ವಿಜಯಪುರ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿಯ ಪ್ರಶ್ನಾತೀತ ನಾಯಕರಾಗಿದ್ದು, ಪಕ್ಷ ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಬರುವ ವಿಧಾನಸಭೆ ಚುನಾವಣೆಯನ್ನು ಬಿಎಸ್‌ವೈ ಹಾಗೂ ಹಿರಿಯ ನಾಯಕರ ನೇತೃತ್ವದಲ್ಲೇ ಎದುರಿಸಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿ, ಯಡಿಯೂರಪ್ಪ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಪಕ್ಷ ಅವರಿಗೆ ಕೇಂದ್ರ ಮಟ್ಟದಲ್ಲಿ ಉನ್ನತ ಸ್ಥಾನ ನೀಡಿದೆ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಎಲ್ಲರೂ ಒಗ್ಗಟ್ಟಾಗಿದ್ದೇವೆ. ವಿಪಕ್ಷಗಳು ಇಲ್ಲದ ಸುದ್ದಿ ಹಬ್ಬಿಸುವ ಕೆಲಸ ಮಾಡಿದರೂ ಪಕ್ಷದ ಕಾರ್ಯಕರ್ತರು ಹುಮ್ಮಸ್ಸಿನಿಂದ ಇದ್ದಾರೆ. ಬರುವ ಚುನಾವಣೆಯಲ್ಲೂ ಬಿಜೆಪಿ ಗೆಲ್ಲುವ ಮೂಲಕ ಅಧಿ ಕಾರಕ್ಕೆ ಬರಲಿದ್ದೇವೆ. ಮೈಸೂರಿಗೆ ಹೋಗಿದ್ದ ಸಂದರ್ಭದಲ್ಲಿ ಪಕ್ಷದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾಂಗ್ರೆಸ್ ನಾಯಕರಾದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸ್ಪ ರ್ಧಿಸುವುದಾಗಿ ಸಹಜವಾಗಿ ಹೇಳಿದ್ದಾರೆ. ಆದರೆ ಯಾರ ಸ್ಪರ್ಧೆ ಎಲ್ಲಿಂದ ಎಂದು ನಿರ್ಧಸುವುದು ಪಕ್ಷ ಹಾಗೂ ಹೈಕಮಾಂಡ್ ಎಂದರು.
ಯಡಿಯೂರಪ್ಪ ಅವರನ್ನು ಕಡೆಗಣಿಸುವ ಮಾತೇ ಇಲ್ಲ. ರಾಜ್ಯದಲ್ಲಾಗಲಿ, ರಾಷ್ಟ್ರಮಟ್ಟದಲ್ಲಾಗಲಿ ಅವರಿಗೆ ಯಾವುದೇ ರೀತಿಯ ಅಗೌರವ ತೋರಿಲ್ಲ. ಬಿಎಸ್‌ವೈ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಮಹಾನ್ ನಾಯಕರಲ್ಲಿ ಒಬ್ಬರು. ಕೇವಲ ಒಂದೇ ಸ್ಥಾನದಿಂದ 140 ಸ್ಥಾನದವರೆಗೆ ಪಕ್ಷ ಮುನ್ನಡೆಯಲು ಅವರ ಶ್ರಮವೂ ಇದೆ.
-ಶಂಕರ ಪಾಟೀಲ್ ಮುನೇನಕೊಪ್ಪ, ಸಕ್ಕರೆ ಸಚಿವ
ಯಡಿಯೂರಪ್ಪ ಅವರನ್ನು ಕೊಪ್ಪಳದ ಕಾರ್ಯಕ್ರಮಕ್ಕೆ ಕಡೆಗಣಿಸಿಲ್ಲ. ಆಕಸ್ಮಿಕ ಗೊಂದಲ ಇದ್ದರೆ ಅದನ್ನು ನೋಡಿಕೊಳ್ಳಲು ಹೈಕಮಾಂಡ್ ಗಟ್ಟಿಯಾಗಿದೆ. ನಮ್ಮ ಹಿರಿಯರು ಏನು ಸೂಚನೆ ನೀಡುತ್ತಾರೋ ಅದನ್ನೇ ಪಾಲನೆ ಮಾಡುವ ಪಕ್ಷ ನಮ್ಮದು. ಒಂದು ವೇಳೆ ಕಡೆಗಣನೆ ಆಗಿದ್ದರೂ ನನಗೆ ಗೊತ್ತಿಲ್ಲ.
–ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