Advertisement

ಬೈಪಾಸ್‌ –ಬಜಗೋಳಿ: ಸಂಚಾರಕ್ಕೆ ಕಂಟಕವಾದ ವಿದ್ಯುತ್‌ ಕಂಬಗಳು 

03:49 PM Apr 18, 2017 | |

ಕಾರ್ಕಳ: ಬೈಪಾಸ್‌ – ಬಜಗೋಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ದಿನದಿಂದ ದಿನಕ್ಕೆ  ಆಮೆ ವೇಗದಲ್ಲಿ ನಡೆಯುತ್ತಿದ್ದು ಜೋಡುಕಟ್ಟೆಯ ಬಳಿ ರಸ್ತೆ ಅಗಲಗೊಳಿಸುವ ಸಲುವಾಗಿ ತೆರವುಗೊಳಿಸಬೇಕಿದ್ದ  ಬೃಹತ್‌ ವಿದ್ಯುತ್‌ ಕಂಬಗಳನ್ನು ಇನ್ನೂ ತೆರವುಗೊಳಿಸದೇ ಇರುವುದು ರಸ್ತೆ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿದೆ.

Advertisement

ನಿರ್ಲಕ್ಷ್ಯ
ಕೇಂದ್ರ ಸರಕಾರದ ಅಧೀನ ಕ್ಕೊಳಪಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಯ ಮೇಲುಸ್ತುವಾರಿ ವಹಿಸಿದ್ದು, ಸೋಲಾಪುರ – ಚಿತ್ರದುರ್ಗ – ಶಿವಮೊಗ್ಗ – ಕಾರ್ಕಳ – ಮಂಗಳೂರು ರಸ್ತೆ  ಕಾಮಗಾರಿ ಈಗಾಗಲೇ ಪ್ರಗತಿ ಯಲ್ಲಿದ್ದು,  ಕಾರ್ಕಳ ಮೂಲಕ ಬೈಪಾಸ್‌ನಿಂದ ಬಜಗೋಳಿಯವರೆಗೂ ಹಾದುಹೋಗುವ ರಸ್ತೆ ಕಾಮಗಾರಿ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ. ಆದರೆ ಮೆಸ್ಕಾಂನ ಸಹಭಾಗಿತ್ವದಿಂದ ರಸ್ತೆಯ ಸುತ್ತಲೂ ಇರುವ ವಿದ್ಯುತ್‌ ಕಂಬ ಹಾಗೂ ಟ್ರಾನ್ಸ್‌ಫಾರ್ಮರ್‌ಗಳನ್ನು ತೆರವುಗೊಳಿಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾದ ಪ್ರಾಧಿಕಾರ ಆ ವ್ಯವಸ್ಥೆಯನ್ನು ಮಾಡುವು ದರಲ್ಲಿ ತೀರಾ ನಿರ್ಲಕ್ಷತನ ತಾಳಿದೆ. 

ಅಪಾಯಕಾರಿ ಹಂತಕ್ಕೆ
ಅಲ್ಲಲ್ಲಿ ಕಲ್ಲುಗಳನ್ನು ರಸ್ತೆಗಳಲ್ಲೇ ಬಿಟ್ಟು, ಪಕ್ಕದಲ್ಲಿಯೇ ವಿದ್ಯುತ್‌ ಕಂಬಗಳಿದ್ದರೂ ಅದನ್ನು ತೆರವುಗೊಳಿಸದೇ ಇರುವ ಪರಿಣಾಮವಾಗಿ ದಿನೇ ದಿನೇ ಇದೇ ರಸ್ತೆಯನ್ನು ಕ್ರಮಿಸಿ ದೂರದ ಧರ್ಮಸ್ಥಳ, ಶೃಂಗೇರಿ ಮೊದಲಾದ ಊರುಗಳಿಗೆ ಹೋಗಬೇಕಾದ ವಾಹನಗಳಿಗೆ ದಿಕ್ಕು ತಪ್ಪುವಂತಾಗಿದೆ. ಒಟ್ಟಾರೆ ಅಸಮರ್ಪಕ ಪ್ರಕ್ರಿಯೆಯಿಂದ ಸಂಚಾರ ಅಪಾಯಕಾರಿ ಹಂತಕ್ಕೆ ತಲುಪಿದೆ.

ಮುಂದುವರಿದ ಗೊಂದಲ
ಮೊದಲೇ ಜೋಡುಕಟ್ಟೆ, ಮೀಯ್ನಾರು, ಬಜಗೋಳಿ ರಸ್ತೆಯಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆೆ. ಇದೀಗ ಅರ್ಧಂಬಧ‌ì ರಸ್ತೆ ಕಾಮಗಾರಿಯಿಂದ ಅಲ್ಲಲ್ಲಿ ಹಾಗೇ ಬಿಟ್ಟಿರುವ ಕಲ್ಲು ಹಾಗೂ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸದೇ ಇರುವುದರಿಂದ ರಸ್ತೆಯ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿದೆ. ರಾತ್ರಿ ಹೊತ್ತು ಕಣ್ಣಿಗೆ ಕಂಡೂ ಕಾಣದಂತಿರುವ ರಸ್ತೆ ಮಧ್ಯದಲ್ಲಿರುವ ವಿದ್ಯುತ್‌ ಕಂಬಗಳಿಂದ ವಾಹನಗಳು ರಸ್ತೆ ಪಕ್ಕದ ಹೊಂಡಕ್ಕುರುಳಿ ಬೀಳುವುದು, ಪಾದಚಾರಿಗಳು ದಾರಿಯೇ ಕಾಣದೇ ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿರುವುದು ಮಾಮೂಲಾಗಿಬಿಟ್ಟಿದೆ. 

