Advertisement

ಓಟಿಗೆ ಸ್ಪರ್ಧಿಸಲು ಮನೆ ಬಿಟ್ಟಿದ್ದೆ !

06:00 AM Apr 17, 2018 | Team Udayavani |

ಬೈಂದೂರು ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಪ್ರಥಮ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಘಟಾನುಘಟಿ ಮುತ್ಸದ್ದಿಗಳ ನಡುವೆ ರಾಜಕೀಯ ಅಖಾಡದಲ್ಲಿ ಹೋರಾಟ ನಡೆಸಿ ಪ್ರಥಮ ಬಾರಿಗೆ ಕಾಂಗ್ರೆಸ್‌ ಗೆಲುವಿಗೆ ಅಂಕುಶ ಹಾಕಿ ಕೇವಲ 23 ಮತಗಳಿಂದ ಜನತಾದಳ ವಿಜಯ ಸಾಧಿಸಲು ಕಾರಣರಾದವರು ಬಿ.ಜಿ. ಮೋಹನ್‌ದಾಸ್‌. ವೈದ್ಯಕೀಯ, ಔಷಧಾಲಯ ಶಾಸ್ತ್ರ ವಿಭಾಗದಲ್ಲಿ ಉನ್ನತ ಶಿಕ್ಷಣ ಪಡೆದಿರುವ ಇವರ ರಾಜಕೀಯ ಎಂಟ್ರಿ ಬಹಳ ರೋಚಕವಾಗಿದೆ.

Advertisement

ರಾಜಕೀಯ ಪ್ರವೇಶಿಸಲು ಕಾರಣ ?
     ನನ್ನ ತಂದೆ ವೃತ್ತಿಯಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿದ್ದವರು.ಅವರ ವರ್ಗಾವಣೆಯಾದಂತೆ ಬೇರೆ ಬೇರೆ ಕಡೆ ಶಾಲೆಗೆ ಹೋಗಬೇಕಾದ ಅನಿವಾರ್ಯತೆ. ಕಾಲೇಜು ದಿನಗಳಲ್ಲೇ ನಾಯಕತ್ವ ಮೈಗೂಡಿಸಿಕೊಂಡಿದ್ದ ನನಗೆ ಊರಿನ ಪರಿಸ್ಥಿತಿ ಬಗ್ಗೆ ಬೇಸರವಿದ್ದಿತ್ತು. ಸೌದಿ ಆರೇಬಿಯಾದಲ್ಲಿ ಒಂದೂವರೆ ವರ್ಷ ಉದ್ಯೋಗ ಮಾಡಿ ಭಾರತಕ್ಕೆ ವಾಪಸಾದೆ. ಅದೇ ಸಮಯದಲ್ಲಿ ಊರಿನಲ್ಲಿ ಚುನಾವಣೆ ಪ್ರಾರಂಭವಾಗಿತ್ತು. ಕೈಯಲ್ಲಿ ದುಡಿದ ಹಣವಿತ್ತು. ಊರಿನ ಅಭಿವೃದ್ಧಿ ಮಾಡಲು ಅವಕಾಶ ಉಪಯೋಗಿಸಿಕೊಳ್ಳಬೇಕು ಎಂದು ಪಕ್ಷೇತರವಾಗಿ ರಾಜಕೀಯ ಪ್ರವೇಶಿಸಿದೆ.

ಕುಟುಂಬದವರ ರಾಜಕೀಯ ಹಿನ್ನೆಲೆ ಬಗ್ಗೆ
          ಕುಟುಂಬದಲ್ಲಿ ರಾಜಕೀಯ ಹಿನ್ನೆಲೆಯಿಲ್ಲ. ನನ್ನ ತಂದೆ ತುಂಬಾ ಕಟ್ಟುನಿಟ್ಟು. ಉತ್ತಮ ಕೃಷಿಕ. ರಾಜಕೀಯ ಅವರಿಗೆ ಇಷ್ಟ ಇರಲಿಲ್ಲ. ನಾನು ಚುನಾವಣೆಗೆ ಸ್ಪರ್ಧಿಸುವುದಾದರೆ ಮನೆ ಬಿಡಬೇಕು ಎಂದರು. ರಾಜಕೀಯಕ್ಕೋಸ್ಕರ ಮನೆಬಿಟ್ಟು ಅಜ್ಜಿ ಮನೆಯಲ್ಲಿ ವಾಸ ಮಾಡಿದೆ.

