ಹಾಲಾಡಿ: ಬೈಂದೂರು – ವಿರಾಜಪೇಟೆ ರಾಜ್ಯ ಹೆದ್ದಾರಿಯ ಹಾಲಾಡಿ ಹಾಗೂ ಕಾಸಾಡಿ ಮಧ್ಯೆ ಎರಡು ಕಡೆಗಳಲ್ಲಿ ರಸ್ತೆ ಬದಿಯ ಗುಡ್ಡ ನಿರಂತರವಾಗಿ ಕುಸಿಯುತ್ತಿದೆ. ಇದರಿಂದ ರಾಜ್ಯ ಹೆದ್ದಾರಿಯ ಸಂಚಾರಕ್ಕೆ ಅಪಾಯದ ಭೀತಿ ಎದುರಾಗಿದೆ. ನಿರಂತರ ಮಳೆಯಿಂದಾಗಿ ಹಾಲಾಡಿಯಿಂದ ಗೋಳಿಯಂಗಡಿ ಮುಖ್ಯ ರಸ್ತೆಯ ಹಾಲಾಡಿ- ಕಾಸಾಡಿ ಮಧ್ಯೆ ಗುಡ್ಡ ಕುಸಿತವು ಕಳೆದ ಜುಲೈನಿಂದಲೇ ಆರಂಭಗೊಂಡಿದೆ.
ಆಗ ಸಣ್ಣ ಮಟ್ಟದಲ್ಲಿ ಆರಂಭಗೊಂಡಿದ್ದು, ಈಗ ದೊಡ್ಡ ಮಟ್ಟದಲ್ಲಿ ಅಪಾಯ ತಂದೊಡ್ಡುವ ಭೀತಿ ಶುರುವಾಗಿದೆ. ಬಂಡೆಕಲ್ಲು ಬೀಳುವ ಭೀತಿ ಗುಡ್ಡದ ಸುಮಾರು 50 ಮೀಟರ್ ವರೆಗೆ ಮಣ್ಣು ಕುಸಿದಿರುವುದರಿಂದ ದೊಡ್ಡ ಬಂಡೆ ಕಲ್ಲುಗಳು ಬೀಳಲು ಸಿದ್ಧವಾಗಿದ್ದು, ಇನ್ನಷ್ಟು ಕುಸಿತಗೊಂಡರೆ ಆ ಕಲ್ಲುಗಳು ರಸ್ತೆಗೆ ಬೀಳುವ ಅಪಾಯವು ಇದೆ. ವಾಹನಗಳು ಸಂಚರಿಸುವ ವೇಳೆ ಏನಾದರೂ ಜಾರಿಕೊಂಡು ಬಂದು ರಸ್ತೆಗೆ ಬಿದ್ದರೆ ಯಾರು ಹೊಣೆ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ಪ್ರಮುಖ ಹೆದ್ದಾರಿ ಬೈಂದೂರು – ವಿರಾಜಪೇಟೆ ರಾಜ್ಯ ಹೆದ್ದಾರಿಯು ಮುಖ್ಯವಾಗಿ ಎರಡು ಪ್ರಮುಖ ಧಾರ್ಮಿಕ ಕೇಂದ್ರ ಗಳಾದ ಕೊಲ್ಲೂರು – ಶೃಂಗೇರಿ ನಡುವಿನ ಸಂಪರ್ಕ ರಸ್ತೆಯಾಗಿದೆ.
ಇದಲ್ಲದೆ ಕುಂದಾಪುರ, ಸಿದ್ದಾಪುರ, ಶಂಕರನಾರಾಯಣ, ಹಾಲಾಡಿ, ಹೆಬ್ರಿ, ಕಾರ್ಕಳ, ಆಗುಂಬೆ ಕಡೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ನಿತ್ಯ ಸಾವಿರಾರು ವಾಹನಗಳು, ಹತ್ತಾರು ಕೆಎಸ್ ಆರ್‌ಟಿಸಿ, ಖಾಸಗಿ ಬಸ್‌ಗಳು ಸಂಚರಿಸುತ್ತವೆ.
ಶಾಶ್ವತ ಕಾಯಕಲ್ಪಕ್ಕೆ ಆಗ್ರಹ
ಇದು ಈ ಭಾಗದ ಪ್ರಮುಖ ರಸ್ತೆಗಳಲ್ಲಿ ಒಂದಾಗಿದ್ದು, ಪ್ರತಿನಿತ್ಯ ಸಂಚರಿಸಲು ಸಾವಿರಾರು ಮಂದಿ ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ. ಈಗಾಗಲೇ ರಸ್ತೆಯವರೆಗೆ ಕುಸಿದಿರುವ ಗುಡ್ಡ ಇನ್ನಷ್ಟು ಕುಸಿದು, ಸಂಚಾರಕ್ಕೂ ತೊಡಕಾಗುವ ಭೀತಿಯಿದೆ. ಆದ್ದರಿಂದ ಭವಿಷ್ಯದಲ್ಲಿ ಕುಸಿಯದಂತೆ ಶಾಶ್ವತ ಕಾಮಗಾರಿ ಕಾಯಕಲ್ಪ ಕೈಗೊಳ್ಳಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ. ಶೀಘ್ರ ದುರಸ್ತಿ ಹಾಲಾಡಿ ಸಮೀಪದ ರಸ್ತೆ ಬದಿ ಗುಡ್ಡ ಕುಸಿದಿರುವ ಬಗ್ಗೆ ಗಮನದಲ್ಲಿದ್ದು, ಮಳೆಗಾಲದಲ್ಲಿ ಕಾಮಗಾರಿ ಮಾಡಿದರೆ ಮತ್ತಷ್ಟು ಕುಸಿಯುವ ಅಪಾಯ ಇರುತ್ತದೆ. ಅದಕ್ಕೆ ಮಳೆ ಕಡಿಮೆಯಾಗುವವರೆಗೆ ಮಾಡಿರಲಿಲ್ಲ.
ಶೀಘ್ರ ರಸ್ತೆ: ಬದಿಗೆ ಬಿದ್ದಿರುವ ಮಣ್ಣನ್ನು ತೆರವು ಮಾಡಲಾಗುವುದು. ದೊಡ್ಡ ಬಂಡೆ ಕಲ್ಲುಗಳನ್ನು ಸಹ ತೆರವು ಮಾಡಲಾಗುವುದು. ಸೈಡ್‌ವಾಲ್ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು. –
ದುರ್ಗಾದಾಸ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಕುಂದಾಪುರ