Advertisement

ಬೈಕಂಪಾಡಿ; ಭಾರೀ ಪ್ರಮಾಣದ ತ್ಯಾಜ್ಯ-ಜಲಮೂಲಕ್ಕೆ ಹಾನಿ

04:22 PM Mar 06, 2023 | Team Udayavani |

ಬೈಕಂಪಾಡಿ: ಬೈಕಂಪಾಡಿಯಿಂದ ಜೋಕಟ್ಟೆಗೆ ಸಾಗುವ ಹಾದಿಯ ಇಕ್ಕೆಲಗಳಲ್ಲೂ ಇರುವ ಕಾಂಡ್ಲಾವನ, ನೀರಿನ ಪ್ರದೇಶ ಇದೀಗ ಅವನತಿಯ ಅಂಚಿಗೆ ಸಾಗುತ್ತಿದೆ. ಮುಂದೊಂದು ದಿನ ಕಣ್ಮರೆಯಾದರೂ ಅಚ್ಚರಿಯಿಲ್ಲ. ಪಶ್ಚಿಮ ಘಟ್ಟದಿಂದ ಹರಿದು ಬರುವ ಮಳೆ ನೀರಿನ ಪ್ರಮುಖ ಹಳ್ಳ – ಹೊಳೆಗಳಿಗೆ ಇದೀಗ ಸರ್ವನಾಶದ ಭೀತಿ ಎದುರಾಗಿದೆ. ಒಂದೆಡೆ ತ್ಯಾಜ್ಯ ರಾಶಿ ಸೇರಿ ಜಲ ಮೂಲ ಮಲಿನವಾಗು ತ್ತದೆ. ಈ ಮಲೀನ ನೀರು ತೋಕೂರು ಮೂಲಕ ಫ‌ಲ್ಗುಣಿ ನದಿ ಪಾಲಾಗುತ್ತಿದೆ.

Advertisement

ಪೆರ್ಮುದೆ ಗ್ರಾಮ ಪಂ.ವ್ಯಾಪ್ತಿಯಲ್ಲಿ ಲ್ಯಾಂಡ್‌ ಫಿಲ್ಲಿಂಗ್‌!
ಜೋಕಟ್ಟೆ ರೈಲ್ವೇ ಟ್ಯಾಕ್‌ ಸಮೀಪ ಪೇಜಾವರ ಮಠಕ್ಕೆ ಹೋಗುವ ಹಾದಿಯಲ್ಲಿ ಹಳ್ಳ – ಕೊಳ್ಳಗ ಳಿದ್ದು, ಈ ಪ್ರದೇಶದ ರಸ್ತೆ ಬದಿ ಭಾರೀ ಪ್ರಮಾಣದಲ್ಲಿ ತ್ಯಾಜ್ಯ ಮಣ್ಣು ತಂದು ತಂಬಿಸಲಾಗು ತ್ತಿದೆ. ಗ್ರಾನೈಟ್‌ ತುಂಡುಗಳು,ಕಟ್ಟಡ ತ್ಯಾಜ್ಯಗಳು ಭಾರೀ ಪ್ರಮಾಣದಲ್ಲಿ ಬಂದು ಬೀಳುತ್ತಿವೆ. ಕಣ್ಗಾವಲು ಎಂಬುದು ಇಲ್ಲಿ ಇಲ್ಲವೇ ಇಲ್ಲ. ಮುಂದೊಂದು ದಿನ ಕಟ್ಟಡ ನಿರ್ಮಾಣವಾಗುವ ಸಾಧ್ಯತೆ ಇದೆ.

