Advertisement

Byndoor:ನಮ್ಮ ಹಕ್ಕೊತ್ತಾಯ-ಬೈಂದೂರು ಪ.ಪಂ.ಹೆಸರಿಗಷ್ಟೇ ಅಲ್ಲ,ಜನರ ಕೆಲಸಕ್ಕೂ ಸಿಗುವಂತಾಗಬೇಕು

10:47 PM Apr 05, 2023 | Team Udayavani |

ಬೈಂದೂರು: ಹೊಸ ತಾಲೂಕಾಗಿ ಮೇಲ್ದರ್ಜೆಗೇರಿದ್ದ ಬೈಂದೂರಿಗೆ ಪಟ್ಟಣ ಪಂಚಾಯತ್‌ ಭಾಗ್ಯವೂ ಒಲಿದು ಬಂತು. ಆದರೆ ಪಟ್ಟಣ ಪಂಚಾಯತ್‌ ಘೋಷಣೆಯಾಗಿ ಬರೋಬ್ಬರಿ ಮೂರು ವರ್ಷ ಕಳೆದರೂ ಹೊಸ ಆಡಳಿತ ಮಾತ್ರ ರಚನೆಯಾಗಲಿಲ್ಲ. ಆಚೆಗೆ ಗ್ರಾಮ ಪಂಚಾಯತ್‌ ಆಗಿರದೇ, ಈಚೆಗೆ ಪೂರ್ಣ ಪ್ರಮಾಣದ ಪಟ್ಟಣ ಪಂಚಾಯತ್‌ ಆಗದೇ ಒಂದು ರೀತಿಯಲ್ಲಿ ಅತಂತ್ರ ಸ್ಥಿತಿ ಇಲ್ಲಿನ ಜನರದ್ದಾಗಿದೆ.

Advertisement

ಹೊಸ ತಾಲೂಕಾಗಿ ಮೇಲ್ದರ್ಜೆಗೇರಿದ್ದ ಬೈಂದೂರಿನ ಕೇಂದ್ರ ಪ್ರದೇಶವನ್ನು ಪುರಸಭೆಯಾಗಿ ಘೋಷಿಸಬೇಕು ಎನ್ನುವ ಬೇಡಿಕೆ ಕೇಳಿ ಬಂದಿತ್ತು. ಆದರೆ ಸರಕಾರವು 2019ರ ಡಿ. 31ರಂದು ಪುರಸಭೆಯ ಬದಲು ಪಟ್ಟಣ ಪಂಚಾಯತ್‌ ಆಗಿ ರಚಿಸಿ, ಅಧಿಸೂಚನೆ ಹೊರಡಿಸಿತ್ತು. ಇನ್ನು 2020ರ ಜೂನ್‌ನಲ್ಲಿ ಬೈಂದೂರು ಪ.ಪಂ.ಗೆ ಸಚಿವ ಸಂಪುಟದ ಅನುಮೋದನೆಯೂ ಸಿಕ್ಕಿತ್ತು.

ಇದು ಬೈಂದೂರು ವಿಧಾನಸಭಾ ಕ್ಷೇತ್ರದ ಮೊದಲ ಪಟ್ಟಣ ಪಂಚಾಯತ್‌ ಆಗಿದೆ. ಬೈಂದೂರು ಗ್ರಾ.ಪಂ., ಯಡ್ತರೆ ಹಾಗೂ ಪಡುವರಿ ಗ್ರಾ.ಪಂ.ಗಳನ್ನೊಂಡ ಬೈಂದೂರು ಪಟ್ಟಣ ಪಂಚಾಯತ್‌ 54.24 ಚದರ ಕಿ.ಮೀ. ಪ್ರದೇಶವನ್ನು ಒಳಗೊಂಡಿದೆ. 3 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ 2011ರ ಜನಗಣತಿಯಂತೆ 24,957 ಜನಸಂಖ್ಯೆಯಿದೆ. 549.71 ಜನಸಾಂದ್ರತೆಯಿದೆ. ಪೂರ್ವದಲ್ಲಿ ಪಶ್ಚಿಮ ಘಟ್ಟ ಹಾಗೂ ಯಳಜಿತ್‌ ಗ್ರಾಮ, ಪಶ್ಚಿಮದಲ್ಲಿ ಅರಬಿ ಸಮುದ್ರ, ಉತ್ತರದಲ್ಲಿ ಭಾಗಶಃ ಶಿರೂರು ಗ್ರಾಮ ಹಾಗೂ ಪಶ್ಚಿಮ ಘಟ್ಟ, ದಕ್ಷಿಣದಲ್ಲಿ ಸುಮನಾವತಿ ನದಿಯು ಬೈಂದೂರು ಪಟ್ಟಣ ಪಂಚಾಯತ್‌ನ ಗಡಿಗಳಾಗಿವೆ.

