Advertisement

ಕೋವಿಡ್ ನಿಯಂತ್ರಣಕ್ಕೆ ಸಾಕಷ್ಟು ಶ್ರಮಿಸಿದ ಜಿಲ್ಲಾಡಳಿತ:ಸಿ.ಸಿ. ಪಾಟೀಲ ಮೆಚ್ಚುಗೆ

03:07 PM Jun 09, 2020 | Suhan S |

ಗದಗ: ಕೋವಿಡ್‌-19 ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಸಾಕಷ್ಟು ಶ್ರಮಿಸಿದೆ. ಕೋವಿಡ್‌-19 ಪ್ರಕರಣಗಳನ್ನು ಇತರೆ ಜಿಲ್ಲೆಗಳಿಗೆ ಹೋಲಿಸಿದರೆ, ಗದಗಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ ಇರುವುದು ನೆಮ್ಮದಿದಾಯಕವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈವರೆಗೆ 43 ಕೋವಿಡ್‌-19 ಪ್ರಕರಣಗಳು ದೃಢಪಟ್ಟಿವೆ. ಆ ಪೈಕಿ ಹೊರ ರಾಜ್ಯದಿಂದ ಬಂದಿರುವ 23 ಜನರಿಗೆ ಸೋಂಕು ದೃಢಪಟ್ಟಿವೆ. ಈಗಾಗಲೇ 33 ಸೋಂಕಿತರು ಗುಣಮುಖರಾಗಿದ್ದಾರೆ. 8 ಜನರಿಗೆ ಕೋವಿಡ್‌-19 ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 13,333 ಜನರನ್ನು ಹೋಮ್‌ ಕ್ವಾರಂಟೈನ್‌ನಲ್ಲಿ ಹಾಗೂ 237 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 9 ನಿಯಂತ್ರಿತ ಪ್ರದೇಶಗಳ ಪೈಕಿ ರಂಗನವಾಡಾ ಪ್ರದೇಶ ಹಾಗೂ ರೋಣ ತಾಲೂಕಿನ ಕೃಷ್ಣಾಪುರ ಪ್ರದೇಶಗಳನ್ನು ನಿಯಂತ್ರಿತ ಪ್ರದೇಶಗಳೆಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದ್ದು, ಅವುಗಳು ಈಗ ಸಾಮಾನ್ಯ ಪ್ರದೇಶಗಳಾಗಿ ಮಾರ್ಪಟ್ಟಿವೆ. ಹೀಗಾಗಿ ಜಿಲ್ಲೆಯಲ್ಲಿ 7 ನಿಯಂತ್ರಿತ ಪ್ರದೇಶಗಳು ಸಕ್ರಿಯವಾಗಿವೆ. ನಿಯಂತ್ರಿತ ಪ್ರದೇಶಗಳಲ್ಲಿನ 1,536 ಜನರ ಆರೋಗ್ಯ ತಪಾಸಣೆ ನಡೆಸಲಾಗಿದೆ.

777 ವಿವಿಧ ರಾಜ್ಯಗಳಲ್ಲಿನ ವಲಸಿಗರನ್ನು ಹುಬ್ಬಳ್ಳಿಯ ರೈಲು ನಿಲ್ದಾಣದವರೆಗೆ ಉಚಿತವಾಗಿ ಕಳುಹಿಸಿಕೊಡಲಾಗಿದೆ. ಇದರಲ್ಲಿ 446 ಜನ ವಲಸೆ ಕಾರ್ಮಿಕರಿದ್ದಾರೆ. 4867 ಜನರು ಗೋವಾದಿಂದ ವಲಸೆ ಬಂದಿದ್ದಾರೆ. 432 ಜನರು ಮಹಾರಾಷ್ಟ್ರದಿಂದ ಗದಗ ರೈಲು ನಿಲ್ದಾಣಕ್ಕೆ ಆಗಮಿಸಿದ್ದು, ಇದರಲ್ಲಿ ಗದಗ ಜಿಲ್ಲೆಯ 199 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸಿ, ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿದೆ.

ಕೋವಿಡ್‌-19 ನಿಯಂತ್ರಣದ ನಿಮಿತ್ತ ರಾಯಚೂರು ಜಿಲ್ಲೆಯ ಹಟ್ಟಿ ಗೋಲ್ಡ್‌ ಮೈನ್ಸ್‌ ಲಿಮಿಟೆಡ್‌ ನಿಂದ 1000 ಆಹಾರ ಕಿಟ್‌ಗಳನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದ್ದು, ಆ ಪೈಕಿ 200 ಕಿಟ್‌ಗಳನ್ನು ಲಕ್ಕುಂಡಿ ನಿಯಂತ್ರಿತ ಪ್ರದೇಶದಲ್ಲಿ ವಿತರಿಸಲಾಗಿದೆ. ಅದರಂತೆ ರೋಣ ತಾಲೂಕಿನ ಹೊಳೆಆಲೂರು ಭಾಗದಲ್ಲೂ ವಿತರಿಸಲಾಗುತ್ತದೆ. ಇನ್ನುಳಿದವುಗಳನ್ನು ಮುಂಬರುವ ದಿನಗಳಲ್ಲಿ ಗೊತ್ತು ಪಡಿಸಲಾಗುವ ನಿಯಂತ್ರಿತ ಪ್ರದೇಶಗಳಲ್ಲಿ ವಿತರಿಸಲು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.  ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆಯಾಗಿದ್ದು, ಹೆಸರು ಬೀಜದ ದಾಸ್ತಾನು ಸಾಕಷ್ಟಿದೆ. ಬಿತ್ತನೆ ಬೀಜದ ಕೊರತೆಯಾಗದಂತೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ ಎಂದು ತಿಳಿಸಿದರು.

Advertisement

ರೋಣ ಶಾಸಕ ಕಳಕಪ್ಪ ಬಂಡಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಅಪರ ಜಿಲ್ಲಾಧಿಕಾರಿ ಸತೀಶಕುಮಾರ್‌ ಎಂ., ಎಸ್‌ಪಿ ಯತೀಶ್‌ ಎನ್‌. ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next