ರಸ್ತೆ ಇಕ್ಕೆಲಗಳಲ್ಲೂ ತ್ಯಾಜ್ಯ ರಾಶಿ!
ಇಲ್ಲಿ ಕೆಐಎಡಿಬಿ ಕೈಗಾರಿಕ ವಲಯದಿಂದ ಜೋಕಟ್ಟೆವರೆಗೆ ಸಾಗುವ ರಸ್ತೆ ಬದಿಯಲ್ಲಿ ತ್ಯಾಜ್ಯ ರಾಶಿ ಹಾಕಲಾಗಿದೆ. ಹೀಗೆ ತ್ಯಾಜ್ಯ ಸುರಿಯುವವರನ್ನು ಇಲ್ಲಿ ಕೇಳುವವರು ಯಾರು ಇಲ್ಲವೇ ಎಂಬುದು ಪ್ರಶ್ನೆ. ಇಲ್ಲಿನ ಪ್ರದೇಶ ಎರಡು ಪಂಚಾಯತ್‌ ಹಾಗೂ ಕೈಗಾರಿಕ ವಲ ಯದ ವ್ಯಾಪ್ತಿಗೆ ಸೇರಿದೆ. ತ್ಯಾಜ್ಯವನ್ನು ಕೊಳ್ಳದ ಅಂಚಿನಲ್ಲಿ ಹಾಕುತ್ತಾ ಕೊಳ್ಳದ ಸುಗಮ ಹರಿವಿಗೆ ತಡೆ ಒಡ್ಡುವ ಆತಂಕ ಎದುರಾಗಿದೆ. ಇಲ್ಲಿ ರಸ್ತೆಯಂಚಿನಲ್ಲಿ ಮಧ್ಯದ ಬಾಟಲಿಗಳ ಸಂಗ್ರಹವೇ ಕಂಡು ಬಂದಿದೆ.

ಇದರ ನಡುವೆ ತ್ಯಾಜ್ಯಗಳಿಗೆ ಬೆಂಕಿ ನೀಡಿ ಅದರಿಂದ ಗುಜರಿ ತೆಗೆಯುವ ಪ್ರಯತ್ನ ನಿರಂತರವಾಗಿ ನಡೆದಿದೆ. ಇನ್ನು ಕೆಲವೆಡೆ ವಿಷಯುಕ್ತ ಕೈಗಾರಿಕಾ ತ್ಯಾಜ್ಯ ತಂದು ಗೋಣಿ ಚೀಲದಲ್ಲಿ ಕೊಳ್ಳದ ಬಳಿ ಎಸೆದು ಹೋಗಲಾಗುತ್ತಿದೆ. ಇದರಿಂದ ಇಲ್ಲಿನ ಜಲಚರಗಳು ಅಪಾಯದಂಚಿನಲ್ಲಿವೆ. ಇದನ್ನು ತಿನ್ನಲು ಬರುವ ನಾನಾ ಬಗೆಯ ಕೊಕ್ಕರೆ, ಮಿಂಚುಹುಳ ಸಹಿತ ಪಕ್ಷಿಗಳೂ ಅನಾರೋಗ್ಯಕ್ಕೀಡಾಗುವ ಸಂಭವ ಹೆಚ್ಚು

ಅಪರೂಪದ ಕಾಂಡ್ಲಾ ವನಕ್ಕೆ ಅಪಾಯ
ಇಲ್ಲಿ ಭಾರೀ ಪ್ರಮಾಣದಲ್ಲಿ ಕಾಂಡ್ಲಾ ವನವಿದ್ದು, ನೀರಿನ ಒರತೆ ಹೆಚ್ಚಿಸುವ ಹಾಗೂ ಹೆಚ್ಚು ಭೂ ಸವಕಳಿ ಆಗದಂತೆ ತಡೆಯುವ ಸಾಮರ್ಥ್ಯ ಹೊಂದಿದೆ. ಇದೀಗ ಲ್ಯಾಂಡ್‌ ಫಿಲ್ಲಿಂಗ್‌ ಮಾಡುವ ಪರಿಣಾಮ ಇವು ಮಣ್ಣಿನಡಿ ಬಿದ್ದು ಅಸ್ಥಿತ್ವ ಕಳೆದುಕೊಳ್ಳುತ್ತಿವೆ. ಸಿಆರ್‌ಝಡ್‌ ಪ್ರದೇಶವಾಗಿರುವುದರಿಂದ ಇಲಾಖೆ ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Advertisement

ಪರಿಶೀಲಿಸಿ ಕ್ರಮ
ಸಿಆರ್‌ಝಡ್‌ ಪ್ರದೇಶದಲ್ಲಿ ಯಾವುದಾದರೂ ಅಕ್ರಮ ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ. ಖುದ್ದಾಗಿ ನಾನೇ ಭೇಟಿ ನೀಡಿ ಪರಿಶೀಲಿಸುವೆ.
ದಿನೇಶ್‌ ಕುಮಾರ್‌,
ಅರಣ್ಯ ಉಪಸಂರಕ್ಷಣಾಧಿಕಾರಿಗಳು

Advertisement

Udayavani is now on Telegram. Click here to join our channel and stay updated with the latest news.

Next