಡಾ ಡಿಎ ಯನ್ನು ಬೆಲೆ ಏರಿಕೆ ಪರಿಹಾರಾರ್ಥವಾಗಿ ನೀಡಲಾಗಿದೆ.
ಇದರಿಂದ ಸರಕಾರದ ಖಜಾನೆಗೆ 6,112.20 ಕೋಟಿ ರೂ. ವಾರ್ಷಿಕ ಹೆಚ್ಚುವರಿ ಹೊರೆ ಬರಲಿದೆ. ಮತ್ತು 2018-19ರ ಹಣಕಾಸು ವರ್ಷದಲ್ಲಿ 4,074.80 ಕೋಟಿ ರೂ. ಹೊರೆ ಉಂಟಾಗಲಿದೆ (2018ರ ಜುಲೈಯಿಂದ 2019ರ ಫೆಬ್ರವರಿ ವರೆಗಿನ 8 ತಿಂಗಳ ಅವಧಿ).
ಕೇಂದ್ರ ಸಂಪುಟದ ಈ ನಿರ್ಧಾರದಿಂದ 48.41 ಲಕ್ಷ ಕೇಂದ್ರ ಸರಕಾರಿ ನೌಕರರು ಮತ್ತು 62.03 ಲಕ್ಷ ಪಿಂಚಣಿದಾರರಿಗೆ ಲಾಭವಾಗಲಿದೆ.
7ನೇ ಕೇಂದ್ರ ವೇತನ ಆಯೋಗದ ಶಿಫಾರಸಿನ ನೆಲೆಯಲ್ಲಿ ಸ್ವೀಕೃತ ಸೂತ್ರದ ಪ್ರಕಾರ ಈ ಏರಿಕೆಯನ್ನು ಮಾಡಲಾಗಿದೆ.