Advertisement

ಸಿಎಎ ಬೆಂಬಲಿಸಿ ಜನಜಾಗೃತಿ

12:08 PM Jan 04, 2020 | Suhan S |

ಬಸವಕಲ್ಯಾಣ: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ತಾಲೂಕು ಬಿಜೆಪಿ ಘಟಕದ ವತಿಯಿಂದ ಶುಕ್ರವಾರ ನಗರದ ವಿವಿಧ ಸ್ಥಳಗಳಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ನಗರದ ತ್ರಿಪುರಾಂತ ಪ್ರವಾಸಿ ಮಂದಿರ ಹತ್ತಿರದ ಶ್ರೀ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಅಶೋಕ ವಕಾರೆ ಹಾಗೂ ನಗರಾಧ್ಯಕ್ಷ ಕೃಷ್ಣಾ ಗೋಣೆ ಜನಜಾಗೃತಿಗೆ ಚಾಲನೆ ನೀಡಿದರು.

Advertisement

ಈ ವೇಳೆ ಅಶೋಕ ವಕಾರೆ ಮಾತನಾಡಿ, ಪ್ರಧಾನಿ ಮೋದಿ ಅವರು ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕೆಲ ಸಮಾಜಘಾತುಕ ಶಕ್ತಿಗಳು ದೇಶದಲ್ಲಿ ಅಪಪ್ರಚಾರ ಮಾಡಿ ಶಾಂತಿ ಕದಡುವ ಕೆಲಸ ಮಾಡುತ್ತಿವೆ. ಸಿಎಎಯಿಂದ ರಾಷ್ಟ್ರದಲ್ಲಿನ ಮುಸ್ಲಿಂ ಬಾಂಧವರಿಗೆ ಯಾವುದೇ ತೊಂದರೆ ಇಲ್ಲ. ಆದ್ದರಿಂದ, ಈ ಕಾಯ್ದೆ ಕುರಿತು ಜನರಿಗೆ ಮತ್ತಷ್ಟು ತಿಳಿ ಹೇಳುವ ಉದ್ದೇಶದಿಂದ ನಾವು ಮನೆಮನೆಗಳಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.

ಕೃಷ್ಣಾ ಗೋಣೆ ಮಾತನಾಡಿ, ನೆರೆ ದೇಶಗಳಾದ ಪಾಕಿಸ್ತಾನ್‌, ಅಫಘಾನಿಸ್ತಾನ್‌ ಮತ್ತು ಬಾಂಗ್ಲಾ ದೇಶಗಳಿಂದ ಭಾರತಕ್ಕೆವಲಸೆ ಬಂದ ಧಾರ್ಮಿಕ ಅಲ್ಪಸಂಖ್ಯಾತರನ್ನು ಕಾಪಾಡುವ ನಿಟ್ಟಿನಲ್ಲಿ ರಚನೆಯಾದ ಕಾಯ್ದೆ ಇದಾಗಿದ್ದು, ಇದರ ಪ್ರಕಾರ ನೆರೆ ರಾಷ್ಟರಗಳಿಂದ ವಲಸೆ ಬಂದ ಹಿಂದೂ, ಸಿಖ್‌, ಪಾರ್ಸಿ, ಕ್ರೈಸ್ತ, ಬೌದ್ಧ, ಜೈನ ಮತ್ತು ಯಹೂದಿಗಳು ನಿಗದಿತ ದಾಖಲೆಗಳನ್ನು ಇಟ್ಟುಕೊಂಡು ಭಾರತದಲ್ಲಿ 11 ವರ್ಷಗಳು ನೆಲೆಸಿದರೆ ಅವರಿಗೆ ಭಾರತೀಯ ಪೌರತ್ವ ಕೊಡಲಾಗುತ್ತಿತ್ತು. ಈಗ ಎನ್‌ಡಿಎ ಸರ್ಕಾರ ಇದೇ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಆದ್ದರಿಂದ, ಮುಸ್ಲಿಂ ಬಾಂಧವರು ಸೇರಿದಂತೆ ಯಾವುದೇ ವದಂತಿಗಳಿಗೆ ಕಿವಿಗೊಡದೆ ಸಿಎಎ ಕಾಯ್ದೆಯನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ಇದು ದೇಶದ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಎಂದರು.

