ಕಲಬುರಗಿ: ದೇಶದ ಸಂವಿಧಾನ ಉಳಿಸಲು ಕೇರಳ ಮತ್ತು ಪಂಜಾಬ್ ರಾಜ್ಯಗಳಂತೆ ಸಿಎಎ ಮತ್ತು ಎನ್ಆರ್ಸಿ, ಎನ್ ಪಿಆರ್ ಕಾಯ್ದೆಗಳ ವಿರುದ್ಧ ಬಿಜೆಪಿ ರಾಜ್ಯಗಳು ನಿರ್ಣಯ ಅಂಗೀಕರಿಸಬೇಕೆಂದು ಸಿಪಿಐಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಆಗ್ರಹಿಸಿದರು.
ನಗರದ ಬೆಂಗಾಲಿ ಪೀರ್ ಮೈದಾನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಕಾಯ್ದೆಗಳನ್ನು ವಿರೋಧಿಸಿ ಕರ್ನಾಟಕ ಪೀಪಲ್ಸ್ ಫೋರಂ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ ಮಟ್ಟದ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಹಿಂದುತ್ವದ ರಾಷ್ಟ ನಿರ್ಮಾಣದ ಲಕ್ಷ್ಯವನ್ನಿಟ್ಟುಕೊಂಡು ದೇಶದ ಸಂವಿಧಾನಕ್ಕೆ ಧಕ್ಕೆ ತರಲು ಮೋದಿ ಸರ್ಕಾರ ಹೊರಟಿದೆ. ಇಂತಹ ಸಂವಿಧಾನದ ವಿರೋಧಿಗಳ ವಿರುದ್ಧ ನಿಜವಾದ ದೇಶಭಕ್ತರು ಧ್ವನಿ ಎತ್ತಬೇಕು. ಸಂವಿಧಾನ ಉಳಿಸುವುದೇ ದೇಶಭಕ್ತಿ. ಹಿಂದೂ-ಮುಸ್ಲಿಂ ಒಂದಾದರೆ ಸಂವಿಧಾನ ಉಳಿಸಲು ಸಾಧ್ಯವಿದೆ ಎಂದರು.
ಸಿಎಎ, ಎನ್ಆರ್ಸಿ, ಕಾಯ್ದೆಗಳ ವಿರುದ್ಧದ ಪ್ರತಿಭಟನೆಯಲ್ಲಿ ಉತ್ತರ ಪ್ರದೇಶ 21, ಅಸ್ಸಾಂ 5 ಮತ್ತು ಕರ್ನಾಟಕದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹೀಗಾಗಿ ಪಂಜಾಬ್ ಹಾಗೂ ಕೇರಳದ ಸರ್ಕಾರಗಳಂತೆ ದೇಶದ ಉಳಿದ ಬಿಜೆಪಿ ಸೇರಿದಂತೆ ಎಲ್ಲ ರಾಜ್ಯಗಳು ಕೇಂದ್ರ ಸರ್ಕಾರದ ಕಾಯ್ದೆಗಳ ವಿರುದ್ಧ ನಿರ್ಣಯ ತೆಗೆದುಕೊಂಡು ದಿಟ್ಟತನ ಪ್ರದರ್ಶಿಸಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸ್ವಾಮಿ ಅಗ್ನಿವೇಶ, ಮಾಜಿ ಸಚಿವರಾದ ಶರಣಪ್ರಕಾಶ್ ಪಾಟೀಲ್, ಸಿಎಂ ಇಬ್ರಾಹಿಂ, ಈಶ್ವರ ಖಂಡ್ರೆ, ಶಾಸಕರಾದ ಬಂಡಪ್ಪ ಕಾಶೆಂಪುರ, ನಾರಾಯಣರಾವ್, ಎಂ.ವೈ.ಪಾಟೀಲ್, ಪ್ರಿಯಾಂಕ್ ಖರ್ಗೆ, ಖನೀಜ್ ಫಾತೀಮಾ, ಡಾ.ಅಜಯ್ ಸಿಂಗ್, ರಾಜಶೇಖರ್ ಪಾಟೀಲ, ರೆಹಮಾನ್ ಖಾನ್, ಮಾಜಿ ಐಎಎಸ್ ಸಸಿಕಾಂತ್ ಸೆಂಥಿಲ್, ಮಾರುತಿ ಮಾನ್ಪಡೆ, ಮೊಹಮ್ಮದ್ ಅಸಗರ್ ಚುಲಬುಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ನಿರ್ಣಯ ಅಂಗೀಕಾರ: ಸಮಾವೇಶದಲ್ಲಿ ಕಲ್ಯಾಣ ಕರ್ನಾಟಕದ ಕಲಬುರಗಿ, ಕೊಪ್ಪಳ, ರಾಯಚೂರು, ಬೀದರ್, ಯಾದಗಿರಿ, ಬೀದರ್ ಮತ್ತು ವಿಜಯಪುರ ಜಿಲ್ಲೆಗಳಿಂದ ಮೂರ ಲಕ್ಷಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಈ ಜಿಲ್ಲೆಗಳ ಜನತೆ ಸಿಎಎ ಕಾಯ್ದೆ ಒಪ್ಪುವುದಿಲ್ಲ ಹಾಗೂ ಎನ್ ಸಿಆರ್, ಎನ್ ಪಿ ಆರ್ ಗೆ ದಾಖಲೆಗಳನ್ನು ಕೊಡಲ್ಲ ಎಂದು ನಿರ್ಣಯ ಅಂಗೀಕರಿಸಲಾಯಿತು.