Advertisement

ಪ್ರಧಾನಿ ಪಟ್ಟ ಅನುಕಂಪ ಆಧಾರದ ನೌಕರಿಯಲ್ಲ 

10:42 AM Feb 21, 2019 | Team Udayavani |

ಬ್ಯಾಡಗಿ: ದೇಶದ ಪ್ರಧಾನಿ ಪಟ್ಟ ಅನುಕಂಪದ ಆಧಾರದ ನೌಕರಿಯಲ್ಲ, ದೇಶವನ್ನು ಕೊಳ್ಳೆ ಹೊಡೆಯಲು ಮಹಾಘಟಬಂಧನ್‌ ರಚಿಸಿಕೊಳ್ಳಲಾಗಿದೆ. ಭಾರತೀಯ ಸೈನ್ಯದಲ್ಲಿರುವ ನಮ್ಮ ಯುವಕರ ನರಮೇಧ ನಡೆಯುತ್ತಿದ್ದರೂ ಬಾಯಿ ಮುಚ್ಚಿಕೊಂಡಿರುವ ಪಟ್ಟಭದ್ರ ಹಿತಾಸಕ್ತಿಗಳಿಂದ ದೇಶಕ್ಕೆ ರಕ್ಷಣೆ ಇಲ್ಲ ಎಂದು ಟೀಮ್‌ ಮೋದಿ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಹೇಳಿದರು.

Advertisement

ಪಟ್ಟಣದ ಎಸ್‌ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ‘ಮೋದಿಗಾಗಿ ನಾವು; ದೇಶಕ್ಕಾಗಿ ಮೋದಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೋಟು ಅಮಾನ್ಯೀಕರಣ ಮಾಡುವ ಮೂಲಕ ಪಾಕಿಸ್ತಾನವನ್ನು ಭಿಕ್ಷೆ ಬೇಡುವಂತೆ ಮಾಡಿದ ಕೀರ್ತಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ವಿಶ್ವಮಟ್ಟದಲ್ಲಿ ಭಾರತದ ಗೌರವ ಹೆಚ್ಚಿಸುವ ಮೂಲಕ ಸ್ವಚ್ಛ  ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಪ್ರಧಾನಿ ಮೋದಿಯವರ ಕೈಗೆ ಮತ್ತೂಮ್ಮೆ ದೇಶ ಕೊಡುವ ಸಂಕಲ್ಪ ಮಾಡಿಕೊಳ್ಳುವಂತೆ ಕರೆ ನೀಡಿದರು.

ಜವಾಹರಲಾಲ್‌ ನೆಹರು ಬಳಿಕ ಇಂದಿರಾಗಾಂಧಿ, ಅವರ ಬಳಿಕ ರಾಜೀವ ಗಾಂಧೀ, ಇದೀಗ ರಾಹುಲ್‌ ಗಾಂಧಿ ಪ್ರಧಾನಿ ಪಟ್ಟಕ್ಕೆ ಅರ್ಜಿ ಹಾಕಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇದೀಗ ಎಚ್ಚೆತ್ತಿಕೊಂಡಿರುವ ದೇಶದ ಭ್ರಷ್ಟರು ಮಹಾಘಟಬಂಧನ್‌ ಎಂಬ ನವಜಾತ ಶಿಶುವೊಂದನ್ನು ಹುಟ್ಟಿಸಿದ್ದು, ಅದಕ್ಕೆ ತಂದೆ ಯಾರು ಎಂಬುದನ್ನು ಹುಡುಕಲು ಹೊರಟಿದ್ದಾರೆ. ಆ ಮಗು ಬೆಳೆಯಲು ಬಿಡಬಾರದು, ಅದು ದೊಡ್ಡದಾದಷ್ಟು ದೇಶಕ್ಕೆ ಅಪಾಯ ತಪ್ಪಿದ್ದಲ್ಲ. ಇದರ ಹಿಂದಿರುವ ಪ್ರಮುಖ ರೂವಾರಿ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳಕ್ಕೆ ಬಾಂಗ್ಲಾ ಎಂದು ಹೆಸರಿಡಲು ಮುಂದಾಗಿರುವುದೇ ಇದಕ್ಕೆ ಸಾಕ್ಷಿ ಎಂದರು.

ಮಾಫಿಯಾಗಳು ಮಾಯ: ಕಳೆದ ಆರೇಳು ದಶಕಗಳಿಂದ ದೇಶದಲ್ಲಿ ಜೀವಂತವಾಗಿದ್ದ ಖೋಟಾನೋಟು, ಹವಾಲಾ, ಮರಳು, ಮೆಡಿಶನ್‌, ಲ್ಯಾಂಡ್‌, ಪೆಟ್ರೋಲ್‌ ಮಾಫಿಯಾಗಳನ್ನು ಹತ್ತಿಕ್ಕುವ ಮೂಲಕ ಭ್ರಷ್ಟರನ್ನು ಸದೆ ಬಡಿಯುವ ಕೆಲಸದಲ್ಲಿ ಯಶಸ್ವಿಯಾಗಿದ್ದಲ್ಲದೇ, ಇಂತಹ ಎಲ್ಲ ಭ್ರಷ್ಟಾಚಾರ ನಿಗ್ರಹಿಸಿದ ಮೋದಿ ವಂಚಕರಿಂದ ತೆರಿಗೆ ಸಂಗ್ರಹಿಸುವ ಮೂಲಕ ದೇಶವನ್ನು ಶ್ರೀಮಂತಗೊಳಿಸುವ ಕಾರ್ಯದಲ್ಲಿ ಮುನ್ನಡೆದಿದ್ದಾರೆ ಎಂದರು.

