Advertisement

ಪೌರತ್ವ ಹಿಂಸೆಗೆ ಉತ್ತರ ತತ್ತರ

10:20 AM Dec 23, 2019 | Team Udayavani |

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ವ್ಯಕ್ತವಾಗಿರುವ ಆಕ್ರೋಶವು ಕೆಲವು ರಾಜ್ಯಗಳಲ್ಲಿ ತಣ್ಣಗಾಗಿದ್ದರೆ, ಇನ್ನು ಕೆಲವು ರಾಜ್ಯಗಳಲ್ಲಿ ವ್ಯಾಪಿಸುತ್ತಲೇ ಇದೆ. ಭಾರೀ ಪ್ರತಿಭಟನೆಗಳಿಗೆ ಸಾಕ್ಷಿ ಯಾದ ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಲ ಈಗ ಶಾಂತವಾಗಿವೆ. ಆದರೆ ಉತ್ತರಪ್ರದೇಶ, ಬಿಹಾರ, ದಿಲ್ಲಿ, ತಮಿಳುನಾಡು ಮತ್ತಿತರ ರಾಜ್ಯಗಳಲ್ಲಿ ಪೌರತ್ವದ ಕಿಚ್ಚು ತೀವ್ರಗೊಂಡಿದ್ದು, ಸರಣಿ ಪ್ರತಿಭಟನೆಗಳು ಮುಂದುವರಿ ದಿವೆ. ಅದರಲ್ಲೂ ಶುಕ್ರವಾರ ಭಾರೀ ಹಿಂಸಾಚಾರವನ್ನು ಕಂಡ ಉತ್ತರ ಪ್ರದೇಶದಲ್ಲಿ ಗುಂಡೇಟಿಗೆ ಬಲಿಯಾದ ವರ ಸಂಖ್ಯೆ ಶನಿವಾರ 16ಕ್ಕೇರಿದೆ. ಪ್ರತಿಭಟನೆ, ಹಿಂಸೆಯ ಜ್ವಾಲೆಯು ಶನಿವಾರ ಇಲ್ಲಿನ ಕಾನ್ಪುರ, ರಾಂಪುರಕ್ಕೂ ವ್ಯಾಪಿಸಿದ್ದು, ಕಲ್ಲುತೂರಾಟ, ಲಾಠಿ ಪ್ರಹಾರದಂಥ ಘಟನೆಗಳು ನಡೆದಿವೆ.

