Advertisement

ಬ್ಯಾಡಗಿ ಎಪಿಎಂಸಿ ಮಾರುಕಟ್ಟೆ ಕೆಂಪು ಕೆಂಪು

03:02 PM May 22, 2020 | Suhan S |

ಬ್ಯಾಡಗಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುರುವಾರ ಮೆಣಸಿನಕಾಯಿ ವಹಿವಾಟು ಎಂದಿನಂತೆ ಆರಂಭವಾಗಿದ್ದು, ಮೊದಲ ದಿನವೇ ಸುಮಾರು 60 ಸಾವಿರಕ್ಕೂ ಅಧಿಕ ಚೀಲ ಆವಕವಾಗಿದೆ.

Advertisement

ಕೋವಿಡ್‌-19 ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳಿಂದ ಮಾರುಕಟ್ಟೆ ವಹಿವಾಟು ಸ್ಥಗಿತಗೊಂಡಿತ್ತು. ಲಾಕ್‌ಡೌನ್‌ ಕುರಿತು ಮುಂಜಾಗ್ರತಾ ಕ್ರಮಗಳ ಯಶಸ್ವಿ ಪಾಲನೆ ಸೇರಿದಂತೆ ವಿವಿಧ ಷರತ್ತು ವಿಧಿಸಿದ್ದ ಎಪಿಎಂಸಿ ಆಡಳಿತ ಮಂಡಳಿಯ ನಿಭಂದನೆಗಳಿಗೆ ಒಪ್ಪಿ ವಹಿವಾಟು ನಡೆಸಲು ವ್ಯಾಪಾರಸ್ಥರು ಆಸಕ್ತಿ ತೋರಿದ ಹಿನ್ನೆಲೆಯಲ್ಲಿ ಎಂದಿನಂತೆ ಇ-ಟೆಂಡರ್‌ ಮೂಲಕ ಮೆಣಸಿನಕಾಯಿ ವಹಿವಾಟು ಆರಂಭಿಸಿದರು.

ಸೂಕ್ತ ಭದ್ರತಾ ವ್ಯವಸ್ಥೆ: ಮಾರುಕಟ್ಟೆಯಲ್ಲಿ ಮುಖ್ಯದ್ವಾರದಿಂದ ಆಗಮನ ಮತ್ತು ನಿರ್ಗಮನ, ಅಂಗಡಿಗೆ ಇಬ್ಬರಂತೆ ಪಾಸ್‌ ವಿತರಣೆ, ಕಡ್ಡಾಯ ಮಾಸ್ಕ್ ಹಾಗೂ ಸ್ಯಾನಿಟೈಸರ್‌ ಬಳಕೆ, ಟೆಂಡರ್‌ ಹಾಕುವ ವರ್ತಕರಲ್ಲೂ ಸಾಮಾಜಿಕ ಅಂತರ ಕಾಪಾಡುವಿಕೆ, ಹೊರಜಿಲ್ಲೆ ಮತ್ತು ರಾಜ್ಯದಿಂದ ಬಂದ ವಾಹನಗಳ ಚಾಲಕರು ಮತ್ತು ಕ್ಲೀನರ್ಗೆ ಎಪಿಎಂಸಿ ಹಳೇ ಕಟ್ಟಡದಲ್ಲಿ ವಾಸ್ತವ್ಯ, ಪ್ಯಾಕ್‌ ಮಾಡಿದ ಊಟ ಮತ್ತು ಉಪಹಾರ ಸರಬರಾಜು, ಅಲ್ಲಲ್ಲಿ ಪೊಲೀಸ್‌ ಸಿಬ್ಬಂದಿ ನಿಯೋಜನೆಯಿಂದ ಭದ್ರತಾ ವ್ಯವಸ್ಥೆ ಅತ್ಯಂತ ಯಶಸ್ವಿಯಾಯಿತು.