ರಸ್ತೆಯಲ್ಲಿಯೇ ಟ್ರಾನ್ಸ್‌ ಫಾರ್ಮರ್‌
ಜೋಡುಕಟ್ಟೆಯಲ್ಲಿ ರಸ್ತೆಯಲ್ಲಿಯೇ ಟ್ರಾನ್ಸ್‌ಫಾರ್ಮರ್‌ಗಳಿದ್ದರೂ ಅದನ್ನು ತೆರವುಗೊಳಿಸುವ ಕೆಲಸವನ್ನು ಇಲಾಖೆ ಮಾಡುತ್ತಿಲ್ಲ. ಮೆಸ್ಕಾಂ ಕೂಡ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ತೆಪ್ಪಗಿದ್ದರೆ, ರಸ್ತೆಯಿಂದ ಯಾರೂ ಹೊಂಡಕ್ಕುರುಳಿ ಬೀಳಲಿ ನಾವು ಮಾತ್ರ ಕಾಮಗಾರಿಯನ್ನು ಇನ್ನಷ್ಟು ನಿಧಾನಕ್ಕೆ ಮಾಡುತ್ತೇವೆ. ಯಾವುದೇ ಸಾವು – ನೋವುಗಳಾದರೂ ಅದಕ್ಕೆ ನಾವು ಕಾರಣರಲ್ಲ ಎನ್ನುವ ಧೋರಣೆ ರಾಷ್ಟ್ರೀಯ ರಸ್ತೆ ಪ್ರಾಧಿಕಾರದ್ದು ಎನ್ನುವುದು ರಸ್ತೆಯ ಅವಸ್ಥೆ ನೋಡಿದಾಗಲೇ ತಿಳಿಯುತ್ತದೆ. ಮೊದಲೇ ರಸ್ತೆ ಕಾಮಗಾರಿ ನಿಧಾನಗತಿಯಿಂದ ನಡೆಯುತ್ತಿರುವುದರಿಂದ ಧೂಳಿನ ಸಮಸ್ಯೆಯನ್ನು ಅನುಭವಿಸುತ್ತಿದ್ದೇವೆ.ಇದೀಗ ಅಸಮರ್ಪಕ ಭಂಗಿಯಲ್ಲಿ ನಿಂತು ಭಯ ಹುಟ್ಟಿಸುತ್ತಿರುವ ಟ್ರಾನ್ಸ್‌ ಫಾರ್ಮರ್‌ಗಳು ಹಾಗೂ ವಿದ್ಯುತ್‌ ಕಂಬಗಳು ಯಾರ ಮೇಲೆ ಬಿದ್ದರೂ ಆಶ್ಚರ್ಯವಿಲ್ಲ. ಈ ರಸ್ತೆಯಲ್ಲಿ ಜೀವಗಳಿಗೆ ಬೆಲೆ ಇಲ್ಲ ಎನ್ನುವುದು ಸ್ಥಳೀಯ ನಿವಾಸಿಗಳ ಹೇಳಿಕೆ ಹಾಗೂ ಆಕ್ರೋಶ.

Advertisement

ಟ್ರಾನ್ಸ್‌ಫಾರ್ಮರ್‌ಗಳು ರಸ್ತೆಯ ಮಧ್ಯದಲ್ಲಿಯೇ ಇವೆ. ರಸ್ತೆ ಕಾಮಗಾರಿಗಳನ್ನು ನಡೆಸುವಾಗ ಇಲಾಖೆ ಪಕ್ಕದಲ್ಲಿರುವ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಿ, ಆ ಕಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಆದರೆ ಇಲ್ಲಿ ಇದನ್ನೇ ಕಡೆಗಣಿಸಲಾಗಿದೆ. ಇದು ಮೆಸ್ಕಾಂ ಹಾಗೂ ಸಂಬಂಧಪಟ್ಟ ಇಲಾಖೆಗಳ ದಿವ್ಯ ನಿರ್ಲಕ್ಷ. 
ಮಂಜುನಾಥ ಪ್ರಭು, ಮಿಯ್ನಾರು ನಿವಾಸಿ
    
ಮಂಗಳೂರಿನ ರಸ್ತೆ ಅಭಿವೃದ್ಧಿ ಪ್ರಾಧಿಕಾರ ಕಾಮಗಾರಿ ಆರಂಭವಾಗುವ ಮೊದಲೇ ರಸ್ತೆ ಪಕ್ಕದಲ್ಲಿದ್ದ ವಿದ್ಯುತ್‌ ಕಂಬ ಗಳನ್ನು ತೆರವುಗೊಳಿಸಿ, ಪರ್ಯಾಯ ಜಾಗದಲ್ಲಿ ಅದನ್ನು ಅಳವಡಿಸುತ್ತೇವೆ ಎನ್ನುವ ಭರವಸೆ ಕೊಟ್ಟಿತ್ತು. ಮೆಸ್ಕಾಂ ಈ ಕುರಿತು ಎಸ್ಟಿಮೇಟ್‌ ನೀಡಿ ಒಪ್ಪಿಗೆ ಸೂಚಿಸಿತ್ತು. ಕಂಬಗಳನ್ನು ತೆರವುಗೊಳಿಸುವುದು ಪ್ರಾಧಿಕಾರದ ಜವಾಬ್ದಾರಿ. ಈ ಪ್ರಕ್ರಿಯೆ ನಿಧಾನವಾದರೂ ಅದಕ್ಕೆ ಪ್ರಾಧಿಕಾರವೇ ಕಾರಣ.
ನಾರಾಯಣ ನಾಯ್ಕ, ಎಂಜಿನಿಯರ್‌ ಮೆಸ್ಕಾಂ ಕಾರ್ಕಳ

ಪ್ರಸಾದ್‌ ಶೆಣೈ ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next