Advertisement

ಆಂತರಿಕ ಭದ್ರತೆಗೆ ಬಂಪರ್‌

07:15 AM Sep 28, 2017 | |

ಹೊಸದಿಲ್ಲಿ: ಭಾರತ ಮತ್ತು ಮ್ಯಾನ್ಮಾರ್‌ ಗಡಿ ಪ್ರದೇಶದಲ್ಲಿ ಎನ್‌ಎಸ್‌ಸಿಎನ್‌-ಕಪ್ಲಾಂಗ್‌ ಬಣದ ಉಗ್ರರನ್ನು ನಿರ್ದಯವಾಗಿ ಸದೆ ಬಡಿದಿರುವಂತೆಯೇ, ದೇಶದ ಆಂತರಿಕ ಭದ್ರತೆಗೆ ಅಗತ್ಯವಾಗಿರುವ 25 ಸಾವಿರ ಕೋಟಿ ರೂ. ಮೊತ್ತದ ಯೋಜನೆಗೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಈ ಕ್ರಮದಿಂದ ಕಾನೂನು ಸುವ್ಯವಸ್ಥೆ ಬಲಪಡಿಸಲು,  ಪೊಲೀಸ್‌ ವ್ಯವಸ್ಥೆಯ ಆಧುನೀಕರಣ ಸೇರಿದಂತೆ ಹಲವು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಈ ಯೋಜನೆ ನೆರವಾಗಲಿದೆ. 

Advertisement

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಭದ್ರತಾ ವ್ಯವಹಾರಗಳಿಗಾಗಿನ ಕೇಂದ್ರ ಸಂಪುಟ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪೊಲೀಸ್‌ ಪಡೆಗಳ ಆಧುನೀಕರಣ (ಎಂಪಿಎಫ್) ಅದನ್ನು ಜಾರಿ ಮಾಡಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಆಂತರಿಕ ಭದ್ರತೆಗಾಗಿ 25,060 ಕೋಟಿ ರೂ. ಭಾರಿ ಮೊತ್ತವನ್ನು ನಿಗದಿ ಮಾಡಿರುವುದು ಇದೇ ಮೊದಲು. 2019-20ನೇ ವರ್ಷದ ವರೆಗೆ ಈ ಯೋಜನೆಯನ್ವಯ ಪೊಲೀಸ್‌ ಪಡೆಗಳ ಆಧುನೀಕರಣಕ್ಕೆ ಮೊತ್ತವನ್ನು ವಿನಿಯೋಗ ಮಾಡಲಾಗುತ್ತದೆ. ಕೇಂದ್ರ ಸರಕಾರ 18,636 ಕೋಟಿ ನೀಡಿದರೆ, ರಾಜ್ಯಗಳು 6,424 ಕೋಟಿ ರೂ. ಪಾಲು ನೀಡಬೇಕಾಗುತ್ತದೆ.

ಮಹಿಳೆಯರ ಸುರಕ್ಷತೆಗೆ ಆದ್ಯತೆ: ಪೊಲೀಸ್‌ ಇಲಾಖೆ ಅತ್ಯಾಧುನಿಕ ಆಯುಧಗಳು, ಮಹಿಳೆಯರಿಗೆ ರಕ್ಷಣೆ, ತುರ್ತು ಸಂದರ್ಭಗಳಲ್ಲಿ ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ಪಡೆಯುವುದು, ಪೊಲೀಸ್‌ ವೈರ್‌ಲೆಸ್‌ ವ್ಯವಸ್ಥೆ ಮೇಲ್ದರ್ಜೆಗೆ ಏರಿಸುವಿಕೆ, ರಾಷ್ಟ್ರೀಯ ಉಪಗ್ರಹ ಜಾಲ ವ್ಯವಸ್ಥೆ ಸೇರಿದಂತೆ ಹಲವು ವಿಶೇಷ ವ್ಯವಸ್ಥೆಗಳನ್ನು ಮಾಡಲು ಅದು ನೆರವಾಗಲಿದೆ.ಜಮ್ಮು ಮತ್ತು ಕಾಶ್ಮೀರ, ನಕ್ಸಲೀಯ ಸಮಸ್ಯೆ ಹೆಚ್ಚಾಗಿರುವ ರಾಜ್ಯಗಳಿಗೆ ವಿಶೇಷ ನೆರವು ರೂಪಿಸುವ ನಿಟ್ಟಿನಲ್ಲಿ 10, 132 ಕೋಟಿ ರೂ. ಮೀಸಲು ಇರಿಸಲಾಗಿದೆ. 100 ಕೋಟಿ ರೂ.ಗಳನ್ನು ಪೊಲೀಸ್‌ ಇಲಾಖೆಯ ಮೂಲ ಸೌಲಭ್ಯ ಮೇಲ್ದರ್ಜೆಗೆ ಏರಿಸುವಿಕೆ, ತರಬೇತಿ ಸಂಸ್ಥೆಗಳ ಸುಧಾರಣೆ, ತನಿಖೆ ಕೈಗೊಳ್ಳಲು ಬೇಕಾದ ವ್ಯವಸ್ಥೆಗಳನ್ನು ಪೂರೈಸಲು ಬಳಕೆ ಮಾಡಲಾಗುತ್ತದೆ. 

