ಮಂಗಳೂರು: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ)ಯು ಜುಲೈಯಲ್ಲಿ ನಡೆಸಿದ ಅಖೀಲ ಭಾರತ ಸಿಎ ಅಂತಿಮ ಪರೀಕ್ಷೆಯಲ್ಲಿ ನಗರದ ರುಥ್ ಕ್ಲೇರ್ ಡಿ’ಸಿಲ್ವ ಅವರು ಪ್ರಥಮ ರ್‍ಯಾಂಕ್ ಪಡೆದಿದ್ದಾರೆ.
ನಗರದ ಮಲ್ಲಿಕಟ್ಟೆ ನಿವಾಸಿ ರುಥ್ ಅವರು ರೋಸಿ ಮರಿಯಾ ಡಿ’ಸಿಲ್ವ ಮತ್ತು ರಫೆರ್ಟ್ ಡಿ’ಸಿಲ್ವ ಅವರ ಪುತ್ರಿ. ನಗರದ ಸಂತ ತೆರೆಸಾ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದು ಮಂಗಳೂರು ವಿ.ವಿ.ಯಿಂದ ದೂರ ಶಿಕ್ಷಣ ಮೂಲಕ ಪದವಿ ಪೂರ್ಣಗೊಳಿಸಿದ್ದಾರೆ.
ರುಥ್ ತುಂಬಾ ಬುದ್ಧಿವಂತ ಹುಡುಗಿ. ತರಬೇತಿ ಅವಧಿಯಲ್ಲಿ ಆಕೆ ಸವಾಲಿನ ಕೆಲಸ ಗಳನ್ನು ನಿಭಾಯಿಸುವಲ್ಲಿ ತನ್ನ ಕೌಶಲವನ್ನು ಪ್ರದರ್ಶಿಸು ತ್ತಿದ್ದಳು. ತನ್ನ ಸಾಮರ್ಥ್ಯದ ಬಗೆಗೆ ಆಕೆಗೆ ಇರುವ ವಿಶ್ವಾಸವೇ ಆಕೆಯ ಬಲ. ಆಕೆಯ ಕೆಲಸದ ಮೌಲ್ಯ ಗಳಿಂದ ನಾವೂ ಪ್ರಭಾವಿತರಾಗಿದ್ದೇವೆ ಎಂದು ರುಥ್ ಅವರಿಗೆ ಆರ್ಟಿಕಲ್‌ಶಿಪ್ ಅವಕಾಶ ನೀಡಿದ್ದ ವಿವಿಯನ್ ಅವರು ಹೇಳಿದ್ದಾರೆ.
ರುಥ್ ಅವರು ಸಿಎ-ಸಿಪಿಟಿ ಮತ್ತು ಇಂಟ್ ಮೀಡಿಯೆಟ್ ತರಗತಿಗಳನ್ನು ಮಂಗಳೂರಿನ ತ್ರಿಶಾ ಕ್ಲಾಸಸ್‌ನಲ್ಲಿ ಪಡೆದಿದ್ದಾರೆ.
ಸೆಂಟರ್ ಫಾರ್ ಇಂಟೆಗ್ರೇಟೆಡ್ ಲರ್ನಿಂಗ್ (ಸಿಐಎಲ್) ಸಂಚಾಲಕ ನಂದಗೋಪಾಲ್ ಅವರು ಮಾತನಾಡಿ, ರುಥ್ ಅವರು ಇತಿಹಾಸ ನಿರ್ಮಿಸಿ ದ್ದಾರೆ. ಗುರಿಯೆಡೆಗೆ ಸಾಗುವ ಬದ್ಧತೆಯಲ್ಲಿ ರಾಜಿ ಮಾಡಿಕೊಳ್ಳದಿದ್ದರೆ ಗೆಲುವು ನಿಶ್ಚಿತ ಎನ್ನುವುದಕ್ಕೆ ಈಕೆ ಉತ್ತಮ ಉದಾಹರಣೆ ಎಂದರು.
ಸಿಎ ಪರೀಕ್ಷೆ ಕಠಿನವಾಗಿತ್ತು. ನಿರಂತರ ಪರಿಶ್ರಮ ಮತ್ತು ಪ್ರಯತ್ನದಿಂದ ದೇಶದಲ್ಲಿಯೇ ಮೊದಲ ರ್‍ಯಾಂಕ್ ಪಡೆಯಲು ಸಾಧ್ಯವಾಗಿದೆ. ಫಲಿತಾಂಶ ಬಂದಾಗ ಆಶ್ಚರ್ಯಗೊಂಡು ಎರಡು- ಮೂರು ಬಾರಿ ಪರಿಶೀಲಿಸಿದೆ. ರ್‍ಯಾಂಕ್ ಪಡೆಯಲು ಹೆತ್ತವರ ಪ್ರೋತ್ಸಾಹ ಸಹಕಾರಿಯಾಗಿದೆ. ಸಂಭ್ರಮವನ್ನು ಹೆತ್ತವರೊಂದಿಗೆ ಹಂಚಿಕೊಂಡು ಖುಷಿಪಟ್ಟೆ.
– ರುಥ್ ಕ್ಲೇರ್ ಡಿ’ಸಿಲ್ವ