ಪುರಸಭೆ ಆಗಿತ್ತು
1935ರಲ್ಲಿ ಬೈಂದೂರು, ಯಡ್ತರೆ ಹಾಗೂ ಪಡುವರಿ ಸೇರಿ ನಗರ ಪಂಚಾಯತ್‌ ಆಗಿದ್ದರೆ, 1971ರಲ್ಲಿ ಬೈಂದೂರು, ಯಡ್ತರೆ ಹಾಗೂ ತಗ್ಗರ್ಸೆಯನ್ನೊಳಗೊಂಡ ಪುರಸಭೆಯನ್ನು ರಚಿಸಲಾಗಿತ್ತು. ಆದರೆ 1997ರ ಜೂನ್‌ನಲ್ಲಿ ಮತ್ತೆ ಗ್ರಾ.ಪಂ.ಗಳಾಗಿ ವಿಂಗಡಣೆ ಮಾಡಲಾಗಿತ್ತು.

ಪ. ಪಂ. ವ್ಯಾಪ್ತಿಯಲ್ಲಿ ಈಗಾಗಲೇ ಪ್ರಸ್ತಾವಿತ 20 ವಾರ್ಡ್‌ಗಳ ಕ್ಷೇತ್ರ ವಿಂಗಡಣೆ ಮಾಡಿ, ಸಾರ್ವ ಜನಿಕರ ಆಕ್ಷೇಪಣೆಗೂ ಅವಕಾಶ ಕಲ್ಪಿಸಲಾಗಿತ್ತು. ಎಲ್ಲ ವಾರ್ಡ್‌ಗಳ ಗಡಿ ಗುರುತನ್ನು ಸಹ ಅಂತಿಮಗೊಳಿಸಲಾಗಿದೆ. ಆದರೆ ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರಿತು ಎನ್ನುವ ಖುಷಿ ಮಾತ್ರ ಜನರಿಗೆ ದಕ್ಕಿದ್ದು. ಯಾಕೆಂದರೆ ಪಟ್ಟಣ ಪಂಚಾಯತ್‌ ರಚನೆಯಾಗಿ ಅಧಿಸೂಚನೆ ಪ್ರಕಟಗೊಂಡು, ಸಂಪುಟದ ಅನುಮೋದನೆ ಸಿಕ್ಕಿ ಮೂರು ವರ್ಷಗಳೇ ಕಳೆದರೂ ಇನ್ನೂ ಪಟ್ಟಣ ಪಂಚಾಯತ್‌ ಆಡಳಿತ ಮಾತ್ರ ರಚನೆಯಾಗಿಲ್ಲ. ಪೂರ್ಣ ಪ್ರಮಾಣದಲ್ಲಿ ಪಟ್ಟಣ ಪಂಚಾಯತ್‌ ಆಗದೇ ಇರುವುದು ಜನರಿಗೆ ಸಮಸ್ಯೆಯಾಗಿ ಕಾಡುತ್ತಿದೆ. ಸವಲತ್ತುಗಳಿಗೆ ಅಭಿವೃದ್ಧಿ ಕಾರ್ಯ ಗಳಿಗೆ ಇದು ಅಡ್ಡಿಯಾಗುತ್ತಿದೆ. ಇದಲ್ಲದೆ ಜಾಗದ ಗಡಿ, ನಕ್ಷೆ ರಚನೆ ಸಹಿತ ಇನ್ನೂ ಕೆಲವೊಂದು ತಾಂತ್ರಿಕ ಅಡಚಣೆಗಳು ಎದುರಾಗುತ್ತಿವೆ.

Advertisement

ಪಟ್ಟಣ ಪಂಚಾಯತ್‌ಗೆ ಚುನಾವಣೆಯಾಗಿ, ಆಡಳಿತ ರಚನೆಯಾದರೆ ಬೈಂದೂರು, ಯಡ್ತರೆ ಮತ್ತು ಪಡುವರಿ ಗ್ರಾಮ ಪಂಚಾಯತ್‌ ಪ್ರದೇಶಗಳೂ ಒಳಗೊಂಡ ಪಟ್ಟಣ ಪಂಚಾಯತ್‌ನ ಪ್ರಗತಿಗೆ ಇನ್ನಷ್ಟು ವೇಗ ದೊರಕಲಿದೆ. ಇದು ಗ್ರಾಮೀಣ ಭಾಗಗಳನ್ನೇ ಒಳಗೊಂಡಿರುವ ಬೈಂದೂರಿನ ಅಭಿವೃದ್ಧಿಗೆ ಹಾಗೂ ಬೆಳವಣಿಗೆಗೂ ಪೂರಕವಾಗಬಹುದು.

~ ಪ್ರಶಾಂತ್‌ ಪಾದೆ/ಅರುಣ್‌ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next