Advertisement

ಬೈಂದೂರು ಮೂಲದ ಬೇಕರಿ ಸಿಬಂದಿಗೆ ಹಲ್ಲೆ: ಮೂವರ ಬಂಧನ

12:14 AM Dec 11, 2022 | Team Udayavani |

ಬೆಂಗಳೂರು: ಚಹಾ ಹಾಗೂ ಸಿಗರೇಟ್‌ ಕೊಡುವ ವಿಚಾರದಲ್ಲಿ ಕುಂದಲಹಳ್ಳಿ ಗೇಟ್‌ ಬಳಿಯ ಬೇಕರಿ ಸಿಬಂದಿಗೆ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪಕ್ಕದ ಅಂಗಡಿಯ ಮಾಲಕನೇ ತನ್ನ ಸಹಚರರ ಮೂಲಕ ಕೃತ್ಯ ಎಸಗಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಕರಣದ ಸಂಬಂಧ ನಾಲ್ವರನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಕೃತ್ಯ ನಡೆದ ಬೇಕರಿಯ ಪಕ್ಕದ ಅಂಗಡಿಯ ಮಾಲಕ ಮಂಜುನಾಥ್‌, ಡೆಲಿವರಿ ಬಾಯ್‌ ಅಶ್ವತ್ಥ ನಗರದ ಕಾರ್ತಿಕ್‌, ಅಲ್ಯೂಮಿನಿಯಂ ಕೆಲಸ ಮಾಡುತ್ತಿದ್ದ ಸಲ್ಮಾನ್‌, ಖಾಸಗಿ ಹೊಟೇಲ್‌ ಮ್ಯಾನೇಜರ್‌ ಆಗಿದ್ದ ಮಾರತ್ತಹಳ್ಳಿಯ ಕಾರ್ತಿಕ್‌ ಬಂಧಿತರು. ಪ್ರಮುಖ ಆರೋಪಿ ಮಂಜು ತಲೆಮರೆಸಿಕೊಂಡಿದ್ದಾನೆ.

ಉಡುಪಿ ಜಿಲ್ಲೆಯ ಬೈಂದೂರು ಮೂಲದ ನವೀನ್‌ ಕುಮಾರ್‌, ಪ್ರಜ್ವಲ್ ಹಾಗೂ ನಿತಿನ್‌ ಹಲ್ಲೆಗೊಳಗಾದವರು.
ಸಿಸಿ ಕೆಮರಾದಲ್ಲಿ ಸೆರೆಯಾದ ದೃಶ್ಯದ ಆಧಾರದಲ್ಲಿ ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪಕ್ಕದ ಅಂಗಡಿ ಮಾಲಕ ಮಂಜುನಾಥನೇ ಕೃತ್ಯದ ರೂವಾರಿ ಎಂಬ ಸಂಗತಿ ಬಯಲಾಗಿದೆ.

ಬೇಕರಿ ಇರುವ ಕಾರಣ ಮಂಜುನಾಥನ ಚಹಾದ ಅಂಗಡಿಯಲ್ಲಿ ವ್ಯಾಪಾರ ಕಡಿಮೆಯಾಗುತ್ತಿತ್ತು. ಈ ಬಗ್ಗೆ ತನ್ನ ಗೆಳೆಯರಿಗೆ ಹೇಳಿಕೊಂಡಿದ್ದು, ಬೇಕರಿಯವರನ್ನು ಹೇಗಾದರೂ ಮಾಡಿ ಓಡಿಸಬೇಕು ಎಂದು ಹಣದ ಆಮಿಷವೊಡ್ಡಿ ಅವರ ಸಹಕಾರ ಕೇಳಿದ್ದ. ಇದಕ್ಕೆ ಒಪ್ಪಿದ್ದ ಆರೋಪಿಗಳು ಗುರುವಾರ ರಾತ್ರಿ ಬೇಕರಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಹಲ್ಲೆ ಮಾಡಿದ್ದರು.