Advertisement

ಗೋಲಿಬಾರ್‌ ನಡೆಸಿಯೇ ಇಲ್ಲ
ಹಿಂಸೆ ತಾಂಡವವಾಡುತ್ತಿರುವ ಉತ್ತರಪ್ರದೇಶದಲ್ಲಿ ಗೋಲಿಬಾರ್‌ನಿಂದ 8 ವರ್ಷದ ಬಾಲಕ ಸಹಿತ 16 ಮಂದಿ ಸಾವಿಗೀಡಾಗಿದ್ದಾರೆ. ಆದರೆ ನಾವು ಗೋಲಿಬಾರ್‌ ನಡೆಸಿಯೇ ಇಲ್ಲ, ನಮ್ಮಿಂದ ಒಂದೇ ಒಂದು ಗುಂಡೂ ಹಾರಿಲ್ಲ ಎಂದು ಐಜಿ (ಕಾನೂನು ಸುವ್ಯವಸ್ಥೆ) ಪ್ರವೀಣ್‌ ಕುಮಾರ್‌ ತಿಳಿಸಿದ್ದಾರೆ. ಶನಿವಾರ ಈ ಕುರಿತು ವಿವರಣೆ ನೀಡಿದ ಡಿಜಿಪಿ ಒ.ಪಿ.ಸಿಂಗ್‌ ಅವರು, ಘರ್ಷಣೆಯಲ್ಲಿ ಸುಮಾರು 260 ಪೊಲೀಸರು ಗಾಯಗೊಂಡಿದ್ದು, ಈ ಪೈಕಿ 57 ಮಂದಿ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಪ್ರತಿಭಟನ ಕಾರರು ಮಕ್ಕಳು, ಮಹಿಳೆಯರನ್ನು ಗುರಾಣಿಯಾಗಿ ಬಳಸಿಕೊಂಡರು. ಪೊಲೀಸರು ಗೋಲಿಬಾರ್‌ ನಡೆಸಿಲ್ಲ. ತಪ್ಪಿ ಹಾರಿದ ಗುಂಡಿನಿಂದಾಗಿಯೇ (ಕ್ರಾಸ್‌ ಫೈರಿಂಗ್‌) ಎಲ್ಲ ಸಾವುಗಳೂ ಸಂಭವಿಸಿವೆ. ಮರಣೋತ್ತರ ಪರೀಕ್ಷೆ ಯಲ್ಲಿ ಇವು ದೃಢವಾಗಲಿವೆ. ನಾವು ಹಾರಿಸಿದ ಗುಂಡಿನಿಂದ ಯಾರಾದರೂ ಸಾವಿಗೀಡಾಗಿದ್ದರೆ ಅದರ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಕಾನ್ಪುರದಲ್ಲಿ ಹಿಂಸಾಚಾರ
ಶನಿವಾರ ಕಾನ್ಪುರದಲ್ಲಿ ಮತ್ತೆ ಪ್ರತಿಭಟನೆ, ಘರ್ಷಣೆ ಸಂಭವಿಸಿದ್ದು, ಯತೀಂಖಾನಾ ಪೊಲೀಸ್‌ ಚೌಕಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಪೊಲೀಸರು ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ಮಾಡಿ ಪ್ರತಿಭಟನಕಾರ ರನ್ನು ಚದುರಿಸಿದರು. ರಾಂಪುರದಲ್ಲೂ 400-500 ಮಂದಿ ಏಕಾಏಕಿ ಪ್ರತಿ ಭಟನೆ ಆರಂಭಿಸಿದ್ದು, ಈ ವೇಳೆ ನಡೆದ ಘರ್ಷಣೆಯಲ್ಲಿ ಹಲವರು ಗಾಯಗೊಂಡಿದ್ದಾರೆ.

ಇಂದು ನಿಯೋಗದ ಭೇಟಿ
ಈ ಎಲ್ಲ ಬೆಳವಣಿಗೆಗಳ ನಡುವೆ ಉತ್ತರಪ್ರದೇಶದ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಲು ರವಿವಾರ ತೃಣ ಮೂಲ ಕಾಂಗ್ರೆಸ್‌ನ ನಾಲ್ವರು ಸದಸ್ಯರ ನಿಯೋಗ ರಾಜ್ಯಕ್ಕೆ ಭೇಟಿ ನೀಡಲಿದೆ. ಇದೇ ವೇಳೆ ದಿಲ್ಲಿ, ಕೇರಳ, ತಮಿಳುನಾಡು, ಬಿಹಾರ, ಉತ್ತರಪ್ರದೇಶದಲ್ಲಿ ಪ್ರತಿಭಟನೆಗಳು ಶನಿವಾರವೂ ಮುಂದುವರಿದಿವೆ. ದಿಲ್ಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಕ್ಯಾಂಪಸ್‌ ಹೊರಗಡೆ ಪ್ರತಿಭಟನೆ ಮುಂದುವರಿಸಿದ್ದಾರೆ. ತಮಿಳುನಾಡಿ ನಲ್ಲಿ ಪ್ರತಿಭಟನಕಾರರು ರೈಲು ತಡೆಗೆ ನಡೆಸಿದ ಯತ್ನವನ್ನು ಪೊಲೀಸರು ವಿಫ‌ಲಗೊಳಿಸಿದ್ದಾರೆ. ಮಹಾರಾಷ್ಟ್ರ ದಲ್ಲಿ ಶುಕ್ರವಾರ ನಡೆದ ಕಿಡಿಗೇಡಿ ಕೃತ್ಯ ಸಂಬಂಧ ಪೊಲೀಸರು 20 ಮಂದಿಯನ್ನು ವಶಕ್ಕೆ ಪಡೆದಿದ್ದು, 130 ಮಂದಿ ವಿರುದ್ಧ ಕೇಸು ದಾಖಲಿಸಿದ್ದಾರೆ.

