ಚಿಕ್ಕಮಗಳೂರು: ಜಮೀರ್ ಅಹಮದ್ ಪರ್ಮಿಷನ್ ತೆಗೆದುಕೊಂಡು ಹೋಗಬೇಕಂದ್ರೇ ನೀನೇನು ಮಹಮದ್ ಆಲಿ ಜಿನ್ನಾನಾ? ಜಿನ್ನಾ ಪಾಕಿಸ್ತಾನ ಹುಟ್ಸಿದ್ದು, ಪಾದರಾಯನಪುರ ಜಮೀರ್ ತಂದೆ ಆಸ್ತಿನಾ ಎಂದು ಸಚಿವ ಸಿ.ಟಿ.ರವಿ ಜಮೀರ್ ಅಹಮದ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಬುಧವಾರ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದರಾಯನಪುರಕ್ಕೆ ರಾತ್ರಿ ವೇಳೆ ಯಾಕೆ ಹೋಗಬೇಕಿತ್ತು? ಹೋಗುವ ವಿಚಾರ ನನಗೆ ತಿಳಿಸಿಲ್ಲ ಎಂಬ ಶಾಸಕ ಜಮೀರ್ ಅಹಮದ್ ಹೇಳಿಕೆಗೆ ತೀರುಗೇಟು ನೀಡಿ ನಾನು ವಿಧಾನಸಭೆಗೆ ಬಂದಾಗಲೇ ಜಮೀರ್ ವಿಧಾನಸಭೆಗೆ ಬಂದಿದ್ದು, ನನಗೊಂದು ಕಾನೂನು ಜಮೀರ್ ಗೆ ಒಂದು ಕಾನೂನು ಇಲ್ಲ, ಈ ದೇಶದ ಕಾನೂನು ಎಲ್ಲರಿಗೂ ಒಂದೇ ಎಂದರು.
ರಾಜ್ಯದ 224 ಶಾಸಕರಲ್ಲಿ ನೀನು ಒಬ್ಬ. ತಂದೆಯ ಆಸ್ತಿಯಾಗಿದ್ದರೂ ದೇಶದೊಳಗಿದ್ದಾಗ ಕಾನೂನಿಗೆ ಬದ್ದವಾಗಿರಬೇಕು ಎಂದರು.
ಪಾದರಾಯನಪುರದಲ್ಲಿ ಯಾಕೆ ಹಲ್ಲೆ ನಡೆಸಿದರು ಎಂಬುದರ ಬಗ್ಗೆ ಗಂಭೀರ ತನಿಖೆಯಾಗಬೇಕು. ಅಲ್ಲೀಯ ಮಸೀದಿಯಲ್ಲಿ ಇಂಡೋನೇಷಿಯಾ, ಕಜಕಿಸ್ತಾನಕ್ಕೆ ಸೇರಿದಂತೆ ಜಮಾತ್ ಸಮಾವೇಶದಲ್ಲಿ ಭಾಗವಹಿಸಿದ್ದ 19 ಜನ ವಿಸಾ ಅವಧಿ ಮುಗಿದ ತಬ್ಲಿಕ್ ಜಮಾತ್ ಸದಸ್ಯರಿಗೆ ಆಶ್ರಯ ನೀಡಿದ್ದರು ಎಂದು ಹೇಳಲಾಗುತ್ತಿದೆ. ಯಾರ ಅನುಮತಿ ಪಡೆದು ಆಶ್ರಯ ನೀಡಿದರು. ವಿಸಾ ಅವಧಿ ಮುಗಿದ ಮೇಲೆ ಶರಣಾಗಬೇಕಿತ್ತು. ಶರಣಾಗದೇ ಹೇಗಿದ್ದರು ಎಂದು ಪ್ರಶ್ನಿಸಿದರು.
ಇವತ್ತು ತಬ್ಲಿಕ್ ಜಮಾತ್ ಸದಸ್ಯರಿಗೆ ಇರಲು ಅವಕಾಶ ನೀಡುತ್ತಾರೆ, ನಾಳೆ ಇನ್ನೊಬ್ಬ ದೇಶದ್ರೋಹಿ ಅಥವಾ ಭಯೋತ್ಪಾದಕ ಬಂದರು ಹೀಗೆ ಆಶ್ರಯ ನೀಡಿದರೆ ಗೊತ್ತಾಗುವುದು ಹೇಗೆ ಇದೊಂದು ಗಂಭೀರ ವಿಷಯವಾಗಿದ್ದು, 19 ಜನರಿಗೆ ಆಶ್ರಯ ನೀಡಿದ್ದು ನಿಜವಾದರೆ. ಇದು ದೇಶ ದ್ರೋಹದ ಪಿತೂರಿ ಇದರ ಬಗ್ಗೆ ಗಂಬೀರವಾಗಿ ತನಿಖೆಯಾಗಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.