Advertisement
ಜಾಮಾ ಮಸೀದಿಯಿಂದ ಜಂತರ್ ಮಂತರ್ ಗೆ ಮೆರವಣಿಗೆಯಲ್ಲಿ ಹೊರಟಿದ್ದ ಗುಂಪನ್ನು ಪೊಲೀಸರು ದೆಹಲಿ ಗೇಟ್ ಹತ್ತಿರವೇ ತಡೆಹಿಡಿದಿದ್ದಾರೆ. ಈ ಮೆರವಣಿಗೆಯ ನೇತೃತ್ವವನ್ನು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರು ವಹಿಸಿಕೊಂಡಿದ್ದರು. ಈ ಪ್ರದೇಶವನ್ನು ಪೊಲೀಸರು ಮತ್ತು ಸಂಸತ್ ಭದ್ರತಾ ಸಿಬ್ಬಂದಿ ಬ್ಯಾರಿಕೇಡ್ ಮೂಲಕ ತಡೆ ಹಾಕಿದ್ದಾರೆ.
ಈ ಸಂದರ್ಭದಲ್ಲಿ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳಲು ಪ್ರಯತ್ನಿಸಿದರು. ಆದರೆ ಪ್ರತಿಭಟನಾಕಾರರ ಗುಂಪಿನ ನಡುವೆ ಆಜಾದ್ ಇದ್ದುದರಿಂದ ಪೊಲೀಸರಿಗೆ ಅವರನ್ನು ವಶಕ್ಕೆ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ದೆಹಲಿ ಹೊರತುಪಡಿಸಿದರೆ ಉತ್ತರಪ್ರದೇಶದ ಗೋರಖ್ ಪುರದಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ಜೋರಾಗಿದೆ. ಇಲ್ಲಿ ಕಲ್ಲುತೂರಾಟದ ಘಟನೆಗಳು ವರದಿಯಾಗಿವೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನಲೆಯಲ್ಲಿ ಗೋರಖ್ ಪುರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.