ಚನ್ನಪಟ್ಟಣ: ಜೆಡಿಎಸ್ – ಬಿಜೆಪಿ ಮೈತ್ರಿ ವಿಚಾರದ ಕುರಿತು ಚರ್ಚೆ ತೀವ್ರವಾಗಿರುವ ವೇಳೆ ”ಅವರಿಗಾದರೂ ಜೆಡಿಎಸ್ ಹುಡುಗಿ ಇಷ್ಟ ಆಯ್ತಲ್ಲ” ಎನ್ನುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಶುಕ್ರವಾರ ಸ್ಪಷ್ಟ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ”ನಮ್ಮ ಮೇಲೆ ಇರುವ ಪ್ರೀತಿಗೆ ಧನ್ಯವಾದ,ಅವರಿಗಾದರೂ ಜೆಡಿಎಸ್ ಹುಡುಗಿ ಇಷ್ಟ ಆಯ್ತಲ್ಲ. ನಾನು ಈ ವಿಷಯದ ಬಗ್ಗೆ ಮಾತನಾಡುವುದಿಲ್ಲ, ಆದರೆ ಈ ಬಗ್ಗೆ ದೇವೇಗೌಡರು ಹೇಳಿಕೆ ನೀಡುತ್ತಾರೆ.ಈ ವರೆಗೆ ಮೈತ್ರಿ ಬಗ್ಗೆ ಪಕ್ಷದ ಸಭೆಯಲ್ಲಿ ಯಾವುದೇ ಚರ್ಚೆ ಆಗಲಿಲ್ಲ.ಸೆ. 10 ಕ್ಕೆ ಕಾರ್ಯಕರ್ತರ ಸಭೆ ಕರೆದಿದ್ದೇವೆ. ಅಂದು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತೇವೆ ಎಂದರು.
ಇದನ್ನೂ ಓದಿ: JDS; ಕಾಂಗ್ರೆಸ್ ಸೋಲಿಸಬೇಕೆಂಬ ಕಾರಣಕ್ಕೆ ಬಿಜೆಪಿ ಜೊತೆ ಮೈತ್ರಿಗೆ ಒಲವು: ಜಿ.ಟಿ ದೇವೇಗೌಡ
ಜಿ.ಟಿ. ದೇವೇಗೌರ ಅಧ್ಯಕ್ಷತೆಯ ಕೋರ್ ಕಮಿಟಿ ಮಾಡಿದ್ದೇವೆ.ಇಡೀ ರಾಜ್ಯ ಸುತ್ತಿ ಎಲ್ಲರ ಅಭಿಪ್ರಾಯ ಸಂಗ್ರಹಿಸುತ್ತೇವೆ.ಬಳಿಕ ಮೈತ್ರಿ ಬಗ್ಗೆ ತಿರ್ಮಾನ ಮಾಡುತ್ತೇವೆ. ನನ್ನ ವೈಯಕ್ತಿಕ ನಿಲುವನ್ನ ಪಕ್ಷದ ಸಭೆಯಲ್ಲಿ ಹೇಳುತ್ತೇನೆ. ಜೆಡಿಎಸ್ ಪ್ರಪ್ರಾದೇಶಿಕ ಪಕ್ಷವಾಗಿದ್ದು, ಅಸ್ತಿತ್ವ, ಶಕ್ತಿ, ಕನ್ನಡಿಗರ ಸ್ವಾಭಿಮಾನ ಇರುವ ಪಕ್ಷ. ಪಕ್ಷ ಉಳಿಸಿಕೊಳ್ಳಲು ಬಿರುಗಾಳಿ, ಸುಂಟರಗಾಳಿ ಬಂದರೂ ಅದನ್ನ ಎದುರಿಸಲು ನಾವು ಸಜ್ಜಾಗಿದ್ದೇವೆ ಎಂದರು.
‘ಬಿಜೆಪಿ ಬಿ ಟೀಮ್ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿ, ನಿತೀಶ್ ಕುಮಾರ್ ಯಾವ ಟೀಮ್ ನಲ್ಲಿದ್ರೂದ್ದರು? ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬಸ್ ಓಡಿಸಿ ಕೊಂಡು ಹೋದವರು ಯಾರು? ಎ ಟೀಮ್, ಬಿ ಟೀಮ್ ಎಲ್ಲವನ್ನು ತೆಗೆಯಿರಿ. ಟೈಮ್ ಬಂದರೆ ಜನ ಉತ್ತರ ಕೊಡುತ್ತಾರೆ’ ಎಂದರು.