Advertisement

ಬೈಂದೂರು: ಮುಗಿದ ಮತದಾನ, ಲೆಕ್ಕಾಚಾರ ಶುರು

02:31 PM Apr 27, 2019 | Suhan S |

ಕುಂದಾಪುರ, ಎ. 26: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರಲ್ಲಿ ಮತದಾನ ಮುಗಿದಿದ್ದು, ಈಗ ಅಭ್ಯರ್ಥಿಗಳು, ಪಕ್ಷಗಳಲ್ಲಿ ಮಾತ್ರವಲ್ಲದೆ ಜನರಲ್ಲಿಯೂ ಲೆಕ್ಕಾಚಾರ ಶುರುವಾಗಿದೆ. ಎ. 23 ರಂದು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 75.30 ಮತದಾನವಾಗಿದೆ. ಫಲಿತಾಂಶಕ್ಕಾಗಿ ಮಾತ್ರ ಮೇ 23 ರವರೆಗೆ ಕಾಯಲೇಬೇಕು.

Advertisement

ಬೈಂದೂರು ಕ್ಷೇತ್ರದಲ್ಲಿ 2,26,587 ಮತದಾರರಿದ್ದು, ಆ ಪೈಕಿ 1,70,531 ಮಂದಿ ಮತದಾನ ಮಾಡಿದ್ದಾರೆ. ಇದರಲ್ಲಿ 78,687 ಮಂದಿ ಪುರುಷರು, 91,436 ಮಂದಿ ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಗರಿಷ್ಠ – 91.09, ಕನಿಷ್ಠ – 46.24:

ಕ್ಷೇತ್ರದಲ್ಲಿರುವ 246 ಮತಗಟ್ಟೆಗಳ ಪೈಕಿ ನಕ್ಸಲ್ ಪೀಡಿತ ಪ್ರದೇಶವಾದ ಹಳ್ಳಿಹೊಳೆಯ ಇರಿಗೆ ಹಿ.ಪ್ರಾ. ಶಾಲೆಯ ಮತಗಟ್ಟೆಯಲ್ಲಿ ಗರಿಷ್ಠ ಶೇ.91.09 ಮತದಾನವಾದರೆ, ಕಳಿನಜೆಡ್ಡುವಿನ ಕಿ.ಪ್ರಾ. ಶಾಲೆಯಲ್ಲಿ ಕನಿಷ್ಠ ಶೇ. 46.24 ಮತದಾನವಾಗಿದೆ. 39 ಮತಗಟ್ಟೆಗಳಲ್ಲಿ ಶೇ.80 ಕ್ಕಿಂತ ಅಧಿಕ ಪ್ರಮಾಣದ ಮತದಾನವಾಗಿದ್ದರೆ, 6 ಮತಗಟ್ಟೆಗಳಲ್ಲಿ ಮಾತ್ರ ಶೇ. 60 ಕ್ಕಿಂತ ಕಡಿಮೆ ಮತ ಚಲಾವಣೆಯಾಗಿದೆ.

ಅತ್ಯಧಿಕ ಮತದಾನ:

Advertisement

ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ಬೈಂದೂರಲ್ಲಿ ಶೇ. 59.05ರಷ್ಟು ಮತದಾನವಾಗಿತ್ತು. 2014 ರ ಲೋಕಸಭಾ ಚುನಾವಣೆಯಲ್ಲಿ ಶೇ.72.92, 2108 ರ ವಿಧಾನಸಭಾ ಚುನಾವಣೆಯಲ್ಲಿ ಶೇ.79.08 ಹಾಗೂ 2013 ರ ವಿಧಾನಸಭಾ ಚುನಾವಣೆಯಲ್ಲಿ ಶೇ.66 ರಷ್ಟು ಮತದಾನವಾಗಿತ್ತು. ಈ ಬಾರಿಯ ಮತದಾನ ಕಳೆದ 3 ಅವಧಿಗಳಲ್ಲಿ ಲೋಕಸಭೆ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ನಡೆದ ಗರಿಷ್ಠ ಮತದಾನವಾಗಿದೆ.

ಇಲ್ಲೂ ಮಹಿಳೆಯರೇ ಮುಂದು:

ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರೇ ಮತದಾನದಲ್ಲಿ ಮುಂಚೂಣಿಯಲ್ಲಿದ್ದರೆ, ಈಗ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲೂ ಕೂಡ ತಾವೇ ಮುಂದು ಎಂದು ಮತ್ತೂಮ್ಮೆ ಮಹಿಳಾ ಮತದಾರರು ಸಾಬೀತುಪಡಿಸಿದ್ದಾರೆ.

1,16,349 ಮಹಿಳೆಯರ ಪೈಕಿ 91,436 (ಶೇ.78.58) ಮಂದಿ ಮತದಾನ ಮಾಡಿದ್ದರೆ, 1,10,237 ಪುರುಷರ ಪೈಕಿ 78,687 (ಶೇ. 71.37) ಮಂದಿ ಮತ ಚಲಾಯಿಸಿದ್ದಾರೆ.

ಬೈಂದೂರು: ಕಡಿಮೆ ಮತದಾನ!

ಉಡುಪಿ ಜಿಲ್ಲೆಯಲ್ಲಿರುವ 5 ವಿಧಾನಸಭಾ ಕ್ಷೇತ್ರಗಳ ಪೈಕಿ ಬೈಂದೂರಲ್ಲಿ ಶೇ. 75.30 ಮತದಾನವಾಗಿದ್ದರೂ ಉಳಿದ 4 ಕ್ಷೇತ್ರಗಳಿಗೆ ಹೋಲಿಸಿದರೆ, ಇದುವೇ ಕನಿಷ್ಠ ಮತದಾನವಾಗಿದೆ. ಉಡುಪಿಯಲ್ಲಿ ಗರಿಷ್ಠ – ಶೇ. 78.77, ಕಾರ್ಕಳದಲ್ಲಿ – ಶೇ. 78.39, ಕಾಪು – ಶೇ. 77.89 ಹಾಗೂ ಕುಂದಾಪುರ – ಶೇ. 77.66 ಪ್ರತಿಶತ ಮತದಾನವಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next