Advertisement

ಯೋಗೇಶ್ವರ್‌ ದೆಹಲಿ ಭೇಟಿ ನಿಗೂಢ; ಯಾರನ್ನೂ ಭೇಟಿಯಾಗದೆ ವಾಪಾಸು ಬಂದ ಸಚಿವ

09:13 AM Jun 27, 2021 | Team Udayavani |

ಬೆಂಗಳೂರು: ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್‌ ದೆಹಲಿ ಭೇಟಿ ನಿಗೂಢವಾಗಿದ್ದು, ಪಕ್ಷದ ಯಾವುದೇ ನಾಯಕರನ್ನು ಭೇಟಿ ಮಾಡದೆ ರಾಜ್ಯಕ್ಕೆ ವಾಪಸ್‌ ಆಗಿದ್ದಾರೆ.

Advertisement

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಗೊಂದಲ ತಣ್ಣಗಾಯಿತು ಎನ್ನುವಷ್ಟರಲ್ಲಿ ಪರೀಕ್ಷೆ ಬರೆದಿದ್ದೇವೆ. ಫ‌ಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳುವ ಮೂಲಕ ಮತ್ತೆ ನಾಯಕತ್ವ ಬದಲಾವಣೆಯ ವಿಷಯ ಮುಂಚೂಣಿಗೆ ಬರಲು ಕಾರಣವಾಗಿದ್ದರು . ಅವರ ಈ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ಮತ್ತೆ ಸಂಚಲನಕ್ಕೆಕಾರಣವಾಗಿತ್ತು.

ಈ ಹೇಳಿಕೆ ನೀಡಿದ ಬೆನ್ನಲ್ಲೇ ದೆಹಲಿಗೆ ಪ್ರಯಾಣ ಬೆಳೆಸಿದ್ದರು, ಈ ಹಿನ್ನೆಲೆಯಲ್ಲಿ ಬಹಿರಂಗ ಹೇಳಿಕೆ ನೀಡಿರುವುದಕ್ಕೆ ಪಕ್ಷದ ಹೈಕಮಾಂಡ್‌ ಕಾರಣ ಕೇಳಲು ಕರೆಸಿರಬಹುದು ಎಂದು ರಾಜ್ಯ ಬಿಜೆಪಿಯಲ್ಲಿ ಮಾತುಗಳು ಕೇಳಿ ಬರುತ್ತಿದ್ದವು. ಆದರೆ, ಯೋಗೇಶ್ವರ್‌ ಅವರಿಗೆ ಶನಿವಾರ ಮಧ್ಯಾಹ್ನದವರೆಗೂ ಪಕ್ಷದ  ಯಾವುದೇ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಲು ಅವಕಾಶ ದೊರೆತಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ: ಇಕ್ಬಾಲ್ ಅನ್ಸಾರಿ ಸ್ಪಷ್ಟನೆ

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಸಂಜೆವರೆಗೂ ಪಕ್ಷದ ಸಂಘಟನೆ ಕುರಿತ ಸಭೆಯಲ್ಲಿ ಇದ್ದರು ಎನ್ನಲಾಗಿದೆ. ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನೂ ಕೂಡ ಭೇಟಿ ಮಾಡಿರುವುದು ಅನುಮಾನ ಎಂದು ಹೇಳಲಾಗುತ್ತಿದೆ. ಹೀಗಾಗಿ ಯಾವುದೇ ರಾಷ್ಟ್ರೀಯ ನಾಯಕರ ಭೇಟಿ ಮಾಡದೇ ಸಿ.ಪಿ. ಯೋಗೇಶ್ವರ್‌ ರಾಜ್ಯಕ್ಕೆ ವಾಪಸ್‌ ಆಗಿದ್ದಾರೆಂದು ತಿಳಿದು ಬಂದಿದೆ.

