ಬೆಂಗಳೂರು: ರಾಜ್ಯ ಯೋಜನ ಮಂಡಳಿ ಉಪಾಧ್ಯಕ್ಷ, ಕಾಂಗ್ರೆಸ್ ಹಿರಿಯ ಮುಖಂಡ ಸಿ.ಎಂ.ಇಬ್ರಾಹಿಂ ಪುತ್ರಿ ಇಫಾ ಗರ್ಭಪಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್‌ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಫಾ ಅವರು ಹೇಳಿಕೆಯಂತೆ ಐಪಿಸಿ 312ರ ಪ್ರಕಾರ ಗರ್ಭಪಾತ ಮಾಡಿಸಿದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇಫಾ ಅವರು ತವರು ಮನೆಗೆ ತೆರಳಿದ್ದ ವೇಳೆ ಜ್ಯೂಸ್ ಕುಡಿದಿದ್ದರಿಂದ ಅಸ್ವಸ್ಥಗೊಂಡೆ. ಕೂಡಲೇ ನನ್ನನ್ನು ಆಸ್ಪತ್ರೆಗೆ ಸೇರಿಸಿದರು. ತೀವ್ರ ರಕ್ತಸ್ರವವಾಗಿ ಗರ್ಭಪಾತವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ದೂರಿನಲ್ಲಿ ಎಲ್ಲೂ ಕೂಡ ಇಫಾ ಅವರು ಯಾರು ವಿರುದ್ಧವೂ ಆರೋಪಿಸಿಲ್ಲ. ಅವರ ಹೇಳಿಕೆ ಆಧರಿಸಿ ಐಪಿಸಿ ಸೆಕ್ಷನ್ 312ರ ಅಡಿ ಭ್ರೂಣ ಹತ್ಯೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ನಡೆದ ದಿನ ಮನೆಯಲ್ಲಿ ಯಾರಿದ್ದರೂ ಎಂಬುದನ್ನು ತಿಳಿದು ಅವರನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
ಅಲ್ಲದೆ, ವೈದ್ಯರ ಹೇಳಿಕೆ ಪಡೆಯಲಾಗಿದ್ದು, ದೊಡ್ಡ-ಚಿಕ್ಕಪ್ಪನ ಮಕ್ಕಳು ವಿವಾಹವಾ ದರೆ ಮಕ್ಕಳಾಗದೆ, ಗರ್ಭಪಾತವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಗರ್ಭಪಾತ
ವಾಗಿರಬಹುದು ಎಂದು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ ಲಾಗುತ್ತಿದೆ ಎಂದು ಅವರು ತಿಳಿಸಿದರು.
ಇಬ್ರಾಹಿಂ ಪುತ್ರಿ ಇಫಾ ತನ್ನ ಚಿಕ್ಕಪ್ಪನ ಮಗ (ಇಬ್ರಾಹಿಂ ಸಹೋದರ ಸಿ.ಎಂ.ಖಾದರ್) ಮಹಮ್ಮದ್‌ನನ್ನು ಪ್ರೀತಿಸಿ ವಿವಾಹವಾಗಿದ್ದರು. ಇದಕ್ಕೆ ಇಬ್ರಾಹಿಂ ಕುಟುಂಬದ ವಿರೋಧವಿತ್ತು ಎನ್ನಲಾಗಿದೆ. ಇದರಿಂದಾಗಿ ಮಗಳು ತವರಿಗೆ ಬಂದಾಗ ಗರ್ಭಪಾತವಾಗುವ ಮಾತ್ರೆಯನ್ನು ಜ್ಯೂಸ್‌ನಲ್ಲಿ ಕೊಟ್ಟಿದ್ದರಿಂದ ಗರ್ಭಪಾತ ಸಂಭವಿಸಿದೆ ಎಂದು ಇಫಾ ಮಾವ ಖಾದರ್ ಆರೋಪಿಸಿದ್ದರು.
ಹಿಂದೆ ಶ್ರೀಕೃಷ್ಣನ ವಿರುದ್ಧವೂ ಆಪಾದನೆ ಕೇಳಿಬಂದಿತ್ತು. ಇದೀಗ ನನ್ನ ವಿರುದ್ಧವೂ ಆರೋಪ ಕೇಳಿಬಂದಿದೆ. ಭ್ರೂಣ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ತಪ್ಪಿತಸ್ಥರು ಜನತಾ ನ್ಯಾಯಾಲಯದಿಂದ ಪಾರಾಗಬಹುದು. ದೇವರ ನ್ಯಾಯಾಲಯ ದಿಂದ ಪಾರಾಗಲು ಸಾಧ್ಯವಿಲ್ಲ. ಪ್ರಕರಣದಲ್ಲಿ ನನ್ನ ವಿರುದ್ಧ ಆರೋಪ ಕೇಳಿ ಬಂದಿರುವುದಕ್ಕೆ ನೋವಾಗಿದೆ. ಮುಂದಿನ ದಿನಗಳಲ್ಲಿ ಸತ್ಯಾಂಶ ಹೊರ ಬರಲಿದೆ.
-ಸಿ.ಎಂ. ಇಬ್ರಾಹಿಂ, ಕಾಂಗ್ರೆಸ್ ಮುಖಂಡ