ಸಾಲ ತೀರಿಸಿದ ಮೋದಿ: ಕಳೆದ ಆರು ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ತಮ್ಮ ಆಡಳಿತಾವಧಿಯಲ್ಲಿ ಎಷ್ಟು ಬೇಕು ಅಷ್ಟು ಸಾಲವನ್ನು ದೇಶಕ್ಕೆ ಹೊರಿಸಿದ್ದಲ್ಲದೇ ‘ಗರೀಬಿ ಹಠಾವೋ’ ಎಂಬ ತುಕ್ಕು ಹಿಡಿದ ಘೋಷಣೆಗಳೊಂದಿಗೆ ದೇಶದ ಸ್ಥಿತಿ ಹಾಳು ಮಾಡಿದ್ದು, ನಮ್ಮ ತೆರಿಗೆ ಹಣದಿಂದ ಶ್ರೀಮಂತನಾಗುವ ದೇಶದ್ರೋಹಿ ನಮಗೆ ಬೇಕಿಲ್ಲ. ಇನ್ನೊಬ್ಬರಿಗೆ ಕೈಚಾಚದೇ ಸ್ವಾಭಿಮಾನದಿಂದ ಬದುಕುವ ಒಬ್ಬ ಶ್ರೀಮಂತ ಬಡವ ನಮಗೆ ಬೇಕಾಗಿದ್ದಾನೆ ಎಂದರು.

Advertisement

ಭಾರತೀಯರಿಗೇ ಹೆಚ್ಚು ತೆರಿಗೆ: ತಮ್ಮ ದುಡಿಮೆಯ ಹಣದಿಂದ ದೇಶಕ್ಕೆ ತೆರಿಗೆ ನೀಡುತ್ತಿರುವ ಭಾರತೀಯರು ವಿಶ್ವದಲ್ಲೇ ಇದೀಗ ನಂ.1 ಸ್ಥಾನದಲ್ಲಿದ್ದೇವೆ. ಇಷ್ಟೊಂದು ದೊಡ್ಡಮಟ್ಟದ ತೆರಿಗೆಯೊಂದಿಗೆ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುತ್ತಿರುವ ಭಾರತೀಯರು, ನಮ್ಮ ಸೈನ್ಯವನ್ನು ಬಲಿಷ್ಠಗೊಳಿಸಲು ಮುಂದಾಗಬೇಕು. ನಮ್ಮ ಯುವಕರು ಸದೃಢ ಭಾರತ ನಿರ್ಮಾಣ ಸಂಕಲ್ಪ ಮಾಡಬೇಕು. ಜೀವ ಕೊಟ್ಟಾದರೂ ಭಾರತವನ್ನು ಉಳಿಸುತ್ತೇನೆ, ಹಿಂದೂ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತೇನೆ ಎಂಬ ಸಂಕಲ್ಪ ಎಲ್ಲರಲ್ಲಿಯೂ ಬರಬೇಕು ಎಂದರು.

ದೇಶದ ಮುಸ್ಲಿಮರು ಸೇಫ್‌
ಜಿಹಾದಿಗಳಿಂದ ಇಂದು ಭಯೋತ್ಪಾದನೆ ಆರಂಭವಾಗಿದೆ. ಬಡ ಮುಸ್ಲಿಂ ಯುವಕರಿಗೆ ಧರ್ಮದ ಹೆಸರಿನಲ್ಲಿ ಪ್ರಚೋದನೆ ಮಾಡುವ ಮೂಲಕ ತಪ್ಪು ಹಾದಿ ಹಿಡಿಯುವಂತೆ ಮಾಡಲಾಗುತ್ತಿದೆ. ಮೊನ್ನೆ ನಡೆದ ಪುಲ್ವಾಮ ಘಟನೆ ಇದಕ್ಕೆ ತಾಜಾ ಉದಾಹರಣೆ.  ಭಾರತದಲ್ಲಿರುವ ಮುಸ್ಲಿಮರು ವಿಶ್ವದಲ್ಲಿಯೇ ಸೇಫ್‌ ಜೋನ್‌ನಲ್ಲಿದ್ದಾರೆ. ಆದರೆ, ಪಾಪಿ ಜಿಹಾದಿಗಳು ಪಾಕಿಸ್ತಾನದಲ್ಲೇ 120 ಅಮಾಯಕ ಮಕ್ಕಳನ್ನು ನರಮೇಧ ಮಾಡಿದ್ದಾರೆ, ಇದಕ್ಕೆ ಪಾಕಿಸ್ತಾನದ ಬಳಿ ಉತ್ತರವಿದೆಯೇ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next