Advertisement

ತಮ್ಮ ದೆಹಲಿ ಭೇಟಿಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಾನು ಪ್ರತಿ ಬಾರಿ ದೆಹಲಿಗೆ ಬಂದಾಗ ಸುದ್ದಿ ಆಗುತ್ತದೆ. ನಾನು ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಬಂದಿದ್ದೇನೆ. ಇದೊಂದು ಖಾಸಗಿ ಭೇಟಿಯಾಗಿದೆ. ಯಾವುದೇ ರಾಜಕೀಯ ಉದ್ದೇಶವಿಲ್ಲ. ಪರೀಕ್ಷೆ ಬರೆದು ಫ‌ಲಿತಾಂಶಕ್ಕೆ ಕಾಯುವ ವಿಚಾರದ ಕುರಿತು ಈಗಾಗಲೇ ಮಾತನಾಡಿದ್ದೇನೆ ಮತ್ತೇನೂ ಹೇಳುವುದಿಲ್ಲ ಎಂದು ಹೇಳಿದರು.

ಸಿ.ಪಿ.ಯೋಗೇಶ್ವರ್‌ ದೆಹಲಿಗೆ ತೆರಳಿದ ಸಂದರ್ಭದಲ್ಲಿಯೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕೂಡ ದೆಹಲಿಗೆ ತೆರಳಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಆದರೆ, ಈ ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಪರೀಕ್ಷೆ ಬರೆದವರ ‌ ಬಳಿಯೇ ಫ‌ಲಿತಾಂಶದ ಬಗ್ಗೆ ಕೇಳಬೇಕು. ಯಾವ ಹಿನ್ನೆಲೆಯಲ್ಲಿ ಆಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ನಾನು, ಯೋಗೇಶ್ವರ್‌ ಒಂದೇ ವಿಮಾನದಲ್ಲಿ ಬಂದಿಲ್ಲ. ಅವರು ದೆಹಲಿಗೆ ಹೊರಟಿರುವ ಮಾಹಿತಿ ಏರ್‌ಪೋರ್ಟ್‌ನಲ್ಲಿ ಸಿಕ್ಕಿದೆ ಎಂದು ಹೇಳಿದರು.

ಇದೇ ವೇಳೆ, ಕೇಂದ್ರ ಸಚಿವ ಸಂಪುಟ ಪುನಾರಚನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಅಧಿಕೃತವಾಗಿ ಉತ್ತರಿಸುವ ಜವಾಬ್ದಾರಿ ನನಗಿಲ್ಲ. ಮೋದಿ ದೇಶದ ವಿಶಾಲ ಮನೋಭಾವದೊಂದಿಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಸಚಿವ ಯೋಗೇಶ್ವರ್‌ ಅವರ ದೆಹಲಿ ಭೇಟಿಗೆ ಯಾವುದೇ ಮಹತ್ವ ಇಲ್ಲ. ಇಂತಹ ಭೇಟಿಗೆ ರಾಷ್ಟ್ರೀಯ ನಾಯಕರು ಸರಿಯಾದ ಉತ್ತರ ನೀಡಿ ಕಳುಹಿಸಿದ್ದಾರೆ. ಮುಖ್ಯಮಂತ್ರಿಗಳ ಬದಲಾವಣೆಗೆ ಯತ್ನಿಸುತ್ತಿದ್ದ ನಾಯಕರ ನಡೆಗೆ, ಆತುರದ ನಿರ್ಧಾರಕ್ಕೆ ಉತ್ತಮ ಅಂಕ ಸಿಕ್ಕಿಲ್ಲ. ನಕಲಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಎಂದಿಗೂ ಉತ್ತಮ ಅಂಕ ಗಳಿಸಲು ಸಾಧ್ಯವಿಲ್ಲ. ನಕಲಿ ವಿದ್ಯಾರ್ಥಿಗಳು ಎಂದಿಗೂ ನಕಲಿಯೇ.- ಎಂ.ಪಿ. ರೇಣುಕಾಚಾರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next