Advertisement
ಹಾಲಾಡಿ ಪ್ರಚಾರಕುಂದಾಪುರದಲ್ಲಿ ಬಿಜೆಪಿಯಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಅಭ್ಯರ್ಥಿ ಎಂದು ಮೊದಲ ಪಟ್ಟಿಯಲ್ಲಿ ಘೋಷಣೆಯಾಗಿದೆ. ಬಳಿಕ ಅವರು ಆಂತರಿಕ ಭಿನ್ನಮತ ಶಮನ ಕಾರ್ಯವನ್ನು ಮೊದಲು ನಡೆಸಿದರು. ತಮ್ಮ ರಾಜಕೀಯದ ಗುರು ಎಂದೇ ಪರಿಗಣಿತರಾದ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ ಅವರು ಹಾಲಾಡಿ ಸ್ಪರ್ಧೆಗೆ ವಿರೋಧಿ ಎಂಬ ಸುದ್ದಿ ಹಬ್ಬಿದ್ದನ್ನು ಶಮನ ಮಾಡಲು ನೋಡಿದರು. ಜತೆಯಾಗಿ ಉಪಾಹಾರ ಸೇವಿಸಿದರು.
ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಅವರಿಗೆ ರವಿವಾರ ರಾತ್ರಿ ಗ್ರೀನ್ ಸಿಗ್ನಲ್ ದೊರೆತಿದೆ. ಚುನಾವಣೆ ಘೋಷಣೆಯಾಗುವವರೆಗೆ ಅವರು ಪಕ್ಷದ ಪ್ರಚಾರ ಕಾರ್ಯವನ್ನು ವ್ಯವಸ್ಥಿತ ವಾಗಿಯೇ ಮಾಡಿದ್ದಾರೆ. ವಿವಿಧ ಹಳ್ಳಿ ಗಳಿಗೆ ತೆರಳಿದ್ದಾರೆ. ಕಾರ್ಯಕರ್ತರನ್ನು ಒಟ್ಟುಗೂಡಿಸಿದ್ದಾರೆ. ಜನರ ಮನದಲ್ಲಿ ನೆಲೆಯಾಗಲು ಯತ್ನಿಸಿದ್ದಾರೆ. ಟಿಕೆಟ್ ಘೋಷಣೆಯಾಗಿರದ ಕಾರಣ ಅಧಿಕೃತ ಪ್ರಚಾರ ಕೈಗೊಳ್ಳಲು ನೀತಿ ಸಂಹಿತೆಯ ಅಡ್ಡಿ ಇತ್ತು. ಅವರು ಎ. 16ರಂದು ಕುಂದೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಪ್ರಚಾರಕ್ಕೆ ತೊಡಗಿದ್ದಾರೆ. ಈವರೆಗೆ ಪಕ್ಷಕ್ಕಾಗಿ ಇಲ್ಲಿ ಕೆಲಸ ಮಾಡಿ ಕೊನೆ ಕ್ಷಣದಲ್ಲಿ ಟಿಕೆಟ್ ಬೇರೆಯವರ ಪಾಲಿಗಾದರೆ ಎನ್ನುವುದು ಅವರಿಗಿದ್ದ ಆತಂಕ.
