ಬೆಂಗಳೂರು: ರಾಜಧಾನಿಯ ನಾಗರಿಕರ ಬಹು ನಿರೀಕ್ಷಿತ ಬೆಂಗಳೂರು “ಉಪನಗರ ರೈಲು ಯೋಜನೆ 1ಎ’ ಅನುಷ್ಠಾನಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, 2018-19 ಮತ್ತು 2019-20ರ ಅವಧಿಯಲ್ಲಿ ಯೋಜನೆಗೆ 349 ಕೋಟಿ ರೂ. ಬಿಡುಗಡೆ ಮಾಡಲು ನಿರ್ಧರಿಸಿದೆ.
ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಸಬ್ ಅರ್ಬನ್ ರೈಲು ಸೇವೆ ಜಾರಿಗೆ ಈಗಾಗಲೇ ರೈಲ್ವೆ ಇಲಾಖೆ ಒಪ್ಪಿದ್ದು, 11 ರೈಲ್ವೆ ನೆಟ್‌ವರ್ಕ್‌ಗಳನ್ನು ಆರಂಭಿಸಲು 1745 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ. ಅದರಂತೆ ರಾಜ್ಯ
ಸರ್ಕಾರ ಭೂಸ್ವಾಧೀನ ಮಾಡಿಕೊಂಡು ಕಾಮಗಾರಿ ಆರಂಭಿಸಬೇಕು. ನಂತರ ರೈಲ್ವೆ ಇಲಾಖೆ ತನ್ನ ಪಾಲಿನ ಹಣ ಬಿಡುಗಡೆ ಮಾಡಲಿದೆ. ಈ ಹಿನ್ನೆಲೆಯಲ್ಲಿ ಯೋಜನೆ ಜಾರಿಗೆ 2018-19 ಮತ್ತು 2019-20ರ ಅವಧಿಯಲ್ಲಿ ರಾಜ್ಯ ಸರ್ಕಾರ ತನ್ನ ಪಾಲು, 349 ಕೋಟಿ ರೂ. ಒದಗಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮೂರು ವರ್ಷದ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸಬೇಕಿದೆ. ಯೋಜನೆಗೆ ಅಗತ್ಯವಿರುವ ಭೂಮಿ ಸ್ವಾಧೀನ ಪ್ರಕ್ರಿಯೆ ರಾಜ್ಯ ಸರ್ಕಾರದಿಂದಲೇ ನಡೆಯಲಿದೆ.
ಕಾಮಗಾರಿ ಆರಂಭದಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ವೆಚ್ಚ ಮಾಡಲಿದ್ದು, ನಂತರ ರೈಲ್ವೆ ಇಲಾಖೆಯಿಂದ ಅನುದಾನ ಬಿಡುಗಡೆಯಾಗುತ್ತದೆ. ಸಬ್‌ಅರ್ಬನ್ ರೈಲು ಸಂಚಾರ ಆರಂಭವಾದ ನಂತರ ಪ್ರತಿ ನಿತ್ಯ 58 ರೈಲುಗಳು, 116 ಟ್ರಿಪ್‌ನಲ್ಲಿ ಸೇವೆ ಒದಗಿಸಲಿದ್ದು, ಪ್ರತಿ ರೈಲಿನಲ್ಲಿ 1800ರಿಂದ 2000 ಮಂದಿ ಪ್ರಯಾಣಿಸಲು ಅವಕಾಶವಿರಲಿದೆ,’ ಎಂದು ಹೇಳಿದರು.
ಅಡಾಪ್ಟಿವ್ ಟ್ರಾಫೀಕ್ ಕಂಟ್ರೋಲ್: ಬೆಂಗಳೂರಿನಲ್ಲಿ ಸಂಚಾರ ವ್ಯವಸ್ಥೆ ಉನ್ನತೀಕರಿಸಲು ನೂತನ ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಂ ಅಳವಡಿಸಲು ಬಿ ಟ್ರ್ಯಾಕ್ ಯೋಜನೆಯಡಿ 85 ಕೋಟಿ ರೂ. ಮೊತ್ತದ ಕೆಲಸಗಳಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಬಿ-ಟ್ರ್ಯಾಕ್ ಯೋಜನೆಯಡಿ ನಗರದಲ್ಲಿ ಸಿಂಕ್ರೊನೈಸ್ಡ್ ಪಾದಚಾರಿ ಲೈಟ್‌ಗಳು ಮತ್ತು ರಸ್ತೆ ಪರಿಕರಗಳನ್ನು ಒಳಗೊಂಡಂತೆ ಪ್ರಸ್ತುತ ಇರುವ 363 ಟ್ರಾಫಿಕ್ ಸಿಗ್ನಲ್‌ಗಳ ಉನ್ನತೀಕರಣ, ಅಳವಡಿಕೆ ಮತ್ತು ನಿರ್ವಹಣೆ ಕೈಗೆತ್ತಿಕೊಳ್ಳಲಾಗುವುದು ಎಂದರು.
ಮೊದಲ ಹಂತದ ಮಾರ್ಗಗಳು
ಬೆಂಗಳೂರು-ಮಂಡ್ಯ 92.88 ಕಿ.ಮೀ
ಬೆಂಗಳೂರು-ಯಶವಂತಪುರ 5.35 ಕಿ.ಮೀ
ಯಶವಂತಪುರ-ತುಮಕೂರು 64 ಕಿ.ಮೀ
ಯಶವಂತಪುರ-ಯಲಹಂಕ 12.45 ಕಿ.ಮೀ
ಯಲಹಂಕ-ಬೈಯಪನಹಳ್ಳಿ 19.23 ಕಿ.ಮೀ
ಯಶವಂತಪುರ-ಬೈಯಪ್ಪನಹಳ್ಳಿ 16.12 ಕಿ.ಮೀ
ಯಲಹಂಕ-ದೊಡ್ಡಬಳ್ಳಾಪುರ 20.72 ಕಿ.ಮೀ
ಯಲಹಂಕ-ಚಿಕ್ಕಬಳ್ಳಾಪುರ 46.05 ಕಿ.ಮೀ
ಬೈಯಪನಹಳ್ಳಿ-ಹೊಸೂರು 48.59 ಕಿ.ಮೀ
ಬೆಂಗಳೂರು-ಬಂಗಾರಪೇಟೆ 70.21 ಕಿ.ಮೀ
ಸೋಲದೇನಹಳ್ಳಿ-ಕುಣಿಗಲ್ 45.2 ಕಿ.ಮೀ