Advertisement

ಎಲೆಕೋಸು ಸೇವನೆಯಿಂದ ಹಲವು ಉಪಯೋಗ: ಕ್ಯಾಬೇಜ್‌ ಸವಿ

06:04 PM Oct 20, 2020 | |

ವಿಟಮಿನ್‌ “ಸಿ’ ಜೀವಸತ್ವ ಹೊಂದಿರುವ ಎಲೆಕೋಸನ್ನು ಸಣ್ಣಗೆ ಹೆಚ್ಚಿ ಮಿತವಾಗಿ ಬೇಯಿಸಿ ಬಳಸುವುದರಿಂದ ಜೀವಸತ್ವ ನಾಶವಾಗಲಾರದು. ಹೊಟ್ಟೆಹುಣ್ಣು, ಮೂಲವ್ಯಾಧಿ, ವಸಡಿನಿಂದಾಗುವ ರಕ್ತಸ್ರಾವ ಇತ್ಯಾದಿ ತೊಂದರೆಗಳಿರುವವರಿಗೆ ಇದರ ಸೇವನೆಯಿಂದ ಬಹಳ ಉಪಯೋಗ. ಇಲ್ಲಿವೆ ಕೆಲವು ರಿಸಿಪಿ.

Advertisement

ಕ್ಯಾಬೇಜ್‌ ರೊಟ್ಟಿ
ಬೇಕಾಗುವ ಸಾಮಗ್ರಿ :
ಬೆಳ್ತಿಗೆ ಅಕ್ಕಿ- ಎರಡು ಕಪ್‌, ತೆಂಗಿನ ತುರಿ- ಮುಕ್ಕಾಲು ಕಪ್‌, ಸಣ್ಣಗೆ ಹೆಚ್ಚಿದ ಕ್ಯಾಬೇಜ್‌- ಒಂದು ಕಪ್‌, ಹೆಚ್ಚಿದ ಕರಿಬೇವು – ಹತ್ತು ಚಮಚ, ಹೆಚ್ಚಿದ ನೀರುಳ್ಳಿ- ಅರ್ಧ ಕಪ್‌, ಹುಣಸೆಹುಳಿ- ಒಂದು ಚಮಚ,  ಹಸಿಮೆಣಸು- ಎರಡು, ಶುಂಠಿತರಿ- ಒಂದು ಚಮಚ, ಉಪ್ಪು$ರುಚಿಗೆ ಬೇಕಷ್ಟು.

ಮಸಾಲೆಗೆ: ಧನಿಯಾ- ಎರಡು ಚಮಚ, ಉದ್ದಿನಬೇಳೆ- ಎರಡು ಚಮಚ, ಇಂಗಿನ ಪುಡಿ- ಒಂದು ಚಮಚ, ಜೀರಿಗೆ- ಕಾಲು ಚಮಚ, ಅರಸಿನ- ಕಾಲು ಚಮಚ, ಕೆಂಪುಮೆಣಸು- ಆರು.

ತಯಾರಿಸುವ ವಿಧಾನ: ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಮೇಲೆ ತಿಳಿಸಿದ ಮಸಾಲೆಗಳನ್ನು ಘಂ ಎಂದು ಹುರಿದು, ಉಪ್ಪು-ಹುಳಿಯ ಜೊತೆ ಕಾಯಿತುರಿಗೆ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಇದಕ್ಕೆ ನೆನೆಸಿದ ಅಕ್ಕಿ ಸೇರಿಸಿ ಬಾಂಬೆ ರವೆಯ ಹದಕ್ಕೆ ರುಬ್ಬಿ ಮಿಕ್ಸಿಂಗ್‌ ಬೌಲ್‌ಗೆ ಹಾಕಿ. ಇದಕ್ಕೆ ನೀರುಳ್ಳಿ, ಹಸಿಮೆಣಸು, ಕರಿಬೇವು, ಶುಂಠಿತರಿ, ಕ್ಯಾಬೇಜ್‌ ಹಾಗೂ ಬೇಕಷ್ಟು ನೀರು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಹಿಟ್ಟು ದೋಸೆ ಹಿಟ್ಟಿಗಿಂತ ಸ್ವಲ್ಪ$ ದಪ್ಪವಿರಲಿ. ಕಾದ ಕಾವಲಿಗೆಯಲ್ಲಿ ದೋಸೆ ಹಾಕಿ ತುಪ್ಪಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿ. ಕಾಯಿ ಚಟ್ನಿ ಅಥವಾ ಬೆಣ್ಣೆ ಜೊತೆ ಸವಿಯಬಹುದು. ದೋಸೆ ಹಿಟ್ಟಿಗೆ ಸಿಹಿ ಬೇಕಿದ್ದವರು ಸ್ವಲ್ಪ ಬೆಲ್ಲ ಮಿಶ್ರಮಾಡಬಹುದು.

