Advertisement

ಹೇನ್‌ಬೇರು ಕಾರು ಸುಟ್ಟ ಕೇಸ್:‌ ಮಲಯಾಳ ಸಿನಿಮಾ ನೋಡಿ ಕೊಲೆ; ಹೆಣ್ಣಿನ ಮೋಹಕ್ಕೆ ಹೋಯಿತು ಜೀವ

09:07 AM Jul 15, 2022 | Team Udayavani |

ಬೈಂದೂರು: ಬುಧವಾರ ಬೈಂದೂರಿನ ಹೇನ್‌ಬೇರು ನಿರ್ಜನ ಪ್ರದೇಶದಲ್ಲಿ ಕಾರಿನೊಳಗೆ ವ್ಯಕ್ತಿಯೊಬ್ಬ ಸುಟ್ಟು ಕರಕಲಾಗಿರುವ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ.

Advertisement

ಕಾರ್ಕಳ ಮೂಲದ ತಂಡವೊಂದು ನಡೆಸಿದ ವ್ಯವಸ್ಥಿತ ಕೊಲೆ ಇದು ಎನ್ನುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ಕೊಲೆಯಾದ ವ್ಯಕ್ತಿ, ಮೇಸ್ತ್ರಿ ಕಾರ್ಮಿಕ ಕಾರ್ಕಳದ ಆನಂದ ದೇವಾಡಿಗ (60). ಆರೋಪಿಗಳಾದ ಸದಾನಂದ ಶೇರೆಗಾರ್‌ (52), ಶಿಲ್ಪಾ ಪೂಜಾರಿ (30), ಸತೀಶ ದೇವಾಡಿಗ (49) ಹಾಗೂ ನಿತಿನ್‌ ದೇವಾಡಿಗ (35) ನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆ ಪ್ರಕರಣದ ಹಿನ್ನೆಲೆ:

ಬೈಂದೂರಿನ ಹೇನ್‌ಬೇರು ಬಳಿ ಬುಧವಾರ ಮುಂಜಾನೆ ಫೋರ್ಡ್‌ ಐಕಾನ್‌ ಕಾರು ಹಾಗೂ ಅದರ ಒಳಗೆ ವ್ಯಕ್ತಿಯೊಬ್ಬ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಂಡುಬಂದಿತ್ತು. ಮೇಲ್ನೋಟಕ್ಕೆ ಕೊಲೆಯಂತೆ ಭಾಸವಾದರೂ ಸಹ ಆರೋಪಿಗಳು ಸ್ಥಳದಲ್ಲಿ ಯಾವುದೇ ಸುಳಿವನ್ನು ಬಿಟ್ಟು ಕೊಟ್ಟಿರಲಿಲ್ಲ. ಆದ್ದರಿಂದ ಈ ಪ್ರಕರಣವನ್ನು ಬೇಧಿಸುವುದು ಪೊಲೀಸರಿಗೆ ಸವಾಲಾಗಿತ್ತು. ಕಾರು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಕಾರಿನ ಎಂಜಿನ್‌ನಲ್ಲಿರುವ ಚಾಸಿಸ್‌ ನಂಬರ್‌ ಮೂಲಕ ವಿಳಾಸ ಪತ್ತೆ ಹಚ್ಚಿದ ಪೊಲೀಸರು ಕಾರ್ಕಳದ ಸದಾನಂದ ಶೇರೆಗಾರ್‌ ಕಾರು ಇದು ಎನ್ನುವುದನ್ನು ಪತ್ತೆ ಮಾಡಿದ್ದರು. ಆದರೆ ಆತ ನಾಪತ್ತೆಯಾಗಿದ್ದ. ಪೊಲೀಸರ ಎರಡು ಪ್ರತ್ಯೇಕ ತಂಡ ಕಾರ್ಕಳಕ್ಕೆ ತೆರಳಿ ಪ್ರಕರಣದ ಜಾಡು ಹಿಡಿಯಲು ಸನ್ನದ್ಧರಾದರು. ಸದಾನಂದ ಅವರಿದ್ದ ಕಾರು ಸಾಸ್ತಾನ ಟೋಲ್‌ಗೇಟ್‌ನಲ್ಲಿ ಸಾಗಿರುವುದು ಮೊದಲಿಗೆ ಪತ್ತೆ ಹಚ್ಚಲಾಗುತ್ತದೆ. ಟೋಲ್‌ಗೇಟ್‌ ಸಿಸಿ ಕೆಮರಾದಲ್ಲಿ ಈ ಕಾರಿನ ದೃಶ್ಯಗಳು ದಾಖಲಾಗಿದ್ದವು. ಅದನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದಾಗ ಕಾರಿನಿಂದ ಮಹಿಳೆಯೊಬ್ಬಳು ಇಳಿದು ಟೋಲ್‌ ನೀಡುತ್ತಿರುವುದು ಗೊತ್ತಾಗುತ್ತದೆ. ವಿವಿಧ ಆಯಾಮಗಳಲ್ಲಿ ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಮತ್ತೆ ಬೆಳಕಿನ ಬಂದಿತ್ತು ರೋಚಕ ಸಂಗತಿಗಳು.