ಮನಬಂದಂತೆ ಹಲ್ಲೆ
ಆರೋಪಿಗಳು ಹೆಲ್ಮೆಟ್‌ ಹಾಗೂ ಕೈಯಿಂದ ಮನ ಬಂದಂತೆ ಹಲ್ಲೆ ನಡೆಸಿದ್ದಲ್ಲದೆ ಕಾಲಿನಿಂದ ತುಳಿದಿದ್ದಾರೆ. ಬೇಕರಿ ಸಿಬಂದಿಯ ಕುತ್ತಿಗೆಯಲ್ಲಿದ್ದ 18 ಗ್ರಾಂ ತೂಕದ ಸರ ಕಸಿದುಕೊಂಡು ಹೋಗಿದ್ದಾರೆ. ಕಾಂಡಿಮೆಂಟ್ಸ್‌ ವಸ್ತುಗಳನ್ನು ಹಾಗೂ ಗ್ಲಾಸ್‌ಗಳನ್ನು ಒಡೆದು ಚೆಲ್ಲಾಪಿಲ್ಲಿ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ನವೀನ್‌ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Advertisement

ಠಾಣೆ ಎದುರು ಪ್ರತಿಭಟನೆ
ಬೇಕರಿಯಲ್ಲಿ ಪುಡಿರೌಡಿಗಳ ಪುಂಡಾಟ ಹಲ್ಲೆ ಖಂಡಿಸಿ ದಕ್ಷಿಣ ಕನ್ನಡ ಮೂಲದ ವ್ಯಾಪಾರಿಗಳು, ಉದ್ಯಮಿಗಳು ಡಿ.9ರಂದು ಎಚ್‌ಎಎಲ್‌ ಪೊಲೀಸ್‌ ಠಾಣೆ ಮುಂದೆ ಜಮಾಯಿಸಿದ್ದರು. 50ಕ್ಕೂ ಹೆಚ್ಚು ಜನರು ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಕರವೇ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಘಟನೆ ಬಗ್ಗೆ ಠಾಣೆಯಲ್ಲಿ ಚರ್ಚೆ ನಡೆಸಿ ಬೇಕರಿ ಹುಡುಗನಿಗೆ ನ್ಯಾಯ ಒದಗಿಸಿಕೊಡುವಂತೆ ಕೇ ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ನವೀನ್‌ ಕುಮಾರ್‌ ಶೆಟ್ಟಿ ಹಾಗೂ ಇತರರು ಕುಂದಲಹಳ್ಳಿ ಗೇಟ್‌ ಬಳಿ ಬ್ರಹ್ಮಲಿಂಗೇಶ್ವರ ಹೆಸರಿನಲ್ಲಿ ಬೇಕರಿ ನಡೆಸುತ್ತಿದ್ದರು.

ಕಠಿನ ಕ್ರಮಕ್ಕೆ ಬೈಂದೂರು ಶಾಸಕರಿಂದ ಸೂಚನೆ
ಪ್ರಕರಣದ ಬಗ್ಗೆ ಗೃಹ ಸಚಿವರು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿದ ಶಾಸಕ ಸುಕುಮಾರ್‌ ಶೆಟ್ಟಿ, ನಮ್ಮ ಊರಿನ 40 ಸಾವಿರ ಮಂದಿ ಬೆಂಗಳೂರಿನಲ್ಲಿದ್ದಾರೆ. ಬೆಂಗಳೂರಿನಲ್ಲಿರುವ ಬಹುತೇಕ ಹೊಟೇಲ್‌, ಬೇಕರಿ ಎಲ್ಲವೂ ಬೈಂದೂರು ವಲಯದವರದ್ದಾಗಿದೆ. ಕುಂದಲಹಳ್ಳಿ ಗೇಟ್‌ನಲ್ಲಿ ವ್ಯಾಪಾರ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಬೇಕರಿ ಸಿಬಂದಿಯನ್ನು ದೂರವಾಣಿ ಮೂಲಕ ಮಾತನಾಡಿಸಿದ ಶಾಸಕರು, ಗಾಯಗೊಂಡ ಯುವಕರ ಆರೋಗ್ಯ ವಿಚಾರಿಸಿದರು.

ಪೊಲೀಸರಿಂದ ಭರವಸೆ
ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ ಬಳಿಕ ಅವರ ವಿರುದ್ಧ ರೌಡಿ ಶೀಟ್‌ ತೆರೆಯಲಾಗುವುದು. ಅವರಿಂದ ಮುಂದೆ ಯಾರಿಗೂ ತೊಂದರೆ ಆಗಬಾರದು. ಒಮ್ಮೆ ರೌಡಿ ಶೀಟ್‌ ಓಪನ್‌ ಆದರೆ, ಪ್ರತಿ ವಾರ ಆತ ಠಾಣೆಗೆ ಬಂದು ಸಹಿ ಮಾಡಬೇಕಾಗುತ್ತದೆ. ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ಹಲ್ಲೆಗೊಳಗಾದವರಿಗೆ ರಕ್ಷಣೆ ನೀಡುತ್ತೇವೆ ಎಂದು ಠಾಣೆ ಮುಂದೆ ಪ್ರತಿಭಟನೆ ನಡೆಸಿದವರಿಗೆ ಪೊಲೀಸರು ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next