ಕಟ್ಲೆಟ್‌
ಬೇಕಾಗುವ ಸಾಮಗ್ರಿ:
ಕ್ಯಾಬೇಜ್‌ ಚೂರು- ಒಂದು ಕಪ್‌, ಬೇಯಿಸಿ ಮ್ಯಾಶ್‌ ಮಾಡಿದ ಆಲೂಗಡ್ಡೆ – ಒಂದು ಕಪ್‌, ಶುಂಠಿ ತರಿ- ಮೂರು ಚಮಚ, ಹೆಚ್ಚಿದ ಹಸಿಮೆಣಸು- ನಾಲ್ಕು, ನೀರುಳ್ಳಿ- ಎರಡು, ಕೊತ್ತಂಬರಿಸೊಪ್ಪು- ಆರು ಚಮಚ, ಕಡ್ಲೆಬೇಳೆ – ನಾಲ್ಕು ಚಮಚ, ಕಾರ್ನ್ಫ್ಲೋರ್‌- ನಾಲ್ಕು ಚಮಚ, ಗರಂಮಸಾಲ- ಎರಡು ಚಮಚ, ರಸ್ಕ್ನ ಪುಡಿ- ಎಂಟು ಚಮಚ,  ಉಪ್ಪು ರುಚಿಗೆ.

Advertisement

ತಯಾರಿಸುವ ವಿಧಾನ: ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಚಿಟಿಕಿ ಇಂಗು ಅರಸಿನ ನಂತರ ನೀರುಳ್ಳಿ, ಹಸಿಮೆಣಸು, ಶುಂಠಿ ಮತ್ತು ಕೊತ್ತಂಬರಿಸೊಪ್ಪು ಸೇರಿಸಿ ಬಾಡಿಸಿಕೊಳ್ಳಿ. ಮೊದಲೇ ಆವಿಯಲ್ಲಿ ಬೇಯಿಸಿದ ಕ್ಯಾಬೇಜ್‌ನ್ನು ಇದಕ್ಕೆ ಸೇರಿಸಿ ಮಿಶ್ರಮಾಡಿ ಒಲೆಯಿಂದ ಇಳಿಸಿ. ನಂತರ ಇದಕ್ಕೆ ಮ್ಯಾಶ್‌ಮಾಡಿದ ಆಲೂಗಡ್ಡೆ,  ಕಾರ್ನ್ಫ್ಲೋರ್‌ ಗರಂಮಸಾಲ ಮತ್ತು ಬೇಕಷ್ಟು ಉಪ್ಪು$ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ವಡೆಯ ತರ ಕೈಯಲ್ಲಿ ತಟ್ಟಿ ರಸ್ಕ್ನ ಪುಡಿಯಲ್ಲಿ ಮುಳುಗಿಸಿ ಕಾದ ತವಾದಲ್ಲಿ  ತುಪ್ಪ ಹಾಕಿ ಎರಡೂ ಬದಿ ಬೇಯಿಸಿ. ಟೊಮೆಟೋ ಸಾಸ್‌ ಜೊತೆ ಸರ್ವ್‌ ಮಾಡಬಹುದು.

ಕ್ಯಾಬೇಜ್‌ ಪಕೋಡಾ
ಬೇಕಾಗುವ ಸಾಮಗ್ರಿ:
ಕ್ಯಾಬೇಜ್‌ ಚೂರು- ಅರ್ಧ ಕಪ್‌, ನೀರುಳ್ಳಿ – ಎಂಟು ಚಮಚ, ಕಡ್ಲೆಹಿಟ್ಟು – ಒಂದು ಕಪ್‌, ಅಕ್ಕಿ ಹಿಟ್ಟು – ಕಾಲು ಕಪ್‌, ಸಾರಿನ ಪುಡಿ- ಎರಡು ಚಮಚ, ಖಾರಪುಡಿ- ಒಂದು ಚಮಚ, ಇಂಗಿನಪುಡಿ- ಒಂದು ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ – ಎರಡು ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಮಿಕ್ಸಿಂಗ್‌ ಬೌಲ್‌ನಲ್ಲಿ ಅಕ್ಕಿ ಮತ್ತು ಕಡ್ಲೆಹಿಟ್ಟನ್ನು ಇಂಗು, ಮೆಣಸಿನ ಪುಡಿ, ಖಾರ ಪುಡಿ ಉಪ್ಪು ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಮತ್ತು ಸ್ವಲ್ಪ ನೀರು ಸೇರಿಸಿ ಮಿಶ್ರಮಾಡಿ. ನಂತರ ಇದಕ್ಕೆ ಹೆಚ್ಚಿದ ನೀರುಳ್ಳಿ ಮತ್ತು ಕ್ಯಾಬೇಜ್‌ ಚೂರುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಕಾದ ಎಣ್ಣೆಗೆ, ಕೈಯಲ್ಲಿ ಸ್ವಲ್ಪ ಸ್ವಲ್ಪ ಹಿಟ್ಟು ಹಾಕಿ ಗರಿಗರಿಯಾಗಿ ಬೇಯಿಸಿದರೆ ಪಕೋಡಾ ಸವಿಯಲು ರೆಡಿ.

