Advertisement

ಏರಪೋರ್ಟ್‌ ಮೆಟ್ರೋಗೆ ಸಂಪುಟ ಸಮ್ಮತಿ

12:23 PM Dec 12, 2017 | Team Udayavani |

ಬೆಂಗಳೂರು: ಬಹುನಿರೀಕ್ಷಿತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವ ಯೋಜನೆಗೆ ಸೋಮವಾರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. 5,940 ಕೋಟಿ ರೂ. ವೆಚ್ಚದಲ್ಲಿ, 26 ಕಿ.ಮೀ ಉದ್ದದ ಮೆಟ್ರೋ ಮಾರ್ಗ ನಿರ್ಮಾಣವನ್ನು 42 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

Advertisement

ಚುನಾವಣೆಗೂ ಮೊದಲೇ ಯೋಜನೆಗೆ ಚಾಲನೆ ನೀಡುವ ಸಾಧ್ಯತೆ ಇದೆ. ನಾಗವಾರದಿಂದ ಆರಂಭಗೊಳ್ಳುವ ಮೆಟ್ರೋ ಮಾರ್ಗ, ಜಕ್ಕೂರು ಮೂಲಕ ಬಳ್ಳಾರಿ ರಸ್ತೆಗೆ ಸೇರಿ, ಅಲ್ಲಿಂದ ಜಿಕೆವಿಕೆ, ಯಲಹಂಕ ವಾಯುನೆಲೆ ಮೂಲಕ ವಿಮಾನ ನಿಲ್ದಾಣ ತಲುಪುತ್ತದೆ. ಯಲಹಂಕ ವಾಯುನೆಲೆವರೆಗೆ ಎತ್ತರಿಸಿದ ಮಾರ್ಗ, ಬಳಿಕ ನೆಲಮಟ್ಟದ ಮಾರ್ಗದಲ್ಲಿ ರೈಲು ಸಂಚರಿಸಲಿದೆ.

ಸರಂಜಾಮುಗಳಿಗೆ ಸ್ಥಳ ಮೀಸಲು: ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಸಂಚರಿಸುವ ಮೆಟ್ರೋ ರೈಲುಗಳು, ಆರು ಬೋಗಿ ಹೊಂದಿರಲಿದ್ದು, ಹೆಚ್ಚು ತೂಕದ ಸಾಮಾನು, ಸರಂಜಾಮು ಸಂಗ್ರಹಿಸಿಡಲು ಬೋಗಿಗಳಲ್ಲಿ ಮೀಸಲು ಸ್ಥಳವಿರುತ್ತದೆ. ರೈಲುಗಳ ವೇಗ ಗಂಟೆಗೆ 60 ಕಿ.ಮೀ. ಇರಲಿದ್ದು, ಎರಡನೇ ಹಂತದಲ್ಲಿ ವೇಗ ಗಂಟೆಗೆ 34 ಕಿ.ಮೀ.ಗೆ ತಗ್ಗಲಿದೆ.

ರೈಲುಗಳ ನಿರ್ವಹಣೆಗಾಗಿ ಈ ಮಾರ್ಗದ ಎರಡೂ ಕೊನೆಯಲ್ಲಿ ಡಿಪೊಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ನಿರ್ಮಿಸುವ ಡಿಪೋಗೆ 28 ಸ್ಟೇಬ್ಲಿಂಗ್‌ ಲೈನ್‌ಗಳು, 4 ಇನ್‌ಸ್ಪೆಕ್ಷನ್‌ ಲೈನ್‌ಗಳು ಮತ್ತು 5 ದುರಸ್ತಿ ಲೈನ್‌ಗಳು ಮತ್ತು ಸಂಬಂಧಿತ ಸೌಲಭ್ಯಗಳನ್ನು ಒದಗಿಸುವ ಗುರಿ ಇದೆ. 