Advertisement

ಆರೋಪಿಗೆ ಅನೈತಿಕ ಸಂಬಂಧ:

ಆರೋಪಿ ಸದಾನಂದ ಶೇರೆಗಾರ್‌ ಉತ್ತಮ ಮನೆತನದ ಹಿನ್ನೆಲೆ ಉಳ್ಳವನಾಗಿದ್ದ. ಮದುವೆ ಕೂಡ ಆಗಿದ್ದ ಈತನಿಗೆ ಕಾರ್ಕಳದ ಶಿಲ್ಪಾ ಪೂಜಾರಿ ಎನ್ನುವ 30 ವರ್ಷದ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿದ್ದಿತ್ತು. ಈಕೆ ಭಟ್ಕಳ ಸಮೀಪದ ಮಾವಿನಕುರ್ವೆಗೆ ವಿವಾಹವಾಗಿದ್ದರೂ, ಕಾರ್ಕಳದಲ್ಲೇ ವಾಸವಾಗಿದ್ದಳು.

ಮಲಯಾಳ ಸಿನೆಮಾ-ಕೊಲೆಗೆ ಪ್ರೇರಣೆ:

ಆರೋಪಿ ಸದಾನಂದ ಈ ಹಿಂದೆ ಕಾರ್ಕಳದಲ್ಲಿ ಸರ್ವೇ ಲೈಸೆನ್ಸ್‌ ಹೊಂದಿದ್ದವನಾಗಿದ್ದ. ಸ್ಥಳವೊಂದರ ಎಂಎಮ್‌ಬಿ ನಕ್ಷೆ ನಕಲಿ ಮಾಡಿಕೊಟ್ಟಿದ್ದ ಆರೋಪದಡಿಯಲ್ಲಿ 2019ರಲ್ಲಿ ಈತನ ಮೇಲೆ ಒಂದು ವಂಚನೆ ಪ್ರಕರಣ ದಾಖಲಾಗುತ್ತದೆ. ಈ ಪ್ರಕರಣದಲ್ಲಿ ತಾನು ಜೈಲು ಪಾಲಾಗುವ ಆತಂಕದಲ್ಲಿದ್ದ ಸದಾನಂದ. ಆತ ಕ್ರೈಂ ಸ್ಟೋರಿ, ಕ್ರೈಂ ಹಿನ್ನೆಲೆಯ ಸಿನಿಮಾಗಳನ್ನು ನೋಡುತ್ತಿದ್ದ. ಈ ಸಮಯದಲ್ಲಿ ಆತ ಮಲಯಾಳ ಸಿನೆಮಾ ಒಂದನ್ನು ವೀಕ್ಷಣೆ ಮಾಡುತ್ತಾನೆ. ಅದರಲ್ಲಿ ತಾನು ಬಚಾವಾಗಲು ತನ್ನಂತೆಯೇ ಹೋಲುವ ವ್ಯಕ್ತಿಯನ್ನು ಕೊಲೆಗೈಯುವ ದೃಶ್ಯವನ್ನು ನೋಡುತ್ತಾನೆ. ಅನಂತರ ಅದೇ ರೀತಿಯಲ್ಲಿ ಕೃತ್ಯ ನಡೆಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ತಾನೇ ಸತ್ತು ಹೋದೆ ಎಂದು ಸಮಾಜಕ್ಕೆ ತಿಳಿದರೆ ವಂಚನೆ ಪ್ರಕರಣದಿಂದಲೂ ತಪ್ಪಿಸಿಕೊಳ್ಳಬಹುದೆಂದು ಆತ ತನ್ನಂತೆಯೇ ಹೋಲುತ್ತಿದ್ದ ಕಾರ್ಕಳದ ಆನಂದ ದೇವಾಡಿಗನನ್ನು (60) ಸುಟ್ಟು ಹಾಕಿ ತಾನೇ ಸತ್ತು ಹೋದೆನೆಂದು ಸಮಾಜಕ್ಕೆ ತಿಳಿಸಲು ಸಜ್ಜಾಗುತ್ತಾನೆ. ಆತನನ್ನು ಹೇಗೆ ಕರೆಸಿಕೊಳ್ಳುವುದು ಎನ್ನುವಷ್ಟರಲ್ಲಿ ತನ್ನ ಪ್ರಿಯತಮೆ ಶಿಲ್ಪಾಳಲ್ಲಿ ಆನಂದನನ್ನು ಮರಳು ಮಾಡಿ ಕರೆತರುವಂತೆ ಸೂಚಿಸಿದ್ದ.

