ದಾವಣಗೆರೆ: ಮುಂದಿನ ವಿಧಾನ ಸಭಾ ಚುನಾವಣೆಯನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ತಾವು ಬದ್ಧ ಎಂದು ನಗರಾಭಿವೃದ್ಧಿ ಇಲಾಖೆ ಸಚಿವರೂ ಆಗಿರುವ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ದಾವಣಗೆರೆಗೆ ಆಗಮಿಸಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಮಿತ್ ಶಾರವರ ಹೇಳಿಕೆಗೆ ನಾವು ಬದ್ಧ. ನಾಯಕತ್ವದ ವಿಚಾರದ ಬಗ್ಗೆ ಗೊಂದಲ ಇಲ್ಲ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರವಾಸದ ಬಗ್ಗೆ ಪಕ್ಷದ ವರಿಷ್ಠರು, ಮುಖಂಡರು ನಿರ್ಧಾರ ಮಾಡುತ್ತಾರೆ. ಅವರು(ಯಡಿಯೂರಪ್ಪ) ರಾಜ್ಯ ಪ್ರವಾಸ ಮಾಡುವುದರಲ್ಲಿ ತಪ್ಪೇನು ಇಲ್ಲ. ಯಡಿಯೂರಪ್ಪ ಅವರು ಬಿಜೆಪಿಯನ್ನ ತಳಮಟ್ಟದಿಂದ ಸಂಘಟಿಸಿದ ಶ್ರೀಮಂತ ನಾಯಕರು. ಯಡಿಯೂರಪ್ಪ ಮತ್ತು ಜಗದೀಶ ಶೆಟ್ಟರ್‌ಗೆ ಮಾತುಕತೆ ಬಗ್ಗೆ ನನಗೆ ಏನು ಗೊತ್ತಿಲ್ಲ . ವಿಜಯಪುರ ಶಾಸಕ ಯತ್ನಾಳ್ ನೀಡಿದ ಹೇಳಿಕೆಗೆ ನಾನು ಉತ್ತರಿಸುವುದಿಲ್ಲ ಎಂದರು.
ಇದನ್ನೂ ಓದಿ :ಕಿಷ್ಕಿಂದಾ ಅಂಜನಾದ್ರಿ ಬೆಟ್ಟದಲ್ಲಿ ಶ್ರೀ ಆಂಜನೇಯನ ದರ್ಶನ ಸಿಗದೆ ಹಿಂತಿರುಗಿದ ನಟ ಪುನೀತ್
ಯಡಿಯೂರಪ್ಪ ಅವರು ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದ ಕಾಲದಲ್ಲೇ ರಾಜ್ಯ ಸುತ್ತಿ ಪಕ್ಷವನ್ನು ಕಟ್ಟಿದ್ದಾರೆ. ಅಮಿತ್ ಶಾ ಅವರು ಯಡಿಯೂರಪ್ಪ ಅವರ ಬಗ್ಗೆ ಅಪಾರ ಗೌರವ ಇಟ್ಟುಕೊಂಡು ಮಾತಾಡಿದ್ದಾರೆ. ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬೆಳಗ್ಗೆಯಿಂದ ಸಂಜೆವರೆಗೆ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.