ಬೆಂಗಳೂರು: ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಸಮಾವೇಶದಲ್ಲಿ ಸಿಎಎ ವಿರೋಧಿ ಹೋರಾಟಗಾರ್ತಿ ಅಮೂಲ್ಯ ಲಿಯೋನ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಸಂಸದ ಒವೈಸಿ ಸಹಿತ ಹಲವಾರು ಸಿಎಎ ವಿರೋಧಿ ಹೋರಾಟಗಾರರು ಹಾಜರಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಕಾರ್ಯಕ್ರಮದ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ.
ಸಿಎಎ ವಿರೋಧಿಸಿ ಬೆಂಗಳೂರು ನಗರದ ಮೂರು ಕಡೆಗಳಲ್ಲಿ ಇಂದು ಪ್ರತಿಭಟನಾ ಸಭೆಗಳನ್ನು ಆಯೋಜಿಸಲಾಗಿತ್ತು. ಅದರಲ್ಲಿ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸಭೆಯಲ್ಲಿ ಅಮೂಲ್ಯ ಲಿಯೋನಾ ಅವರು ಮಾತನಾಡಲು ಮೈಕ್ ಕೈಗೆತ್ತಿಕೊಳ್ಳುತ್ತಿದ್ದಂತೆ ‘ಪಾಕಿಸ್ಥಾನ ಜಿಂದಾಬಾದ್’ ಎಂದು ಸ್ಪಷ್ಟವಾಗಿ ಹೇಳುತ್ತಾರೆ.
ತಕ್ಷಣವೇ ವೇದಿಕೆಯಲ್ಲಿದ್ದ ಸಂಸದ ಅಸಾದುದ್ದೀನ್ ಒವೈಸಿ ಅವರು ‘ಕ್ಯಾ ಬೋಲ್ ರಹಾ ಹೇ ಆಪ್?’ ಎಂದು ಪ್ರಶ್ನಿಸುತ್ತಾರೆ, ಅದಕ್ಕೆ ಉತ್ತರವಾಗಿ ಅಮೂಲ್ಯ ‘ಏಕ್ ಮಿನಿಟ್’ ಎಂದು ಉತ್ತರಿಸುತ್ತಾರೆ. ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಆಯೋಜಕರು ಅಮೂಲ್ಯ ಅವರನ್ನು ತಡೆಯುತ್ತಾರೆ ಹಾಗೂ ಪೊಲೀಸರು ಅವರನ್ನು ವೇದಿಕೆಯಿಂದಲೇ ವಶಕ್ಕೆ ಪಡೆದು ಕರೆದುಕೊಂಡು ಹೋಗುತ್ತಾರೆ.
ಇತ್ತೀಚೆಗೆ ರಾಜ್ಯದ ಹಲವು ಕಡೆಗಳಲ್ಲಿ ನಡೆದಿದ್ದ ಸಿಎಎ ವಿರೋಧಿ ಪ್ರತಿಭಟನಾ ಸಭೆಗಳಲ್ಲಿ ಅಮೂಲ್ಯ ಅವರು ತಮ್ಮ ಕಂಚಿನ ಕಂಠದ ಮಾತುಗಳಿಂದ ಪ್ರಧಾನ ಭಾಷಣಕಾರರಾಗಿ ಗುರುತಿಸಿಕೊಂಡಿದ್ದರು. ಇಂದಿನ ಫ್ರೀಡಂ ಪಾರ್ಕ್ ಪ್ರತಿಭಟನೆಯಲ್ಲಿ ತಾನು ಭಾಗವಹಿಸುತ್ತಿರುವ ಕುರಿತಾಗಿ ಅಮೂಲ್ಯ ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ಹಾಕಿಕೊಂಡಿದ್ದರು.
ಇದೀಗ ಅಮೂಲ್ಯ ಲಿಯೋನ ಅವರನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದ್ದು ಅಲ್ಲಿ ಅವರ ವಿಚಾರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.