ಸಿಬಿಟಿಸಿ ವ್ಯವಸ್ಥೆ: ನಾಗವಾರ-ವಿಮಾನ ನಿಲ್ದಾಣಕ್ಕೆ ಸಂವಹನ ಆಧಾರಿತ ರೈಲು ನಿಯಂತ್ರಣ (ಸಿಬಿಟಿಸಿ) ವ್ಯವಸ್ಥೆ ಇರಲಿದೆ. ಇದರಿಂದ ಮೊದಲ ಹಂತ ಹಾಗೂ ವಿಸ್ತರಿಸಿದ ಮಾರ್ಗಕ್ಕಿಂತ ವೇಗವಾಗಿ ಮೆಟ್ರೋ ರೈಲು ಸಂಚರಿಸಲಿದೆ. ಪ್ರಸ್ತುತ ವ್ಯವಸ್ಥೆಯಲ್ಲಿ ಗರಿಷ್ಠ 3 ನಿಮಿಷಕ್ಕೊಂದು ರೈಲು ಸೇವೆ ಒದಗಿಸಲು ಸಾಧ್ಯವಿದೆ.

Advertisement

ಆದರೆ ಸಿಬಿಟಿಸಿ, ಸೆನ್ಸರ್‌ ಆಧಾರಿತ ಸಿಗ್ನಲಿಂಗ್‌ ಮತ್ತು ಟೆಲಿಸಂವಹನ ವ್ಯವಸ್ಥೆ ಹೊಂದಿರುವುದರಿಂದ 1.5 ನಿಮಿಷಕ್ಕೊಂದು ರೈಲು ಓಡಿಸಲು ಸಾಧ್ಯವಿದೆ. ಸದ್ಯ ಈ ವ್ಯವಸ್ಥೆ ಕೊಚ್ಚಿ ಮೆಟ್ರೋದಲ್ಲಿದೆ ಎಂದು ಬಿಎಂಆರ್‌ಸಿ ಅಧಿಕಾರಿಯೊಬ್ಬರು ತಿಳಿಸಿದರು.

ಹಣ ಹೊಂದಿಸುವಿಕೆ ಹೇಗೆ?: ನಾಗವಾರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಗತ್ಯವಿರುವ 5940 ರೂ. ಪೈಕಿ ಬಿಐಎಎಲ್‌ 1000 ಕೋಟಿ ರೂ., ರಾಜ್ಯ ಸರ್ಕಾರ 1250 ಕೋಟಿ ರೂ. ನೀಡಲಿದ್ದು, ಜಿಎಸ್ಟಿ ಮರುಪಾವತಿ ಮೂಲಕ 250 ಕೋಟಿ ರೂ. ಲಭ್ಯವಾಗಲಿದೆ. ಜತೆಗೆ ಕೇಂದ್ರ ಸರ್ಕಾರದಿಂದ 500 ಕೋಟಿ ರೂ. ನುದಾನ ಸಿಗಲಿದ್ದು, ಬಾಕಿ 3200 ಕೋಟಿ ರೂ. ಸಾಲ ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಮೊದಲ ವರ್ಷ ಸಿದ್ಧತೆಗೆ ಮೀಸಲು: ಅನುಮೋದನೆಗೊಂಡ ನಂತರ ಭೂಸ್ವಾಧೀನಕ್ಕೆ ಅಧಿಸೂಚನೆ, ಟೆಂಡರ್‌ ಆಹ್ವಾನ, ಟೆಂಡರ್‌ ಅಂತಿಮಗೊಳಿಸುವಿಕೆ ಮತ್ತು ಕಾಮಗಾರಿ ನೀಡುವ ಪ್ರಕ್ರಿಯೆಗಳು ಮೊದಲ 12 ತಿಂಗಳಲ್ಲಿ ಮುಗಿಯಲಿದ್ದು, ಉಳಿದ 30 ತಿಂಗಳಲ್ಲಿ ಸಿವಿಲ್‌ ಕಾಮಗಾರಿ ಮತ್ತು ಸಿಸ್ಟ್‌ಂ ಕಾಮಗಾರಿ ಪೂರ್ಣಗೊಳ್ಳಲಿವೆ ಎಂದು ಸಂಪುಟಕ್ಕೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ (ಪ್ರಭಾರ) ಮಹೇಂದ್ರ ಜೈನ್‌ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next