ಹಾವೇರಿ: ಸಿಎಎ ವಿರೋಧ ಹೆಸರಿನಲ್ಲಿ ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ದೆಹಲಿಯಲ್ಲಿ ಹಿಂಸಾಚಾರ ನಡೆಸಲಾಗುತ್ತಿದ್ದು, ಇದು ಸರ್ಕಾರ ವಿರೋಧಿಸಲು ಷಡ್ಯಂತ್ರ. ಈ ಸಮಸ್ಯೆಯನ್ನು ಕೇಂದ್ರ ಸರ್ಕಾರ ಬಗೆಹರಿಸುತ್ತದೆ ಎಂದು ಬಂದರು ಒಳನಾಡು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಸಿಎಎ ಸಂಸತ್ತಲ್ಲಿ ಭಾರತೀಯರ ಸಂರಕ್ಷಣೆಗೆ ಜಾರಿಗೆ ತಂದ ಕಾಯ್ದೆ. ಇದನ್ನು ಗೌರವಿಸ ಬೇಕಾಗಿರೋದು ಪ್ರತಿಯೊಬ್ಬರ ಜವಾಬ್ದಾರಿ. ಇದು ಸರ್ಕಾರದ ನಿಲುವು ಈ ಬಗ್ಗೆ ಅಭಿಪ್ರಾಯ ಹೇಳಲು, ವಿರೋಧಿಸಲು ಮುಕ್ತ ಅವಕಾಶ ಇದೆ ಎಂದರು.
ಭಾರತದ ಅನ್ನ ತಿಂದು, ನೀರು, ಗಾಳಿ ಕುಡಿದು, ಬದುಕು ಕಟ್ಟಿಕೊಂಡವರು ಸಾರ್ವಜನಿಕ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಜಯವಾಗಲಿ, ಭಾರತಕ್ಕೆ ಧಿಕ್ಕಾರ ಘೋಷಣೆ ಕೂಗುವುದು ಹಾಗೂ ರಾಷ್ಟವಿರೋಧಿ ಕೃತ್ಯ ಮಾಡುವ ಭಯೋತ್ಪಾದಕರು. ದೇಶ ವಿರೋಧಿ ಘೋಷಣೆ ಕೂಗುವ ವ್ಯಕ್ತಿಗಳನ್ನು ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ಕಟ್ಟು ನಿಟ್ಟಿ ಕ್ರಮ ಕೈಗೊಳ್ಳುತ್ತೇವೆ. ಈ ಎಲ್ಲ ಕೃತ್ಯಗಳಿಗೆ ವಿರೋಧ ಪಕ್ಷಗಳು ಕುಮ್ಮಕ್ಕು ಕೊಡುತ್ತಿವೆ ಅನ್ನೋದು ಗೊತ್ತಿರೋ ವಿಚಾರ. ಯಾವುದು ಸುಮ್ಮನೇ ನಡೆಯುವುದಿಲ್ಲ. ಎಷ್ಟು ದಿನ ಸಹಿಸೋಣ, ಕಠಿಣ ಕ್ರಮ ಕೈಗೊಂಡು, ಪಾಕಿಸ್ತಾನಕ್ಕೆ ಜೈ ಎನ್ನುವವರನ್ನು ಜೈಲಿಗೆ ಹಾಕ್ತಿವಿ ಎಂದರು.
ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸರಿಗಟ್ಟುವ ಮತ್ತೂಬ್ಬ ನಾಯಕನನ್ನು ಹುಡುಕುವುದು ಸುಲಭವಿಲ್ಲ. ಬಿಜೆಪಿಗೆ ಬಿಎಸ್‌ವೈ ಸರ್ವಶ್ರೇಷ್ಠ ನಾಯಕ. ಅವರ ನೇತೃತ್ವದಲ್ಲಿ ರಾಜ್ಯದ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ಮಂತ್ರಿಸ್ಥಾನ ನೀಡುವಂತೆ ಅನೇಕರು ಕೇಳುತ್ತಿದ್ದಾರೆ. ತಮ್ಮ ಅಪೇಕ್ಷೆಗಳನ್ನು ಹೇಳುತ್ತಾರೆ. ಇದು ಎಲ್ಲ ಪಕ್ಷಗಳಲ್ಲೂ ಸಹಜ. ರಾಜಕಾರಣ ಅಂದ್ರೆ ಸನ್ಯಾಸತ್ವ ಅಲ್ಲ, ಅಧಿಕಾರ ಬೇಕು ಎಂದು ಬಯಸುತ್ತಾರೆ. ಸಚಿವಸ್ಥಾನ ಕೊಡುವುದು ಮುಖ್ಯಮಂತ್ರಿಗಳ ಪರಮಾಧಿ ಕಾರ. ಸಣ್ಣಪುಟ್ಟ ವ್ಯತ್ಯಾಸಗಳನ್ನು ನಿಭಾಯಿಸಿ ಒಳ್ಳೆಯ ಆಡಳಿತ ನೀಡುತ್ತೇವೆ ಎಂದರು.
ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವ ನಿಟ್ಟಿನಲ್ಲಿ ಚರ್ಚಿಸಿ, ಪರಾಮರ್ಶಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ನಮ್ಮ ದೇಶಕ್ಕೆ ಬರೋದು ದೇಶದ ಗೌರವದ ಸಂಗತಿ. ನಮ್ಮ ದೇಶ, ಪ್ರಧಾನಿ ಮೋದಿ ಅವರನ್ನು ಬಣ್ಣಿಸಿದ್ದಾರೆ. ಆದರೆ, ಕುಮಾರಸ್ವಾಮಿಯವರು ಯಾವುದೋ ಕಾರಣಕ್ಕೆ ಟ್ರಂಪ್ ಪ್ರವಾಸವನ್ನು ಲೇವಡಿ ಮಾಡಿರಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.