ಬಿಜೆಪಿ ಮುಖಂಡ ಶರಣು ಸಲಗರ ಮಾತನಾಡಿ, ಭವ್ಯ ಭಾರತಕ್ಕೆ ಸಿಎಎ ಬಲು ಸಹಾಯಕಾರಿಯಾಗಿದ್ದು, ಈ ಕುರಿತು ವಿವಿಧ ಸಂಘಟನೆಗಳು ಹಾಗೂ ಸಂಘ-ಸಂಸ್ಥೆಗಳು ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ತಿಳಿಸಿವೆ. ದೆಹಲಿಯ ಜಾಮಾ ಮಸೀದಿಯ ಮುಖ್ಯಸ್ಥರಾದ ಶಾಹಿ ಇಮಾಮ್‌ ಸೈಯದ್‌ ಅಹ್ಮದ್‌ ಬುಖಾರಿ ಅವರೂ ಕೂಡ ಸಿಎಎಯಿಂದ ಭಾರತೀಯ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ ಎಂದು ಅಭಯ ನೀಡಿದ್ದಾರೆ. ಹಾಗಾಗಿ, ಮುಸ್ಲಿಂ ಬಾಂಧವರು ಹೆದರಬೇಕಿಲ್ಲ.

ಸಿಎಎ ಕುರಿತಾಗಿರುವ ವದಂತಿಗಳನ್ನು ನಿರ್ಲಕ್ಷಿಸಿ. ತಮ್ಮ  ವೋಟ್‌ ಬ್ಯಾಂಕ್‌ ಕಾಪಾಡಿಕೊಳ್ಳುವ ಉದ್ದೇಶದಿಂದ ಕೆಲ ವಿರೋಧಿ ನಾಯಕರು ಸಿಎಎಯನ್ನು ಋಣಾತ್ಮಕವಾಗಿ ಬಳಸಿಕೊಳುತ್ತಿದ್ದಾರೆ ಎಂದು ಆರೋಪಿಸಿದರು. ನಂತರ ಮುಖಂಡರು ಹಾಗೂ ಕಾರ್ಯಕರ್ತರು ಪಾದಯಾತ್ರೆ ಮೂಲಕ ಮನೆ-ಮನೆಗೆ ತೆರಳಿ ಕರಪತ್ರ ವಿತರಣೆ ಮಾಡುವ ಮೂಲಕ ಜಾಗೃತಿ ಮೂಡಿಸಿದರು.

Advertisement

ಸೂರ್ಯಕಾಂತ ಚಿಲ್ಲಾಬಟ್ಟೆ, ಶೋಭಾ ತೆಲಂಗ್‌, ಮಹಾದೇವ ಹಲ್ಸೆ, ಸಂಜೀವ್‌ ಜಾಧವ್‌, ನಗರ ಪ್ರಧಾನ ಕಾರ್ಯದರ್ಶಿ ರವಿ ಸ್ವಾಮಿ ನಾರಾಯಣಪೂರ, ಮನೋಜ ತಂಬೂರ್ಚಿ, ನಗರಸಭೆ ಸದಸ್ಯರಾದ ಲಲಿತಾಬಾಯಿ ಡಾಂಗೆ, ಮಾರುತಿ ಲಾಡೆ, ಬಿಜೆಪಿ ಯುವ ಮುಖಂಡ ಶರಣು ಸಲಗರ, ಮರೇಪ್ಪಾ ಪಾಟೀಲ, ಸಂಜು ಬಿರಾದಾರ, ಸಂಗಮೇಶ ಮುಚಳಂಬ, ದಿಪಕ್‌ ಪುರಂತ್‌, ಮಂಜುಳಾ ಪಾಂಚಾಳ, ಅಮುಲ್‌ ಸದಾನಂದೆ, ಮಂಜುನಾಥ್‌ ರೆಡ್ಡಿ, ವೆಂಕಟೇಶ್‌ ಔರಾದಕರ, ಸುಭಾಷ್‌ ಬಿರಾದಾರ, ರಾಜಕುಮಾರ ಜಾಧವ್‌, ಧನರಾಜ ಮುಡಬಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next