ಬೈಂದೂರು: ಶಾಲೆಯಲ್ಲಿ ವರ್ಗಾವಣೆ ಪ್ರಮಾಣಪತ್ರ ನೀಡಲು ವಿಳಂಬ ಮಾಡಿದರೆಂಬ ಕಾರಣಕ್ಕೆ ಎಸೆಸೆಲ್ಸಿ ಉತ್ತೀರ್ಣ ವಿದ್ಯಾರ್ಥಿಯೋರ್ವ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ಶಿರೂರು ಗ್ರಾಮದಲ್ಲಿ ನಡೆದಿದೆ.
ಶಿರೂರು ಮೇಲ್ಪಂಕ್ತಿಯ ನಿತಿನ್ ಆಚಾರಿ (16) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.
ಬೈಂದೂರು ಸರಕಾರಿ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ಪೂರೈಸಿದ್ದು, ಸೋಮವಾರ ಕಾಲೇಜಿಗೆ ವರ್ಗಾವಣೆ ಪ್ರಮಾಣ ಪತ್ರ ಪಡೆಯಲು ತೆರಳಿದ್ದ. ಎಸೆಸೆಲ್ಸಿ ತರಗತಿ ಮುಗಿಯುವ ಕೊನೆಯ ದಿನ ಕೆಲವು ವಿದ್ಯಾರ್ಥಿಗಳು ಶಾಲೆಯ ಹೊರಗಿನ ಸಿಸಿ ಕೆಮರಾ ಹಾಗೂ ಗೇಟ್ ಬೀಗವನ್ನು ಮುರಿದಿರುವ ಬಗ್ಗೆ ಉಪಪ್ರಾಂಶುಪಾಲರು ನಿತಿನ್ ಬಳಿ ವಿಚಾರಿಸಿದ್ದು, ಪಾಲಕರನ್ನು ಕರೆದುಕೊಂಡು ಬರುವಂತೆ ತಿಳಿಸಿದ್ದಾರೆ.
ಅವರ ಮಾತಿಗೆ ಒಪ್ಪಿ ಶಾಲೆಯಿಂದ ಮನೆಗೆ ತೆರಳಿದ್ದ ವಿದ್ಯಾರ್ಥಿ, ಈ ವಿಷಯ ಮನೆಯವರಿಗೆ ತಿಳಿದರೆ ತೊಂದರೆಯಾಗಬಹುದು ಎಂದು ಹೆದರಿ ಮಧ್ಯಾಹ್ನದ ಬಳಿಕ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನೆಯ ಮಾಹಿತಿ ಪಡೆದು ತನಿಖೆ ಕೈಗೆತ್ತಿಕೊಂಡಿದ್ದಾರೆ.