ಬೆಂಗಳೂರು: ಚಾಮರಾಜನಗರದ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿರುವುದು ಕ್ಷಮೆಗೆ ಅರ್ಹವಲ್ಲದ ಘಟನೆ. ಈ ಘಟನೆಗೆ ಸಚಿವರೇ ಹೊಣೆ ಆಗಿದ್ದರೆ ಅವರೇ ಹೊಣೆ ಹೊತ್ತುಕೊಳ್ಳಬೇಕು, ಅಧಿಕಾರಿಗಳು ಹೊಣೆಯಾಗಿದ್ದರೆ ಅವರೇ ಹೊಣೆ ಹೊತ್ತುಕೊಳ್ಳಬೇಕು, ಒಂದು ವೇಳೆ ನಾನು ಸಚಿವನಾಗಿ ಇಂತಹ ಘಟನೆ ನನ್ನ ಗಮನಕ್ಕೆ ಬಂದು, ನಾನು ಕ್ರಮ ತೆಗೆದುಕೊಳ್ಳದಿದ್ದರೆ ನಾನೇ ಹೊಣೆ ಹೊರಬೇಕು. ಆಕ್ಸಿಜನ್ ಸಮಸ್ಯೆಯಿಂದ ಈ ಘಟನೆಯಾಗಿದ್ದರೆ ಸರ್ಕಾರವೇ ಹೊಣೆ ಹೊರಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಚಾಮರಾಜನಗರ ದುರಂತವನ್ನು, ಸಂಕಷ್ಟವನ್ನು ನೋಡಿದೆ. ಇದು ಘೋರ ಅನ್ಯಾಯ. ಇದಕ್ಕೆ ಯಾರೇ ಹೊಣೆಯಾಗಿದ್ದರು ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.
ಬೇರೆ ರಾಜ್ಯಗಳಲ್ಲಿ ಕೇಳಿ ಬರುತ್ತಿದ್ದ ಇಂತಹ ಘಟನೆ ನಮ್ಮ ರಾಜ್ಯದಲ್ಲೇ ನಡೆದಿರುವುದು ದುರಂತ. ಯಾರೇ ತಪ್ಪಿತಸ್ಥರಿದ್ರೂ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಸಿಎಂಗೆ ಮನವಿ ಮಾಡಿದ್ದೇನೆ. ನನಗೆ ಘಟನೆ ಬಗ್ಗೆ ತಿಳಿದ ತಕ್ಷಣ ಸಿಎಂ ಭೇಟಿ ಮಾಡಿ ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದೇನೆ. ಇಂತಹ ಘಟನೆ ಮರುಕಳಿಸದಂತೆ ಎಲ್ಲಾ ಜಿಲ್ಲೆಯಲ್ಲೂ ಎಚ್ಚರ ವಹಿಸುವಂತೆ ಒತ್ತಾಯಿಸುತ್ತೇನೆ. ಬೇರೆ ಬೇರೆ ರಾಜ್ಯಗಳಘಟನೆ ನಮಗೆ ಪಾಠ ಆಗಬೇಕಿತ್ತು, ಆದರೆ ಆಗಿಲ್ಲ ಎಂದರು.
ಇದು ಆರೋಗ್ಯ ತುರ್ತು ಪರಿಸ್ಥಿತಿ. ಈ ಸಂಧರ್ಭದಲ್ಲಿ ಅಗತ್ಯ ಆರೋಗ್ಯ ಸೇವೆ ವ್ಯವಸ್ಥೆ ಬಲಪಡಿಸಬೇಕು. ನಾನು ಸರ್ಕಾರಕ್ಕೆ ಸಾಕಷ್ಟು ಸಲಹೆ ನೀಡಿದ್ದೆ, ಅದರಲ್ಲಿ ಕೆಲವನ್ನು ಈಡೇರಿಸಿದ್ದಾರೆ. ಏಕಾಏಕಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ನಿಧಾನವಾಗಿ ಪ್ರಕರಣ ಹೆಚ್ಚಾಗಿದ್ದರೆ ವ್ಯವಸ್ಥೆ ಮಾಡಬಹುದಿತ್ತು. ಈ ಸಂದರ್ಭದಲ್ಲಿ ದೂರಿಕೊಂಡು ಕೂರುವುದು ಸರಿಯಲ್ಲ ಎಂದರು.
ರಾಜೀನಾಮೆ ಪಡೆಯುವುದರಿಂದ ಸಮಸ್ಯೆ ಬಗೆಹರಿಯುವುದಾದರೆ, ಸಾವನ್ನಪ್ಪಿದವರು ವಾಪಸು ಬರುತ್ತಾರೆ ಎನ್ನುವುದಾದರೆ ಅಧಿಕಾರ ನಮಗೆ ಮುಖ್ಯವಲ್ಲ. ದೆಹಲಿ, ಮಹಾರಾಷ್ಟ್ರ ದಲ್ಲಿ ಈ ರೀತಿ ಆಗಿದೆ, ಅಲೆಲ್ಲಾ ರಾಜೀನಾಮೆ ಕೊಡಿ ಸಮಸ್ಯೆ ಬಗೆಹರಿಯುತ್ತೆ ಎನ್ನುವುದಾದರೆ ಅಧಿಕಾರ ನಮಗೆ ಮುಖ್ಯವಲ್ಲ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.