ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬೆಂಬಲಿಸಿ ಭಾನುವಾರ ನಗರದ ಪುರಭವನದ ಮುಂಭಾಗ ಜನಜಾಗೃತಿ ಸಮಾವೇಶ ನಡೆಯಿತು. ಯುವ ಬ್ರಿಗೇಡ್, ನಿಲುಮೆ, ಉತ್ಕೃಷ್ಟ ಭಾರತ, ಭಾರತ್ ರಕ್ಷಕ್, ಭಜರಂಗದಳ, ಸಿಸ್ಟರ್ ನಿವೇದಿತ ಪ್ರತಿಷ್ಠಾನ ಸೇರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪೌರತ್ವ ಕಾಯ್ದೆಯನ್ನು ಬೆಂಬಲಿಸಿ, ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ, ಪೌರತ್ವ ಕಾಯ್ದೆ ದೇಶದ ಯಾವುದೇ ನಾಗರಿಕನಿಗೂ ತೊಂದರೆ ಉಂಟು ಮಾಡುವುದಿಲ್ಲ. ನಿಜವಾದ ದೇಶಿವಾಸಿಗಳು ಆತಂಕ ಪಡಬೇಕಾಗಿಲ್ಲ. ನುಸುಳುಕೋರರನ್ನು ಹಿಮ್ಮೆಟ್ಟಿಸುವುದರಿಂದ ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳಿಗೇಕೆ ಭಯ ಉಂಟಾಗಿದೆ ಎಂದು ಪ್ರಶ್ನಿಸಿದರು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ಜಾರಿಗೊಳಿಸಿಲ್ಲ. ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಿಂದ ವಲಸೆ ಬಂದು ನೆಲೆಸಿರುವ ನುಸುಳುಕೋರರಿಗೆ ಕಡಿವಾಣ ಹಾಕಲು ತಿದ್ದುಪಡಿ ತರಲಾಗಿದೆ. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಬಹುಮತದಿಂದ ಕಾಯ್ದೆ ಜಾರಿಯಾಗಿದೆ. ಮುಸ್ಲಿಂ ಮತಗಳು ಕೈ ತಪ್ಪುವ ಭೀತಿಯಿಂದ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು ಷಡ್ಯಂತ್ರ ರೂಪಿಸಿವೆ.
ಪೌರತ್ವ ಕಾಯ್ದೆ ಮತ್ತು ನಾಗರಿಕ ನೋಂದಣಿ ಪ್ರತ್ಯೇಕವಾದವು, ಇದರ ಅರಿವಿಲ್ಲದೇ ವಿನಾಕಾರಣ ಆರೋಪ ಮಾಡಲಾಗುತ್ತಿದೆ ಎಂದರು. ಹಿಂದೂ ಸಂಘಟನೆಯ ಡಾ.ಗಿರಿಧರ್ ಉಪಾಧ್ಯಾಯ ಮಾತನಾಡಿ, ಅನ್ಯ ರಾಷ್ಟ್ರಗಳಲ್ಲಿ ಹಿಂದೂಗಳು ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡು ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕರಿಸಿದೆ. ಇದರಿಂದ ಮೂಲ ಮುಸ್ಲಿಮರು ಸೇರಿದಂತೆ ಭಾರತದ ಎಲ್ಲ ಜನಾಂಗದವರಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ.
ಬದಲಾಗಿ ಅಕ್ರಮವಾಗಿ ದೇಶದ ಒಳ ಪ್ರವೇಶಿಸಿರುವ ನುಸುಳುಕೋರರಿಗೆ ತೊಂದರೆ ಆಗಲಿದೆ. ಆದರೆ, ಕಾಂಗ್ರೆಸ್ ಮಾಹಿತಿಯನ್ನು ತಿರುಚಿ ಪ್ರತಿಭಟನೆಗೆ ಉತ್ತೇಜನೆ ನೀಡುವ ಮೂಲಕ ನೀಚ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು. ಸಮಾವೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಜೈಕಾರ ಕೂಗಲಾಯಿತು. ವಿವಿಧ ಸಂಘಟನೆಯ ಕಾರ್ಯಕರ್ತರು ಸಮಾವೇಶದ ಭದ್ರತೆಗೆ ನಿಯೋಜನೆಗೊಂಡ ಪೊಲೀಸರಿಗೆ ಗುಲಾಬಿ ಹೂ ನೀಡಿ ಅಭಿನಂದಿಸಿದರು.
ಪಶ್ಚಿಮ ಬಂಗಾಳ, ಅಸ್ಸಾಂ ಸೇರಿ ಈಶಾನ್ಯ ರಾಜ್ಯಗಳಲ್ಲಿನ ಜನರು ಅಲ್ಪಸಂಖ್ಯಾತರಾಗಿದ್ದು, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಿಂದ ಬಂದ ನುಸುಳುಕೋರರು ಬಹುಸಂಖ್ಯಾತರಾಗಿದ್ದಾರೆ. ಈ ಕಾಯ್ದೆಯಿಂದ ನಮ್ಮ ನಾಗರಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
-ಚಕ್ರವರ್ತಿ ಸೂಲಿಬೆಲೆ, ಯುವಬ್ರಿಗೇಡ್
1947ರಲ್ಲಿ ಪಾಕಿಸ್ತಾನದಲ್ಲಿ ಶೇ.23 ರಷ್ಟು ಹಿಂದೂಗಳಿದ್ದರು. ಆದರೀಗ ಶೇ.2ರಷ್ಟು ಇದ್ದಾರೆ. ಬಾಂಗ್ಲಾದೇಶದಲ್ಲಿ ಶೇ.30ರಷ್ಟಿದ್ದ ಹಿಂದೂಗಳು ಶೇ.7ಕ್ಕೆ ಕುಸಿದಿದ್ದಾರೆ. ಹಾಗಾದರೆ ಉಳಿದ ಹಿಂದೂಗಳು ಏನಾದರು?.
-ಡಾ.ಗಿರಿಧರ್ ಉಪಾಧ್ಯಾಯ, ಹಿಂದೂಪರ ಸಂಘಟನೆ ಕಾರ್ಯಕರ್ತ
ಪೌರತ್ವ ತಿದ್ದುಪಡಿ ಕಾಯ್ದೆ ಭಾರ ತೀಯರ ಹಕ್ಕನ್ನು ಕಸಿದುಕೊಳ್ಳು ವುದಿಲ್ಲ. 2014ರ ಡಿ.31ಕ್ಕೂ ಮುನ್ನ ಪಾಕಿ ಸ್ತಾನ, ಅಫ್ಘಾನಿಸ್ತಾನದಿಂದ ಅನ್ಯಾಯಕ್ಕೊಳ ಗಾಗಿ ಭಾರತಕ್ಕೆ ವಲಸೆ ಬಂದ ಹಿಂದೂ, ಸಿಖ್, ಬೌದ್ಧರನ್ನು ಭಾರತೀಯರು ಎಂದು ಪರಿಗಣಿಸಲಾಗುವುದು. ಆದರೆ, ಕಾಂಗ್ರೆಸ್ ಜನರಲ್ಲಿ ತಪ್ಪು ಅರ್ಥ ಕಲ್ಪಿಸಿ ರಾಜಕೀಯ ಲಾಭ ಪಡೆಯಲು ಮುಂದಾಗಿದೆ.
-ಶಕುಂತಲಾ ಅಯ್ಯರ್, ಸಾಮಾಜಿಕ ಕಾರ್ಯಕರ್ತೆ