ನಿದ್ದೆ ಮಾತ್ರೆ ನೀಡಿದ್ದರು :

ಅದರಂತೆ ಶಿಲ್ಪಾಳು ತನ್ನ ಮೋಹಕ ಮಾತುಗಳಿಂದ ಆನಂದನನ್ನು ತನ್ನತ್ತ ಸೆಳೆದುಕೊಳ್ಳುತ್ತಾಳೆ. ಸುಂದರಿಯೇ ತನ್ನ ತನಗೆ ಸಿಕ್ಕಿದ್ದಾಳೆಂದು ಭಾವಿಸಿದ ಆನಂದ ಆಕೆಗೆ ಮರುಳಾಗಿ ಆಕೆ ಕರೆದಂತೆ ಹೋಗುತ್ತಾಳೆ. ಮೊದಲಿಗೆ ಪ್ರಿಯತಮೆಯ ಸಹಾಯದಿಂದ ಸದಾನಂದ ಆತನಿಗೆ ಕಾರ್ಕಳದ ಬಾರ್‌ ಒಂದರಲ್ಲಿ ಕಂಠಪೂರ್ತಿ ಮದ್ಯ ಕುಡಿಸಿದ್ದ. ಬಳಿಕ ಶಿಲ್ಪಾ ಜತೆ ನಿನಗೆ ಲೈಂಗಿಕ ಸಂಪರ್ಕ ಬೆಳೆಸಲು ಅವಕಾಶವಿದೆ ಎಂದೂ ಹೇಳಿದ್ದ. ಅದರಂತೆ ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ವಯಾಗ್ರ ಮಾತ್ರೆ ತೆಗೆದುಕೊಳ್ಳಬೇಕು ಎಂದಿದ್ದ. 30ರ ಹರೆಯದ ಯುವತಿ ಸಿಗುವ ಆಸೆಗಾಗಿ ಎಲ್ಲವನ್ನೂ ನಂಬಿದ್ದ 60ರ ಹರೆಯದ ಆನಂದ ವಯಾಗ್ರ ಮಾತ್ರೆಯೆಂದು ನಿದ್ದೆ ಮಾತ್ರೆ ಸೇವಿಸಿ ಬಿಟ್ಟಿದ್ದ. ಅನಂತರ ನಿದ್ದೆಗೆ ಜಾರಿದ್ದ ಆನಂದನನ್ನು ಕಾರಿನ ಹಿಂದಿನ ಸೀಟಿನಲ್ಲಿ ಕುಳ್ಳಿರಿಸಿ ಬೈಂದೂರಿಗೆ ಕರೆ ತಂದಿದ್ದಾರೆ. ಮಾತ್ರವಲ್ಲದೆ ಇನ್ನೊಂದು ಕಾರಿನಲ್ಲಿ ಭಾವಂದಿರಾದ ಸತೀಶ ದೇವಾಡಿಗ ಮತ್ತು ನಿತಿನ್‌ ದೇವಾಡಿಗ ಅವರನ್ನು ಬೈಂದೂರಿಗೆ ಬರಲು ತಿಳಿಸಿದ್ದಾನೆ.