ಕ್ಯಾಬೇಜ್‌ ವಡೆ
ಬೇಕಾಗುವ ಸಾಮಗ್ರಿ:
ಸಣ್ಣಗೆ ಹಚ್ಚಿದ ಎಲೆಕೋಸು- ಒಂದು ಕಪ್‌, ಅಕ್ಕಿ ಹುಡಿ- ಒಂದು ಕಪ್‌, ಕಡ್ಲೆಬೇಳೆ- ಒಂದು ಕಪ್‌, ಚಿರೋಟಿ ರವೆ- ಒಂದು ಕಪ್‌, ತೆಂಗಿನತುರಿ- ಒಂದು ಕಪ್‌,  ಹೆಚ್ಚಿದ ಈರುಳ್ಳಿ – ಅರ್ಧ ಕಪ್‌, ಹೆಚ್ಚಿದ ಕರಿಬೇವು- ಎಂಟು ಚಮಚ, ಹಸಿಮೆಣಸಿನಕಾಯಿ- ಐದು, ಸಾರಿನಪುಡಿ- ನಾಲ್ಕು ಚಮಚ, ಎಳ್ಳು- ಕಾಲು ಚಮಚ, ಇಂಗಿನಪುಡಿ- ಒಂದು ಚಮಚ,  ಉಪ್ಪು ರುಚಿಗೆ.

ತಯಾರಿಸುವ ವಿಧಾನ: ನೆನೆಸಿದ ಕಡ್ಲೆಬೇಳೆಯನ್ನು ನುಣ್ಣಗೆ ರುಬ್ಬಿ ಕೊನೆಗೆ ಚಿರೋಟಿರವೆ, ಕಾಯಿತುರಿ ಮತ್ತು ಅಕ್ಕಿಹುಡಿ ಸೇರಿಸಿ ಒಂದು ಸುತ್ತು ತಿರುಗಿಸಿ ಮಿಕ್ಸಿಂಗ್‌ ಬೌಲ್‌ಗೆ ಹಾಕಿ. ನಂತರ ಇದಕ್ಕೆ ಈರುಳ್ಳಿ, ಕ್ಯಾಬೇಜ್‌, ಹಸಿಮೆಣಸು ಇವುಗಳನ್ನು ಸೇರಿಸಿ ಮಿಶ್ರಮಾಡಿ. ಕೊನೆಗೆ ಕರಿಬೇವು, ಕೊತ್ತಂಬರಿಸೊಪ್ಪು, ಸಾರಿನಪುಡಿ, ಎಳ್ಳು, ಉಪ್ಪು ಇತ್ಯಾದಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ನಂತರ, ನಾಲ್ಕು ಚಮಚ ಬಿಸಿ ಎಣ್ಣೆ ಸೇರಿಸಿ ಮಿಶ್ರಮಾಡಿ ವಡೆಯ ಹಿಟ್ಟಿನ ಹದಕ್ಕೆ ಕಲಸಿ ಪ್ಲಾಸ್ಟಿಕ್‌ ಹಾಳೆಗೆ ಎಣ್ಣೆ ಸವರಿ ಬೇಕಾದ ಗಾತ್ರಕ್ಕೆ ತೆಳ್ಳಗೆ ತಟ್ಟಿ  ಕಾದ ಎಣ್ಣೆಯಲ್ಲಿ ಕರಿಯಿರಿ. ಘಂ ಎನ್ನುವ ಸುವಾಸನೆಯ ಗರಿಗರಿ ವಡೆ ಸರ್ವ್‌ ಮಾಡಲು ರೆಡಿ.

Advertisement

Udayavani is now on Telegram. Click here to join our channel and stay updated with the latest news.

Next