Advertisement

ಸಿ.ಎ. ಸೈಟ್‌ಗೆ ಸಂಘ-ಸಂಸ್ಥೆಗಳ ನಿರಾಸಕ್ತಿ

05:57 PM Dec 06, 2021 | Team Udayavani |

ಉಡುಪಿ: ಬೆಂಗಳೂರು, ಮಂಗಳೂರಿನಂಥ ನಗರದಲ್ಲಿ ಸಿಎ ಸೈಟ್‌ (ಸಿವಿಕ್‌ ಎಮಿನಿಟಿ ಸೈಟ್‌= ನಾಗರಿಕ ಸೇವಾ ಸೌಲಭ್ಯಗಳ ನಿವೇಶನ) ಪಡೆಯಲು ನೋಂದಾಯಿಸಲ್ಪಟ್ಟ ಸಾರ್ವಜನಿಕ ಸಂಘ-ಸಂಸ್ಥೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಸಲ್ಲಿಕೆಯಾಗುತ್ತದೆ. ಆದರೆ ಉಡುಪಿಯಲ್ಲಿ ಮಾತ್ರ ನಿರಾಸಕ್ತಿ ಕಂಡು ಬಂದಿದೆ.

Advertisement

ಜಿಲ್ಲಾ ಕೇಂದ್ರದಲ್ಲಿ ವಿವಿಧ ಅಸೋಸಿಯೇಶನ್‌, ಯೂನಿಯನ್‌ ಸಹಿತ ಸಂಘ-ಸಂಸ್ಥೆಗಳು ಸರಕಾರಿ ಜಾಗ
ಪಡೆದು ಕಚೇರಿ, ಸಭಾ ಭವನನಿರ್ಮಿಸುವ ಕನಸು ಹೊಂದಿರುತ್ತವೆ.ಆದರೆ ನಗರ ಭಾಗದಲ್ಲಿ 1.9 ಎಕ್ರೆ ಜಾಗವಿದ್ದರೂ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಇದುವರೆಗೆ ಅರ್ಜಿ ಸಲ್ಲಿಸಿದ್ದು ಮೂರು ಸಂಘ-ಸಂಸ್ಥೆಗಳು ಮಾತ್ರ. ಇದಕ್ಕೆ ಹೊರತಾಗಿ ಸಿಎ ಸೈಟ್‌ಗಳನ್ನು ಇದುವರೆಗೆ ಐದು ಸರಕಾರಿ ಸ್ವಾಮ್ಯದ ಸಂಸ್ಥೆಗಳು 30 ವರ್ಷಗಳ ಲೀಸ್‌ಗೆ ಪಡೆದುಕೊಂಡಿವೆ.

ಹಿಂದೇಟು ಏಕೆ?
ಮೂರು ವರ್ಷಗಳ ಹಿಂದೆ ಸರಕಾರ ಸ್ಥಿರಾಸ್ತಿ ದರಪಟ್ಟಿ ಹೆಚ್ಚಿಸಿದ ಪರಿಣಾಮ ಸಿಎ ಸೈಟ್‌ಗಳ ದರ ಶೇ. 25ರಿಂದ
30ರಷ್ಟು ಹೆಚ್ಚಿಸಿವೆ. ಲಭ್ಯ ನಿವೇಶನ ತಮಗೆ ಸೂಕ್ತವಲ್ಲ ಎಂಬ ಅಭಿಪ್ರಾಯವೂ ಇದೆ. ಈ ನಿವೇಶನ ಪಡೆಯುವುದು ಅತ್ಯಂತ ದುಬಾರಿಯಾದ ಪರಿಣಾಮ ಸಂಘ, ಸಂಸ್ಥೆಗಳು ಸೈಟ್‌ ಪಡೆಯಲು ಹಿಂದೇಟು ಹಾಕಿವೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಪ್ರಸ್ತುತ ಬಹುತೇಕ ಸಾರ್ವಜನಿಕ ಸಂಸ್ಥೆಗಳು ಬಾಡಿಗೆ ಕಟ್ಟಡ, ವಾಣಿಜ್ಯ ಸಂಕೀರ್ಣಗಳಲ್ಲಿಯೇ ಕಾರ್ಯನಿರ್ವಹಿಸುತ್ತಿವೆ.

ಏನಿದು ಸಿಎ ಸೈಟ್‌ ?
ಒಬ್ಬ ವ್ಯಕ್ತಿ ಒಂದು ಎಕ್ರೆಗಿಂತ ಅಧಿಕವಾಗಿ ಖಾಸಗಿ ಲೇಔಟ್‌ ಮಾಡುವಾಗ 45/55 ಕಾನೂನು ಪಾಲಿಸಬೇಕು. ಇದರಲ್ಲಿ ರಸ್ತೆಗೆ, ಪಾರ್ಕ್‌ ಸಹಿತ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಿಎ ಸೈಟ್‌ ಬಿಟ್ಟುಕೊಡಬೇಕು. ರಾಜಕೀಯ ಮತ್ತು
ಧಾರ್ಮಿಕ ಹೊರತುಪಡಿಸಿ ಸಾಮಾಜಿಕ ವಾಗಿ ತೊಡಗಿಸಿಕೊಂಡ ಎಲ್ಲ ರೀತಿಯ ನೋಂದಾಯಿತ ಅಸೋಸಿಯೇಶನ್‌, ಯೂನಿಯನ್ಸ್‌, ಸಂಘ ಸಂಸ್ಥೆಗಳು ಈ ಸೈಟ್‌ನ್ನು ಪಡೆದುಕೊಳ್ಳುವ ಅರ್ಹತೆ ಹೊಂದಿವೆ.