ಪೆಟ್ರೋಲ್‌ ತಂದಿದ್ದರು :

ಆರೋಪಿ ಸದಾನಂದ ಶೇರೆಗಾರ್‌ ಬೈಂದೂರು ಭಾಗದ ಬಗ್ಗೆ ತಿಳಿವಳಿಕೆ ಪರಿಚಯ ಹೊಂದಿದ್ದ. ಎರಡು ವರ್ಷದ ಹಿಂದೆ ಈ ಭಾಗದಲ್ಲಿ ಕಲ್ಲುಕೋರೆ ಕೂಡ ಮಾಡಿದ್ದ ಎನ್ನುವ ಮಾಹಿತಿ ಇದೆ. ಹೀಗಾಗಿ ಹೇನ್‌ಬೇರು ರಸ್ತೆಯ ನಿರ್ಜನ ಪ್ರದೇಶಕ್ಕೆ ಕಾರನ್ನು ಕೊಂಡೊಯ್ದು ಪೆಟ್ರೋಲ್‌ ಬಂಕ್‌ನಿಂದ ಕ್ಯಾನ್‌ನಲ್ಲಿ ಐದು ಲೀಟರ್‌ ಹಾಗೂ ಬಾಟಲಿಯಲ್ಲಿ 2 ಲೀಟರ್‌ ಪೆಟ್ರೋಲ್‌ ಖರೀದಿಸಿದ್ದ. ಹೇನ್‌ಬೇರ್‌ನಲ್ಲಿ ಕಾರು ನಿಲ್ಲಿಸಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಆರೋಪಿಗಳು ಕಾರಿನಲ್ಲೇ ಪರಾರಿಯಾಗಿದ್ದರು.

ಪೊಲೀಸರ ಕ್ಷಿಪ್ರ ಕಾರ್ಯಾಚರಣೆ :

ವತ್ತಿನೆಣೆ ಪರಿಸರದಲ್ಲಿ ಕೆಲವು ವರ್ಷದ ಹಿಂದೆ ಕಾಲೇಜು ವಿದ್ಯಾರ್ಥಿನಿಯೊರ್ವಳನ್ನು ಕೊಲೆಗೈದ ಪ್ರಕರಣದ ಬಳಿಕ ನಡೆದ ಈ ಘಟನೆ ಸ್ಥಳೀಯರಿಗೆ ಬಹಳಷ್ಟು ಆತಂಕ ಉಂಟು ಮಾಡಿತ್ತು. ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿರುವ ಪೊಲೀಸರು ನಾಲ್ವರೂ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಅನೈತಿಕ ಸಂಬಂಧ ಹೊಂದಿದ ಪರಿಣಾಮ ಮಹಿಳೆಯೊಬ್ಬಳು ಕೊಲೆಗೆ ಸಹಕರಿಸಿ ಜೈಲು ಪಾಲಾಗಿದ್ದಾಳೆ. ಬೆಂಗಳೂರಿಗೆ ತೆರಳುತ್ತಿದ್ದ ಆರೋಪಿಗಳು ಬಸ್‌ ಕೆಟ್ಟು ಹೋದ ಕಾರಣ ವಾಪಾಸು ಮೂಡಬಿದಿರೆಗೆ ಬಂದಿರುವುದು ಕೂಡ ಪೊಲೀಸರಿಗೆ ಪ್ರಕರಣ ಬೇಧಿಸಲು ಸಹಕಾರಿಯಾಗಿತ್ತು. ಘಟನೆ ನಡೆದು 24 ಗಂಟೆಯೊಳಗೆ ಆರೋಪಿಗಳನ್ನು ಮೂಡಬಿದಿರೆ ಸಮೀಪ ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್‌ ನಿರ್ದೇಶನದಲ್ಲಿ ಕುಂದಾಪುರ ಡಿ.ವೈ.ಎಸ್‌.ಪಿ. ಶ್ರೀಕಾಂತ್‌ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎಸ್‌.ಟಿ. ಸಿದ್ದಲಿಂಗಪ್ಪ, ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ, ಠಾಣಾಧಿಕಾರಿ ಪವನ್‌ ನಾಯ್ಕ, ಗಂಗೊಳ್ಳಿ ಠಾಣಾಧಿಕಾರಿ ವಿನಯ್‌ ಕೊರ್ಲಹಳ್ಳಿ, ಕ್ರೈಂ ವಿಭಾಗದ ಮೋಹನ ಪೂಜಾರಿ, ನಾಗೇಂದ್ರ ಶೇರುಗಾರ್‌, ಕೃಷ್ಣ ದೇವಾಡಿಗ, ಶ್ರೀನಿವಾಸ ಉಪ್ಪುಂದ, ಶಾಂತಾರಾಮ ಶೆಟ್ಟಿ, ಚಾಲಕರಾದ ಚಂದ್ರ ಪೂಜಾರಿ, ಗಂಗೊಳ್ಳಿ ಆರಕ್ಷಕ ಠಾಣೆಯ ಚಂದ್ರಶೇಖರ ಪೂಜಾರಿ, ಶ್ರೀಧರ, ಪ್ರಿನ್ಸ್‌ ಕೆ.ಜೆ. ಶಿರೂರು, ಅಣ್ಣಪ್ಪ ಪೂಜಾರಿ, ಸುಜಿತ್‌ ಕುಮಾರ್‌ ಮೊದಲಾದವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

