ತುಮಕೂರು: ರಾಜ್ಯದಲ್ಲಿ ಇನ್ನು ಮುಂದೆ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಕ ಮಾಡಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಏರ್ಪ ಡಿಸಿದ್ದ 64ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ರಾಷ್ಟ್ರ ಮತ್ತು ನಾಡ ಧ್ವಜಾರೋಹಣ ನೆರವೇರಿಸಿ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿ, ಕನ್ನಡ ನಾಡು- ನುಡಿ ಸೇವೆ ಮತ್ತು ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ. ರಾಜ್ಯದ ಯುವಕರಿಗೆ ಸಿ ಮತ್ತು ಡಿ ದರ್ಜೆಯ ಹುದ್ದೆ ನೀಡುವ ಸಂಬಂಧ ಸಚಿವ ಸಂಪುಟ ದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕನ್ನಡ ನಾಡು ಆರೋಗ್ಯಕರವಾಗಿರಬೇಕು. ಸ್ವತಂತ್ರ ವಾಗಿರಬೇಕು ಎಂಬುದು ಸರ್ಕಾರ ಮೂಲ ಉದ್ದೇಶ. ಆದ್ದರಿಂದ ಸ್ವತ್ಛತೆಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಪರಿಸರ ಚೆನ್ನಾಗಿದ್ದರೆ ಸಾಂಕ್ರಾಮಿಕ ರೋಗ ಹರಡುವುದಿಲ್ಲ, ಆದ್ದರಿಂದ ಪರಿಸರ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಹೊರತುಪಡಿಸಿ ಬೇರೆಡೆ ಜವಳಿ, ರೇಷ್ಮೆ, ಉಣ್ಣೆ ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡಲು ಸರ್ಕಾರ ಚಿಂತಿಸಿದೆ ಎಂದು ನುಡಿದರು. ಈ ಉದ್ಯಮಗಳಲ್ಲಿ ತೊಡಗುವವರಿಗೆ ವಿದ್ಯುತ್, ಭೂ ಖರೀದಿಗೆ ಸಬ್ಸಿಡಿ ನೀಡಲು ಸರ್ಕಾರ ತೀರ್ಮಾನಿಸಿದೆ.
ರಾಜ್ಯದ ಸಮಗ್ರ ಅಭಿವೃದ್ಧಿಯಾಗ ಬೇಕಾದರೆ ಇಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಅಭಿವೃದ್ಧಿಯಾಗಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಸಮಾನ ಭಾವನೆ ಬಂದಾಗ ನಾವೆಲ್ಲರೂ ಅಭಿವೃದ್ಧಿ ಶೀಲರು ಎಂದು ಭಾವಿಸ ಬಹುದು ಎಂದು ಹೇಳಿದರು. ಕನ್ನಡ ರಾಜ್ಯ ಒಟ್ಟುಗೂಡಿಸುವಲ್ಲಿ ಸಾಹಿತಿಗಳು, ಕಲಾವಿದರ ಕೊಡುಗೆ ಅಪಾರ. ಹೋರಾಟಗಾರರ ಫಲದಿಂದಲೇ ಕನ್ನಡನಾಡು ಶೇ. 80ರಿಂದ 90 ಒಂದುಗೂಡಿಸಿದ್ದರಿಂದ, ನಾವೆಲ್ಲರೂ ಸಂತಸದಿಂದ ರಾಜ್ಯೋತ್ಸವ ಆಚರಿಸುತ್ತಿದ್ದೇವೆ ಪ್ರತಿಯೊಬ್ಬರೂ ಕನ್ನಡ ನಾಡು-ನುಡಿ ಅಭಿವೃದ್ಧಿಗೆ ಬದ್ಧರಾಗಿ ಶ್ರಮಿಸೋಣ ಎಂದು ತಿಳಿಸಿದರು. ಪ್ರತಿಯೊಬ್ಬರೂ ಸ್ವತ್ಛತೆಗೆ ಒತ್ತು ನೀಡುವ ಮೂಲಕ ಗಾಂಧೀಜಿ ಅವರ ಸ್ವತ್ಛ ಭಾರತ್ ಕನಸು ನನಸು ಮಾಡಬೇಕಾಗಿದೆ. ಆ ಮೂಲಕ ಗೌರವ ಸಲ್ಲಿಸಬೇಕು ಎಂದು ನುಡಿದರು.
ರೈತರಲ್ಲಿ ಸಂತಸ: ರಾಜ್ಯದಲ್ಲಿ ವರುಣನ ಕೃಪೆಯಿಂದ ಉತ್ತಮ ಮಳೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜನರು ನೆಮ್ಮದಿಯಿಂದ ವಾಸ ಮಾಡುವ ಪರಿಸ್ಥಿತಿ ಪ್ರಕೃತಿ ಮಾತೆ ನಿರ್ಮಿಸಿತ್ತಾಳೆ ಎಂದರು. ಜಿಲ್ಲಾ ಪೊಲೀಸ್ ಸಶಸ್ತ್ರ ಪಡೆ, ನಾಗರಿಕ ಸಿವಿಲ್ ಪೊಲೀಸ್ ತಂಡ, ಮಹಿಳಾ ಪೊಲೀಸ್ ತಂಡ, ಗೃಹ ರಕ್ಷಕ ದಳ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ್ ಸೇವಾದಳ ಹಾಗೂ ವಿವಿಧ ಶಾಲಾ ಮಕ್ಕಳ ತಂಡಗಳು ಸೇರಿ ಒಟ್ಟು 15 ತುಕಡಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಪಾಲಿಕೆ ಮೇಯರ್ ಲಲಿತಾ ರವೀಶ್, ಉಪಮೇಯರ್ ರೂಪಶ್ರೀ, ಜಿಪಂ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹ ಮೂರ್ತಿ, ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಶುಭಕಲ್ಯಾಣ,ಎಸ್‌ಪಿ ಡಾ. ಕೆ. ವಂಶಿಕೃಷ್ಣ, ಪಾಲಿಕೆ ಆಯುಕ್ತ ಶಿವಕುಮಾರ್, ಡಿಡಿಪಿಐ ಆರ್.ಕಾಮಾಕ್ಷಿ ಇತರರಿದ್ದರು.