Advertisement
ಏನಿದು ಯೋಜನೆ? ಪಕ್ಷಿ ನೀರು ಯೋಜನೆ ಯಡಿ ಬೈಂದೂರಿನ ಕ್ಷಿತಿಜ ನೇಸರಧಾಮ ಪರಿಸರದಲ್ಲಿನ ಪಕ್ಷಿ ಸಂಕುಲಕ್ಕೆ ನೀರುಣಿಸಲಾಗುತ್ತದೆ. ಇಲ್ಲಿ ನೀರಿನ ಸಮಸ್ಯೆಯಿಂದ ಬಹುತೇಕ ಪಕ್ಷಿಗಳು ವಲಸೆ ಹೋಗುತ್ತವೆ. ಕೆಲವು ನೀರಿಲ್ಲದೇ ಸಾವನ್ನಪ್ಪುತ್ತವೆ. ಇದನ್ನು ತಪ್ಪಿಸಲು ಜೇಸಿಐ ಶಿರೂರು ಸಾವಿರ ಮರಗಳಿಗೆ ಕಾಳು-ನೀರು ಯೋಜನೆ ಮೂಲಕ ಕಾಡಿನ ಮರಗಳಲ್ಲಿ ಆಹಾರ-ನೀರು ಇಡುವ ಯತ್ನ ನಡೆಸಿತ್ತು. ಇದರ ಮುಂದುವರಿದ ಭಾಗ ಎನ್ನುವಂತೆ ಕಲಾ ಶಿಕ್ಷಕರಾದ ಗಿರೀಶ್ ಗಾಣಿಗ ನೇತೃತ್ವದಲ್ಲಿ ಅಜಯ್ ಬೈಂದೂರು, ವೀರೇಂದ್ರ ನಾವುಂದ, ಮಂಜುನಾಥ ನೇತೃತ್ವದ ಯುವಕರ ತಂಡ ನೀರಿನ ವ್ಯವಸ್ಥೆ ಮಾಡುತ್ತಿದೆ.
ಸುಮಾರು 30 ಕಡೆಗಳಲ್ಲಿ ಹಕ್ಕಿಗಳಿಗಾಗಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಖಾಲಿ ಬಾಟಲಿಯಲ್ಲಿ ನೀರು ತುಂಬಿಸಿ ಅಗಲವಾದ ಪ್ಲಾಸ್ಟಿಕ್ ಪಾತ್ರೆಯನ್ನು ಮರಕ್ಕೆ ಕಟ್ಟಿ ಬಾಟಲಿಯನ್ನು ತಲೆಕೆಳಗಾಗಿ ಇಡಲಾಗುತ್ತದೆ. ಇದರಿಂದ ಪಾತ್ರೆಯಲ್ಲಿ ನೀರು ಖಾಲಿಯಾದಂತೆ ಬಾಟಲಿಯ ನೀರು ತುಂಬಿಕೊಳ್ಳುತ್ತದೆ. ವಾರಕ್ಕೊಮ್ಮೆ ಪುನಃ ನೀರು ತುಂಬಿಸಲಾಗುತ್ತದೆ.ಪ್ರತಿ ಮರಕ್ಕೆ ತಲಾ ಮೂವತ್ತು ರೂಪಾಯಿ ಖರ್ಚು ತಗಲುತ್ತದೆ. ಯುವಕರ ಈ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಪಕ್ಷಿಗಳಿಗೆ ನೀರೊದಗಿಸಿ
ಬೇಸಗೆಯಲ್ಲಿ ಎಲ್ಲೆಡೆಯೂ ನೀರಿನ ಸಮಸ್ಯೆ ಇರುತ್ತದೆ. ಅದರಲ್ಲೂ ಪಕ್ಷಿಗಳ ಪರಿಸ್ಥಿತಿ ಕಷ್ಟ. ಪಕ್ಷಿಗಳು ಇರುವ ಸ್ಥಳಗಳಲ್ಲಿ ನೀರನ್ನು ಒದಗಿಸುವ ಪ್ರಯತ್ನ ಇದು. ಎಲ್ಲರೂ ಇದನ್ನು ಮನೆಯಲ್ಲೂ ಮಾಡಬಹುದು.
– ಗಿರೀಶ್ ಗಾಣಿಗ, ಕಲಾ ಶಿಕ್ಷಕರು – ಅರುಣ ಕುಮಾರ್ ಶಿರೂರು