Related Articles
ಬೈಂದೂರಿನಲ್ಲಿ ಕಾಂಗ್ರೆಸ್‌ನಿಂದ ಹಾಲಿ ಶಾಸಕ ಕೆ. ಗೋಪಾಲ ಪೂಜಾರಿ ಎನ್ನುವುದು ರವಿವಾರ ರಾತ್ರಿ ಪಕ್ಕಾ ಆಗಿದೆ. ಬಿಜೆಪಿಯಿಂದ ಬಿ.ಎಂ. ಸುಕುಮಾರ ಶೆಟ್ಟಿ ಅವರೆಂದು ಸೋಮವಾರ ಪ್ರಕಟವಾಗಿದೆ. ಇಲ್ಲಿ ಸುಕುಮಾರ ಶೆಟ್ಟರ ಜತೆ ಜಯಪ್ರಕಾಶ್ ಹೆಗ್ಡೆ ಅವರಿಗೆ ವಾಂಛೆ ಇದ್ದ ಕಾರಣ ಮೊದಲ ಪಟ್ಟಿಯಲ್ಲಿ ಹೆಸರು ಇರಲಿಲ್ಲ. ಕಳೆದ ಬಾರಿ ಪಕ್ಷಕ್ಕೆ ಸೇರ್ಪಡೆಯಾದ 15 ದಿನಗಳಲ್ಲಿ ಚುನಾವಣಾ ಅಭ್ಯರ್ಥಿ ಎಂದು ಘೋಷಣೆಯಾದರೂ 51 ಸಾವಿರ ಮತಗಳನ್ನು ಪಡೆದು ಸೋತವರು ಸುಕುಮಾರ ಶೆಟ್ಟರು. ಭಟ್ಕಳ, ಕುಂದಾಪುರ, ಉಡುಪಿಯಲ್ಲಿ ಪಕ್ಷ ಸಾಕಷ್ಟು ಬಲಿಷ್ಠವಾಗಿದೆ. ಹಾಗಿದ್ದರೂ ಅಲ್ಲಿನ ಬಿಜೆಪಿ ಅಭ್ಯರ್ಥಿಗಳಿಗೆ 16 ಸಾವಿರಕ್ಕಿಂತ ಹೆಚ್ಚು ಓಟು ಬರಲಿಲ್ಲ. ಆದರೆ ಇಲ್ಲಿ ಕೆಜೆಪಿ ಅಭ್ಯರ್ಥಿ ಇದ್ದರೂ ಪಕ್ಷಕ್ಕೆ ಹೊಸಬನಾಗಿ ಕಾರ್ಯಕರ್ತರ ಪರಿಚಯ ಇಲ್ಲದಿದ್ದರೂ ತನಗಿಷ್ಟು ಮತ ಬಂದಿದೆ. ಚುನಾವಣೆ ಅನಂತರ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎನ್ನುವುದು ಸುಕುಮಾರ ಶೆಟ್ಟರ ವಾದ.
Advertisement
ಜೆಪಿ ಹೆಗ್ಡೆ ಪ್ರಯತ್ನ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾದ ಜಯಪ್ರಕಾಶ್ ಹೆಗ್ಡೆಯವರಿಗೆ ಪಕ್ಷ ಎ. 16 ಸಂಜೆಯ ವರೆಗೆ ಯಾವೊಂದೂ ಸೀಟು ಘೋಷಿಸಿಲ್ಲ.ಅವರು ಕುಂದಾಪುರದಿಂದ ಸ್ಪರ್ಧಿಸಬೇಕೆಂದು ಬೆಂಬಲಿಗರ ಒತ್ತಾಯ ಇತ್ತು. ಸಾಧ್ಯವಾಗಲಿಲ್ಲ. ಬೈಂದೂರಿನ ಕಡೆಗೆ ಚಿತ್ತ ಹರಿಸಿ ಸುಕುಮಾರ ಶೆಟ್ಟರ ನಿದ್ದೆ ಕೆಡಿಸಿದರು. ಪಕ್ಷದಲ್ಲಿ ಅವರಿಗೆ ಇರುವ ಪ್ರಭಾವಿ ಸಂಪರ್ಕಗಳು ಅವರ ಹೆಸರು ಚಾಲ್ತಿಯಲ್ಲಿರುವಂತೆ ಮಾಡಿತ್ತು. ಆದರೆ ಪಕ್ಷದ, ಸಂಘದ ಹಿರಿಯರ ಸೂಚನೆ ಇದ್ದಾಗಲೂ ಕುಂದಾಪುರದಿಂದ ಟಿಕೆಟ್‌ಗೆ ಯತ್ನಿಸಿದ್ದು, ಹಾಲಾಡಿ ವಿರೋಧಿ ಬಣದ ಜತೆಗೆ ಗುರುತಿಸಿಕೊಂಡದ್ದು ಅವರ ಪಾಲಿಗೆ ತುಸು ಸಂಕಷ್ಟ ತಂದೊಡ್ಡಿದೆ. ಒಟ್ಟಿನಲ್ಲಿ ಬೈಂದೂರು, ಕುಂದಾಪುರ ಕ್ಷೇತ್ರಗಳು ಕಳೆಗಟ್ಟತೊಡಗಿವೆ. ಬೈಂದೂರಿನಲ್ಲಿ ಜೆಡಿಎಸ್‌ನಿಂದ ರವಿ ಶೆಟ್ಟಿ, ಸಿಪಿಐಎಂನಿಂದ ಸುರೇಶ್ ಕಲ್ಲಾಗರ ಸ್ಪರ್ಧಿಸುತ್ತಿದ್ದಾರೆ. – ಲಕ್ಷ್ಮೀಮಚ್ಚಿನ