ಬೈಂದೂರು: ಎಟಿಎಂನಿಂದ ಹಣ ತೆಗೆಯುಲು ಸಹಾಯ ಮಾಡುವ ನೆಪದಲ್ಲಿ ಗ್ರಾಹಕರ ಕಣ್ಣು ತಪ್ಪಿಸಿ ಅವರ ಎಟಿಎಂ ಕಾರ್ಡ್ ಬಳಸಿ ಹಣ ಎಗರಿಸಿದ ಮೂರು ಪ್ರತ್ಯೇಕ ಘಟನೆಗಳಲ್ಲಿ ಹರಿಯಾಣ ಮೂಲದ ಇಬ್ಬರು ಕಳ್ಳರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಬಲ್ಕಿಸ್ ಬಾನು, ಚೈತ್ರಾ ಮತ್ತು ಚಂದ್ರಶೇಖರ ಹಣ ಕಳೆದುಕೊಂಡವರು. ಹರಿಯಾಣದ ಸಂದೀಪ ಹಾಗೂ ರವಿ ಬಂಧಿತರು. ಎಟಿಎಂನಿಂದ ಹಣ ತೆಗೆಯಲು ಸಮಸ್ಯೆ ಎದುರಿಸಿದ ಗ್ರಾಹಕರನ್ನು ಕಳ್ಳರು ಗುರಿಯಾಗಿಸಿಕೊಂಡಿದ್ದರು.
ಮೊದಲ ಪ್ರಕರಣದಲ್ಲಿ ಬಲ್ಕಿಸ್ ಬಾನು ಅವರು ಎಟಿಎಂ ಕಾರ್ಡಿನಿಂದ ಹಣ ತೆಗೆಯಲು ಶಿರೂರು ಅರ್ಬನ್ ಬ್ಯಾಂಕಿನ ಎಟಿಎಂಗೆ ಹೋಗಿದ್ದ ವೇಳೆ ಇಬ್ಬರು ಒಳಗಿದ್ದರು. ಅವರನ್ನು ಹೊರಗಡೆ ಬರುವಂತೆ ತಿಳಿಸಿದಾಗ ಹೊರಗೆ ಬಂದಿದ್ದು ಕಾರ್ಡ್ ಹಾಕಿದಾಗ ಹಣ ಬಾರದೇ ಇದ್ದುದ್ದನ್ನು ಗಮನಿಸಿ ಒಬ್ಬ ವ್ಯಕ್ತಿ ಒಳಗೆ ಬಂದು ಕಾರ್ಡ್ ಹಾಗೆ ಹಾಕುವುದು ಅಲ್ಲವೆಂದು ಹೇಳಿ ಕಾರ್ಡ್ ಪಡೆದು ಹೀಗೆ ಹಾಕಬೇಕೆಂದು ತಿಳಿಸಿದರೂ ಹಣ ಬಾರದ ಕಾರಣ ಕಾರ್ಡ್ ಅನ್ನು ಬಲ್ಕಿಸ್ ಬಾನು ಅವರಿಗೆ ಮರಳಿ ನೀಡಿ ಹೊರಗೆ ಹೋದ.
ಬಲ್ಕಿಸ್ ಬಾನು ಆಬಳಿಕ ಕರ್ನಾಟಕ ಬ್ಯಾಂಕ್ ಎಟಿಎಂಗೆ ಹೋಗಿ ಹಣ ಡ್ರಾ ಮಾಡಲು ಹೋದಾಗ ಕಾರ್ಡ್ ಬದಲಾಗಿರುವುದು ತಿಳಿಯಿತು. ತತ್‌ಕ್ಷಣ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಖಾತೆಯಿಂದ 5 ಸಾವಿರ ರೂ. ತೆಗೆದಿರುವುದು ಕಂಡು ಬಂದಿದೆ. ಸಹಾಯ ಮಾಡಿದ ವ್ಯಕ್ತಿಯೇ ಇನ್ನೊಂದು ಎಟಿಎಂನಿಂದ ಹಣ ಪಡೆದು ಹೋಗಿದ್ದ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಎರಡನೇ ಪ್ರಕರಣದಲ್ಲಿ ಚೈತ್ರಾ ಅವರು ಕೂಡ ಶಿರೂರು ಮಾರ್ಕೆಟ್ ಬಳಿ ಇರುವ ಕೆನರಾ ಬ್ಯಾಂಕ್ ಎಟಿಎಂಗೆ ಹಣ ತರಲು ಹೋಗಿದ್ದಾಗ ಒಳಗಡೆ ಗ್ರಾಹಕರ ಸೋಗಿನಲ್ಲಿ ಇಬ್ಬರು ವ್ಯಕ್ತಿಗಳು ಇದೇ ರೀತಿಯಾಗಿ ಉಪಾಯ ಹೂಡಿ ಅವರನ್ನು ವಂಚಿಸಿ ಕಾರ್ಡ್ ಬದಲಾಯಿಸಿ 21 ಸಾವಿರ ಹಣ ಎಗರಿಸಿದ್ದಾರೆ.
ಮೂರನೇ ಪ್ರಕರಣದಲ್ಲಿ ಚಂದ್ರಶೇಖರ್‌ಅವರು ಬೈಂದೂರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂಗೆ ಹಣ ತರಲು ಹೋಗಿದ್ದಾಗ ಒಳಗಡೆ ಇದ್ದ ಇಬ್ಬರು ಸಹಾಯ 2ಮಾಡುವ ನೆಪದಲ್ಲಿ ಎಟಿಎಂ ಬದಲಾಯಿಸಿ 2 ಲಕ್ಷ ರೂ. ಎಗರಿಸಿದ್ದಾರೆ.
ಈ ಮೂರು ಪ್ರಕರಣದಲ್ಲಿ ಗ್ರಾಹಕರನ್ನು ವಂಚಿಸಿ ಹಣ ಎಗರಿಸಿದ ಕುರಿತು ಪ್ರತ್ಯೇಕ ಪ್ರಕರಣ ಬೈಂದೂರು ಠಾಣೆಯಲ್ಲಿ ದಾಖಲಾಗಿದೆ.