ಮಲಯಾಳದ “ಕುರುಪ್’ ಸಿನೆಮಾ ಮಾದರಿ :

ಹೇನ್‌ಬೇರಿನಲ್ಲಿ ಕಾರು ಸುಟ್ಟು ಹಾಕಿ ವ್ಯಕ್ತಿಯನ್ನು ಕೊಲೆಗೈದಿರುವ ಪ್ರಕರಣ ಕೇರಳದಲ್ಲಿ 35 ವರ್ಷಗಳ ಹಿಂದೆ ನಡೆದ ನೈಜ ಘಟನೆಯಾಧಾರಿತ ಪ್ರಕರಣದ ಪಡಿಯಚ್ಚಿನಂತಿದೆ. ಈ ಪ್ರಕರಣವನ್ನು ಆಧರಿಸಿ ಮಲಯಾಳ ಭಾಷೆಯಲ್ಲಿ ಸಿನೆಮಾವನ್ನು ಇತ್ತೀಚೆಗಷ್ಟೆ ತೆರೆಗೆ ತರಲಾಗಿತ್ತು. ದುಲ್ಕರ್‌ ಸಲ್ಮಾನ್‌ ಅಭಿಯಾನದ ಈ ಚಿತ್ರದಲ್ಲಿಇನ್ಸೂರೆನ್ಸ್  ಪಾಲಿಸಿ ಪಡೆಯಲು ಗೋಪಾಲಕೃಷ್ಣ ಕುರುಪ್‌ ಯಾನೆ ಸುಕುಮಾರ ಕುರುಪ್‌ ಎನ್ನುವ ಎನ್‌ಆರ್‌ಐ ಉದ್ಯಮಿಯೊಬ್ಬ ತನ್ನಂತೆಯೇ ಹೋಲುವ ವ್ಯಕ್ತಿಯನ್ನು ಹುಡುಕಿಸಿ ಕರೆದುಕೊಂಡು ಬಂದು ಕಾರಿನಲ್ಲಿ ಸುಟ್ಟು ಹಾಕಿ ತಾನೇ ಸತ್ತೆನೆಂದು ಡೆತ್‌ ಸರ್ಟಿಫಿಕೇಟ್‌ ಮಾಡಿಸಿ ತನ್ನ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿಕೊಂಡಿದ್ದ. ಈತನೊಂದಿಗೆ ಕೃತ್ಯದಲ್ಲಿ ಭಾಗಿಯಾಗಿದ್ದವರನ್ನು ಬಂಧಿಸಿದ ಪೊಲೀಸರು ಈ ಪ್ರಕರಣದ ಅಸಲಿಯತ್ತನ್ನು ಬಯಲಿಗೆಳೆದಿದ್ದರು. ಆದರೆ ಪ್ರಮುಖ ಆರೋಪಿ ಗೋಪಾಲಕೃಷ್ಣ ಕುರುಪ್‌ ಮಾತ್ರ 35 ವರ್ಷಗಳಿಂದ ಈವರೆಗೂ ಪೊಲೀಸರ ಕೈಗೆ ಸಿಕ್ಕಿ ಬಿದ್ದಿಲ್ಲ. ಆದರೆ ಹೇನ್‌ಬೇರ್‌ ಪ್ರಕರಣದಲ್ಲಿ ಆರೋಪಿ ಸದಾನಂದ ಮಾಡಿದ ಅದೇ ಯೋಜನೆ ಫೇಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next