ಬಿಹಾರ ಬಂದ್‌: ಜನಜೀವನ ಅಸ್ತವ್ಯಸ್ತ
ಶನಿವಾರ ಆರ್‌ಜೆಡಿ ಪಕ್ಷ ಕರೆ ನೀಡಿದ್ದ ಬಿಹಾರ್‌ ಬಂದ್‌ನಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದಲ್ಲದೆ, ಪ್ರತಿಭಟನಕಾರರು ಹಲವೆಡೆ ದಾಂಧಲೆ ಎಬ್ಬಿಸಿದ ಘಟನೆಗಳು ವರದಿಯಾಗಿವೆ. ಬಿದಿರಿನ ಕೋಲುಗಳು, ಪಕ್ಷದ ಬಾವುಟಗಳನ್ನು ಹಿಡಿದು ಬೀದಿಗಿಳಿದ ಆರ್‌ಜೆಡಿ ಬೆಂಬಲಿಗರು ರಸ್ತೆ ಹಾಗೂ ರೈಲು ತಡೆ ನಡೆಸಿ ವಾಹನಗಳ ಗಾಜುಗಳನ್ನು ಪುಡಿಗಟ್ಟಿ ದಾಂಧಲೆ ಎಬ್ಬಿಸಿದರು. ಅಲ್ಲದೆ, ಈ ಕೃತ್ಯಕ್ಕೆ ಸಣ್ಣ ಮಕ್ಕಳನ್ನೂ ಬಳಸಿಕೊಂಡಿದ್ದು ತೀವ್ರ ಟೀಕೆಗೆ ಕಾರಣವಾಯಿತು.

Advertisement

ಮಲೇಷ್ಯಾ ಪ್ರಧಾನಿಗೆ ಭಾರತದ ತಿರುಗೇಟು
ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಕಳವಳ ವ್ಯಕ್ತಪಡಿಸುವ ಮೂಲಕ ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿದ ಮಲೇಷ್ಯಾ ಪ್ರಧಾನಿ ಮಹತೀರ್‌ ಮೊಹಮ್ಮದ್‌ಗೆ ಭಾರತ ತಿರುಗೇಟು ನೀಡಿದೆ. ಯಾವುದೇ ದೇಶದ ಆಂತರಿಕ ವಿಚಾರಗಳಲ್ಲಿ ಮತ್ತೂಂದು ದೇಶ ಹಸ್ತಕ್ಷೇಪ ಮಾಡುವಂತಿಲ್ಲ ಎಂಬ ರಾಜತಾಂತ್ರಿಕ ನಿಯಮವನ್ನು ನೀವು ಮೀರುತ್ತಿದ್ದೀರಿ ಎಂದು ಭಾರತ ಎಚ್ಚರಿಕೆ ನೀಡಿದೆ. ಅಲ್ಲದೆ, ಮಲೇಷ್ಯಾ ರಾಯಭಾರ ಕಚೇರಿಯ ಅಧಿಕಾರಿಗೆ ಸಮನ್ಸ್‌ ನೀಡಿದ ಭಾರತ ಪ್ರತಿಭಟನೆ ವ್ಯಕ್ತಪಡಿಸಿದೆ. ಇಂಥ ಹೇಳಿಕೆಗಳು ಎರಡೂ ದೇಶದ ಸಂಬಂಧಕ್ಕೆ ಹುಳಿ ಹಿಂಡಲಿದೆ ಎಂದೂ ಹೇಳಿದೆ.

10 ದಿನಗಳಲ್ಲಿ 3 ಕೋಟಿ ಕುಟುಂಬಗಳಿಗೆ ಮಾಹಿತಿ
ಬಿಜೆಪಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅಪಪ್ರಚಾರ ನಡೆಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಬಿಜೆಪಿ ಮುಂದಿನ ಹತ್ತು ದಿನಗಳಲ್ಲಿ ದೇಶವ್ಯಾಪಿ ಅಭಿಯಾನ ಕೈಗೆತ್ತಿಕೊಳ್ಳಲಿದೆ. ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. 10 ದಿನಗಳಲ್ಲಿ ದೇಶದಲ್ಲಿನ ಮೂರು ಕೋಟಿ ಕುಟುಂಬಗಳನ್ನು ಭೇಟಿಯಾಗಿ ಕಾಯ್ದೆ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಬಿಜೆಪಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next