ಎಲ್ಲಿ, ಎಷ್ಟು ಸೈಟ್‌ಗಳಿವೆ ?
ಶಿವಳ್ಳಿ ಗ್ರಾಮದ ಬಾಲಾಜಿ ಬಡಾವಣೆ 7 ಸೆಂಟ್ಸ್‌, 22.5 ಸೆಂಟ್ಸ್‌, 17.4 ಸೆಂಟ್ಸ್‌, 1.1 ಸೆಂಟ್ಸ್‌, ತೆಂಕನಿಡಿಯೂರು ಹಿರಣ್ಯ
ಧಾಮ ಬಡಾವಣೆಯಲ್ಲಿ 48 ಸೆಂಟ್ಸ್‌, ಅಲೆವೂರು 4.4 ಸೆಂಟ್ಸ್‌, 3.6 ಸೆಂಟ್ಸ್‌, ಕೊಡವೂರು 16.6 ಸೆಂಟ್ಸ್‌, 80 ಬಡಗ
ಬೆಟ್ಟು 12.9 ಸೆಂಟ್ಸ್‌, ಬಡಾನಿಡಿಯೂರು 8.3 ಸೆಂಟ್ಸ್‌, 2.8 ಸೆಂಟ್ಸ್‌, ಹೆರ್ಗಾ 29.9 ಸೆಂಟ್ಸ್‌ 16.6 ಸೆಂಟ್ಸ್‌ ಒಟ್ಟು 1.9 ಎಕ್ರೆ
ಸಿಎ ಸೈಟ್‌ಗಳಿವೆ. ಒಟ್ಟು 13 ಸಿಎ ಸೈಟ್‌ಗಳಲ್ಲಿ 8 ಸಿಎ ಸೈಟ್‌ನ ಫ್ಲ್ಯಾಟ್‌ಗಳ 78.45 ಸೆಂಟ್ಸ್‌ ನಿವೇಶನ ಖಾಲಿ ಇವೆ.

Advertisement

ಸರಕಾರಿ ಸಂಸ್ಥೆಗಳಿಂದ ಲೀಸ್‌ಗೆ
ಶಿವಳ್ಳಿಯಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ ವರ್ಕಿಂಗ್‌ ಸ್ಟಾಂಡರ್ಡ್‌ ಲ್ಯಾಬೋರೇಟರಿ ಮತ್ತು ಕಚೇರಿ ಕಟ್ಟಡ ನಿರ್ಮಾಣಕ್ಕೆ 5.36 ಲಕ್ಷ ರೂ., ಔಷಧ ನಿಯಂತ್ರಕರ ಕಚೇರಿ ಕಟ್ಟಡಕ್ಕೆ 20 ಲಕ್ಷ ರೂ., ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ 15.86 ಲಕ್ಷ ರೂ., ತೆಂಕನಿಡಿಯೂರು ಹಿರಣ್ಯಧಾಮ ಬಡಾವಣೆಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿ.ವಿ. 3.80 ಲಕ್ಷ ರೂ., ಹೆರ್ಗದಲ್ಲಿ ಲೆಕ್ಕ ಪರಿಶೋಧನಾ ವರ್ತುಲದ ಹಿರಿಯ ಉಪ ನಿರ್ದೇಶಕರ ಕಚೇರಿ ಕಟ್ಟಡ ನಿರ್ಮಾಣಕ್ಕೆ 6.04 ಲಕ್ಷ ರೂ. ಈ ಸರಕಾರಿ ಸಂಸ್ಥೆಗಳು ಲೀಸ್‌ಗೆ ಪಡೆದಿವೆ.

ಸ್ಥಿರಾಸ್ತಿ ದರಪಟ್ಟಿ ಇಳಿಸಲು ಸಾಧ್ಯವಿಲ್ಲ
ನಗರಾಭಿವೃದ್ಧಿ ಪ್ರಾಧಿಕಾರದ ಸಿಎ ಸೈಟ್‌ಗಳಲ್ಲಿ 8 ಪ್ಲಾಟ್‌ಗಳು ಖಾಲಿ ಇವೆ. ಹಿಂದಿನ ಸರಕಾರದ ನಿರ್ಧಾರದಂತೆ ಸ್ಥಿರಾಸ್ತಿ ದರಪಟ್ಟಿ ಇಳಿಸಲು ಸಾಧ್ಯವಿಲ್ಲ. ಪ್ರಸ್ತುತ ಸಿಎ ಸೈಟ್‌ ಪಡೆಯಲು ಮೂರು ಸಂಘ, ಸಂಸ್ಥೆಗಳಿಂದ ಅರ್ಜಿ ಬಂದಿವೆ. ಇದನ್ನು ಪ್ರಾಧಿಕಾರದ ಸಭೆಯಲ್ಲಿ ಪರಿಶೀಲಿಸಿ ಬಳಿಕ ನಿರ್ಧರಿಸಲಾಗುತ್ತದೆ. ಮುಂಬರುವ ದಿನಗಳಲ್ಲಿ ನೂತನ ಲೇಔಟ್‌ಗಳ ಸಿಎ ಸೈಟ್‌ ವಿಚಾರಕ್ಕೆ ಸಂಬಂಧಿಸಿ ನಾನೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ.
-ರಾಘವೇಂದ್ರ ಕಿಣಿ, ಅಧ್ಯಕ್ಷರು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ.

 

Advertisement

Udayavani is now on Telegram. Click here to join our channel and stay updated with the latest news.

Next