ನಿಮ್ಮ ರಾಜಕೀಯ ಪ್ರಚಾರ ಹೇಗಿತ್ತು?
      ಆ ಸಮಯದಲ್ಲಿ ಜನರಿಗೆ ಕಾಂಗ್ರೆಸ್‌ ಬಿಟ್ಟರೆ ಇನ್ನೊಂದು ಪಕ್ಷ ಗೊತ್ತಿರಲಿಲ್ಲ. ನಾನು ಪಕ್ಷೇತರನಾಗಿದ್ದೆ. ಆದರೂ ನನ್ನ ಉದಯ ಸೂರ್ಯ ಚಿಹ್ನೆ ಹೆಸರುವಾಸಿಯಾಯಿತು.

ಅಂದು ರಾಜಕೀಯ ಪೈಪೋಟಿ ಹೇಗಿತ್ತು?
      ಬೈಂದೂರಿನಲ್ಲಿ ಜಿ.ಎಸ್‌. ಆಚಾರ್‌, ಯಡ್ತರೆ ಮಂಜಯ್ಯ ಶೆಟ್ಟಿಯಂತಹ ನಾಯಕರ ಜತೆಗೆ ಅಪ್ಪಣ್ಣ ಹೆಗ್ಡೆ ಪ್ರತಿ ಸ್ಪರ್ಧಿ ಯಾಗಿದ್ದರು. ನಾನು ಬೈಂದೂರು ಜಂಕ್ಷನ್‌ ಬಳಿ ಪ್ರಚಾರದ ಚಪ್ಪರ ನಿರ್ಮಿಸುವಾಗ ವೀರಪ್ಪ ಮೊಲಿ ನನ್ನನ್ನು ನೋಡಿ ಆಸ್ಕರ್‌ ಫೆರ್ನಾಂಡಿಸ್‌ ಅವರಿಗೆ ನನ್ನ ಬಗ್ಗೆ ಹೇಳಿದ್ದರು. “ಯಾರೋ ಮಣಿಪಾಲದ ಹುಡುಗ. ಬೈಂದೂರಲ್ಲಿ ಪಕ್ಷೇ ತರನಾಗಿ ಸ್ಪರ್ಧಿಸಿದ್ದಾನೆ; ಅವನಿಗೆ ಸ್ವಲ್ಪ ಹೇಳಿ’ ಎಂದಿದ್ದರು.

Advertisement

ಫಲಿತಾಂಶದ  ಬಳಿಕ ಅನುಭವ ಹೇಗಿತ್ತು?
         ಆವತ್ತು ಬಿಸಿ ರಕ್ತದ ಯುವಕರ ಪಡೆ, ಸೌದಿ ಅರೇಬಿಯಾ ದಲ್ಲಿ ದುಡಿದ ಸ್ವಲ್ಪ ಹಣ ಇತ್ತು. ಚುನಾವಣೆಯಲ್ಲಿ ಜಯ ಗಳಿಸದಿದ್ದರೂ ಸಮರ್ಥ ಸ್ಪರ್ಧೆ ನೀಡಿರುವ ಸಮಾಧಾನ ಇದೆ. ನನ್ನ ಸ್ಪರ್ಧೆಯಿಂದಾಗಿ ಕಾಂಗ್ರೆಸ್‌ ಕೇವಲ 23 ಮತಗಳ ಅಂತರದಲ್ಲಿ ಸೋಲುವಂತಾಯಿತು. ಸ್ವಲ್ಪ ದಿನದಲ್ಲೇ ರಾಜಕೀಯಕ್ಕೆ ಗುಡ್‌ಬೈ ಹೇಳಿ ಮತ್ತೆ ವಿದೇಶಕ್ಕೆ ಹೋದೆ.ಈಗಿನ ರಾಜಕೀಯ ಅನ್ನೋದು ವ್ಯವಹಾರ ಆಗಿದೆ. ಅಂದು ನಾನು ಸ್ಪರ್ಧೆ ಮಾಡಿದ್ದು ಕ್ಷೇತ್ರದಲ್ಲಿ   ಮೂಲಸೌಲಭ್ಯಗಳನ್ನು ಕಲ್ಪಿಸಬೇಕು ಎಂಬ ಕಾರಣಕ್ಕೆ.

– ಅರುಣ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next