ವಿಶೇಷ ಯೋಜನೆ: ನಕ್ಸಲೀಯ ಪಿಡುಗು ಇರುವ 35 ಜಿಲ್ಲೆಗಳಿಗೆ 3 ಸಾವಿರ ಕೋಟಿ ರೂ. ಮೊತ್ತದ ವಿಶೇಷ ಯೋಜನೆಯನ್ನೂ ಆರಂಭಿಸಲು ಭದ್ರತಾ ಸಮಿತಿ ಒಪ್ಪಿಗೆ ನೀಡಿದೆ. ಇಂಥ ಕ್ರಮಗಳ ಮೂಲಕ ರಾಜ್ಯಗಳ ಪೊಲೀಸ್‌ ಇಲಾಖೆಗಳ ಬಲವರ್ಧನೆಗೆ ಕ್ರಮ ಕೈಗೊಳ್ಳಲು ಕೇಂದ್ರ ಉದ್ಯುಕ್ತವಾಗಿದೆ.

ಕಂಟೋನ್ಮೆಂಟ್‌ಗಳಲ್ಲಿ ಟವರ್‌ ಅನುಮತಿ 
ದೇಶಾದ್ಯಂತ ಮೊಬೈಲ್‌ ಸಂಪರ್ಕ ವೃದ್ಧಿಗಾಗಿ ಸೇನಾಪಡೆಗಳು ಹೆಚ್ಚಾಗಿರುವ ಕಂಟೋನ್ಮೆಂಟ್‌ ಪ್ರದೇಶಗಳಲ್ಲಿಯೂ ಟವರ್‌ಗಳನ್ನು ಸ್ಥಾಪಿಸಲು ಸರಕಾರ ಅನುಮತಿ ನೀಡಿದೆ. ಕೇಂದ್ರ ದೂರಸಂಪರ್ಕ ಸಚಿವ ರವಿಶಂಕರ ಪ್ರಸಾದ್‌ ಈ ಮಾಹಿತಿ ನೀಡಿದ್ದಾರೆ. ದೂರಸಂಪರ್ಕ ಕಂಪನಿಗಳು ಟವರ್‌ ಅಳವಡಿಸಲು ಸ್ಥಳಾವಕಾಶದ ಕೊರತೆ ಬಗ್ಗೆ ಪ್ರಸ್ತಾಪಿಸಿದ್ದ ಹಿನ್ನೆಲೆಯಲ್ಲಿ ಈಕ್ರಮ ಕೈಗೊಳ್ಳಲಾಗಿದೆ. 

Advertisement

ನಿವೃತ್ತಿ ವಯಸ್ಸು ಏರಿಕೆ: ಮತ್ತೂಂದು ಪ್ರಮುಖ ನಿರ್ಣಯದಲ್ಲಿ ಕೇಂದ್ರದ ಆಯುಷ್‌ ಇಲಾಖೆಯ ವೈದ್ಯರ ನಿವೃತ್ತಿ ವಯಸ್ಸನ್ನು 65ಕ್ಕೆ ಏರಿಸಲಾಗಿದೆ.

25,060: ಕೋಟಿ ರೂ. ಆಂತರಿಕ ಭದ್ರತೆಗೆ ಒದಗಿಸಲಾಗಿರುವ ಮೊತ್ತ
03ವರ್ಷ: 2017  -18 ರಿಂದ 18-19 ಯೋಜನೆಯ ಅವಧಿ
18,636: ಕೋಟಿ ರೂ. ಕೇಂದ್ರ ಸರಕಾರದ ಪಾಲು
6,42: 4 ಕೋಟಿ ರೂ. ರಾಜ್ಯ ಸರಕಾರಗಳ ಪಾಲು
100: ಕೋಟಿ ರೂ. ಪೊಲೀಸ್‌ ವ್ಯವಸ್ಥೆ ಅಭಿವೃದ್ಧಿಗೆ
3,000 : ಕೋಟಿ ರೂ. ನಕ್ಸಲ್‌ ಪೀಡಿತ 35 ಜಿಲ್ಲೆಗಳಿಗೆ ವಿಶೇಷ ಅನುದಾನ

ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ರಾಜನಾಥ್‌ ಸಿಂಗ್‌ ವಾಚ್‌ ತೋರಿಸಿ ಕಾನೂನು ಸಚಿವ ರವಿಶಂಕರ ಪ್ರಸಾದ್‌ಗೆ ಎಷ್ಟು ಹೊತ್ತಿನ ಸುದ್ದಿಗೋಷ್ಠಿ ಎಂದು ಹೇಳುತ್ತಿರುವಂತಿದೆ.
 

Advertisement

Udayavani is now on Telegram. Click here to join our channel and stay updated with the latest news.

Next