Advertisement

ಲೋಕಸಭೆ ಚುನಾವಣೆ ಬಹಿಷ್ಕಾರ

10:50 AM Feb 09, 2019 | Team Udayavani |

ಬ್ಯಾಡಗಿ: ಆಣೂರ ಕೆರೆ ತುಂಬಿಸಲು ಬಜೆಟ್ಲ್ಲಿ ಅನುದಾನ ಮೀಸಲಿಡಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಮಾಜಿ ಶಾಸಕ ಶಿವಣ್ಣನವರ ಸೇರಿದಂತೆ ಜನಪ್ರತಿನಿಧಿಗಳು ನೀಡಿದ್ದ ಭರವಸೆಗಳೆಲ್ಲ ಇಂದು ಹುಸಿಯಾಗಿವೆ. ಜಿಲ್ಲೆಗೆ ಬಜೆಟ್‌ನಲ್ಲಿಯಾವುದೇ ಅನುದಾನ ಮೀಸಲಿಡದೆ ಮತ್ತೂಮ್ಮೆ ಅನ್ಯಾಯ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆ ಬ್ಯಾಡಗಿ ತಾಲೂಕಿನಲ್ಲಿ ಬಹಿಷ್ಕಾರ ಖಂಡಿತ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದರು.

Advertisement

ಅಸುಂಡಿ ಜಲಾನಯನದಡಿ ಬ್ಯಾಡಗಿ ಮತ್ತು ಹಾವೇರಿ ತಾಲೂಕಿನ ಒಟ್ಟು 36 ಗ್ರಾಮಗಳ ಕೆರೆಗಳನ್ನು ತುಂಬಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ತಹಶೀಲ್ದಾರ್‌ ಕಚೇರಿ ಎದುರು ಹಮ್ಮಿಕೊಂಡಿರುವ ಧರಣಿಯಲ್ಲಿ ಮಾತನಾಡಿದರು.

ರೈತರನ್ನು ನಿರಂತರವಾಗಿ ಮತ್ತು ವ್ಯವಸ್ಥಿತವಾಗಿ ಮುಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಡೆಸುತ್ತಿರುವ ಹುನ್ನಾರಕ್ಕೆ ಕುಮಾರಸ್ವಾಮಿ ಮಂಡಿಸಿದ ರೈತ ವಿರೋಧಿ ಬಜೆಟ್ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಧರಣಿಗೆ ಸ್ಪಂದನೆ ನೀಡದ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಆಕ್ರೋಶಗೊಂಡ ಪ್ರತಿಭಟನಾಕಾರರು ಹೋರಾಟ ತೀವ್ರಗೊಳಿಸಿದರು. ಜಿಲ್ಲಾಧಿಕಾರಿ ಸ್ಥಳಕ್ಕೆ ಬರಲೇಬೇಕು ಎಂದು ಪಟ್ಟು ಹಿಡಿದರು.

ಸ್ಥಳಕ್ಕಾಗಮಿಸಿದ ತೋಟಗಾರಿಕೆ ಇಲಾಖೆ ಅಧಿಕಾರಿಯನ್ನು ತರಾಟೆ ತೆಗೆದುಕೊಂಡ ಮುಖಂಡ ಗಂಗಣ್ಣ ಎಲಿ, 3 ವರ್ಷಗಳ ಹಿಂದೆ ತೋಟಗಾರಿಕೆ ಇಲಾಖೆ ಅಧಿಕಾರಿ ಮಾಡಿ ಹೋದ ತಪ್ಪಿಗೆ 132 ರೈತರು ಟೋಮ್ಯಾಟೋ ವಿಮೆಯಿಂದ ವಂಚಿತರಾಗಿದ್ದಾರೆ. ಸಮಸ್ಯೆ ಪರಿಹರಿಸುವುದಾಗಿ ಹೇಳಿದ್ದ ಅಧಿಕಾರಿಗಳು ಬಿಡಿಗಾಸು ನೀಡಿಲ್ಲ. ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ಹಣ ನುಂಗಿದ್ದಾರೆ. ರಾಜಕಾರಣಿಗಳಂತೆ ಭರವಸೆ ನೀಡಲು ಬಂದಿರುವ ನೀನು ಇಲಾಖೆಯಲ್ಲಿ ಕೆಲಸ ಮಾಡಲು ನಾಲಾಯಕ್‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಇದಕ್ಕೆ ಉತ್ತರಿಸುವ ಭರದಲ್ಲಿ ದ್ವಂದ್ವ ಹೇಳಿಕೆ ನೀಡಿ ರೈತರಿಂದಲೇ ತಪ್ಪಾಗಿದೆ ಎಂದು ಹೇಳಿಕೆ ನೀಡಿದ್ದರಿಂದ ತೋಟಗಾರಿಕೆ ಅಧಿಕಾರಿಗೆ ಘೇರಾವ ಹಾಕಿದರು. ನಮ್ಮ ಮೇಲಿನ ಆರೋಪ ಸಾಬಿತು ಮಾಡಿ ಹೋಗು ಎಂದು ರೈತರು ಪಟ್ಟು ಹಿಡಿದರು. ಇದರಿಂದ ಕಕ್ಕಾ ಬಿಕ್ಕಿಯಾದ ಅಧಿಕಾರಿ ಸಮಂಜಸ ಉತ್ತರ ನೀಡದೆ ಅಪಹಾಸ್ಯಕ್ಕೀಡಾದರು.

ಉಪ ವಿಭಾಗಾಧಿಕಾರಿ ತಿಪ್ಪೇಸ್ವಾಮಿ ಅಧಿಕಾರಿಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ರೈತರಿಗೆ ನ್ಯಾಯ ಒದಗಿಸುವಂತೆ ಸೂಚಿಸಿದರು.

ರೈತರ ಬೇಡಿಕೆ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುವಂತೆ ಒತ್ತಾಯಿಸಿ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕಿನ ಎಲ್ಲ ರೈತ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿವಿಧ ಹಂತಗಳಲ್ಲಿ ಬೇಡಿಕೆ ಈಡೇರಿಕೆಗಾಗಿ ರಾಷ್ಟ್ರೀಯ ಹೆದ್ದಾರಿ ತಡೆ, ಬ್ಯಾಡಗಿ ಬಂದ್‌, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಸೇರಿದಂತೆ ಉಗ್ರ ಸ್ವರೂಪ ಹೋರಾಟ ಹಮ್ಮಿಕೊಂಡು, ತಾಲೂಕಿಗೆ ನೀರು ತರುವುದು ನಮ್ಮ ಅಚಲ ನಿರ್ಧಾರ.
•ರುದ್ರನಗೌಡ್ರ ಕಾಡನಗೌಡ್ರ,
ರೈತ ಸಂಘದ ತಾಲೂಕಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next