ಸಹಕಾರವಿದ್ದರೆ ಏನೆಲ್ಲಾ ಸಾಧಿಸಬಹುದು: ಬೃಹತ್‌ ಸಂಖ್ಯೆಯಲ್ಲಿ ರೈತರು ಸೇರುವ ಅನುಮಾನದಿಂದ ಲಾಕ್‌ ಡೌನ್‌ ನಿಯಮ ಪಾಲನೆ ಕಷ್ಟಸಾಧ್ಯವೆಂಬ ತೀರ್ಮಾನಕ್ಕೆ ಬಂದಿದ್ದ ಆಡಳಿತ ಮಂಡಳಿಯು ವಹಿವಾಟು ಆರಂಭಕ್ಕೆ ಅನುಮತಿಸಿರಲಿಲ್ಲ. ಆದರೆ ಎಪಿಎಂಸಿ ವಿಧಿಸಿದ ಷರತ್ತುಗಳಿಗೆ ವರ್ತಕರು ಒಪ್ಪಿದ್ದಲ್ಲದೇ ಪಾಲನೆಯಲ್ಲೂ ಹಿಂದೆ ಬೀಳದೇ ಸಿಬ್ಬಂದಿಯೊಂದಿಗೆ ಸಹಕರಿಸಿದ ಹಿನ್ನೆಲೆಯಲ್ಲಿ ವಹಿವಾಟು ಸುಗಮವಾಗಿ ನಡೆಯಿತು.

ಎಲ್ಲೆಲ್ಲೂ ಕೆಂಪು: ಕಳೆದೆರಡು ತಿಂಗಳಿಂದ ಜನರಿಲ್ಲದೆ ಬಿಕೋ ಎನ್ನುತ್ತಿದ್ದ ಎಪಿಎಂಸಿಯಲ್ಲಿ ಗುರುವಾರ ಎಲ್ಲೆಲ್ಲೂ ಕೆಂಪನೆಯ ಬಣ್ಣದ ಮೆಣಸಿನಕಾಯಿ ಕಂಗೊಳಿಸಿತು. ಪ್ರತಿ ಅಂಗಡಿಗಳ ಮುಂಭಾಗದಲ್ಲೂ ರೈತರಿಗಾಗಿ ಸ್ಯಾನಿಟೈಸರ್‌ ಸೇರಿದಂತೆ ಮಾಸ್ಕ್ ವಿತರಣೆಗೆ ಕ್ರಮ, ಪ್ರಾಂಗಣದ ಒಳಭಾಗದಲ್ಲಿ ಪಾನ್‌, ಗುಟ್ಕಾ ತಂಬಾಕು ಉಗುಳುವುದನ್ನು ನಿಷೇಧಿಸಲಾಗಿತ್ತು

Advertisement

ಶಾಸಕರಿಂದ ಪರಿಶೀಲನೆ: ಎಪಿಎಂಸಿ ಪ್ರಾಂಗಣಕ್ಕೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ತಹಶೀಲ್ದಾರ್‌ ಶರಣಮ್ಮಕಾರಿ, ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಸ್‌. ನಾಯ್ಕರ್‌, ಕಾರ್ಯದರ್ಶಿ ಎಸ್‌.ಬಿ.ನ್ಯಾಮಗೌಡ ಸೇರಿದಂತೆ ಸರ್ವ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತರ ಮತ್ತು ವ್ಯಾಪಾರಸ್ಥರ ಅಹವಾಲು ಸ್ವೀಕರಿಸಿದರು.

ಸಾರ್ವಜನಿಕರ ಸಹಕಾರವಿದ್ದರೆ ಏನೆಲ್ಲಾ ಉತ್ತಮ ಕಾರ್ಯಗಳನ್ನು ಮಾಡಬಹುದು ಎಂಬುದಕ್ಕೆ ಇಂದಿನ ಮಾರುಕಟ್ಟೆ ವಹಿವಾಟು ಆರಂಭವೇ ಸಾಕ್ಷಿ, ಸಹಕರಿಸಿದ ಸ್ಥಳೀಯ ವರ್ತಕರು, ರೈತರು ಹಾಗೂ ಸಿಬ್ಬಂದಿ ಅಭಿನಂದಿಸುತ್ತೇನೆ. –ವಿರೂಪಾಕ್ಷಪ್ಪ ಬಳ್ಳಾರಿ, ಶಾಸಕ

ಬ್ಯಾಡಗಿ ಇನ್ನುಳಿದಂತಲ್ಲ. ಇದೊಂದು ಬೃಹತ್‌ ಮಾರುಕಟ್ಟೆ. ವಹಿವಾಟು ಆರಂಭಿಸಿದಲ್ಲಿ ರೆಡ್‌ ಜೋನ್‌ಗಳಿಂದ ರೈತರು ಆಗಮಿಸುವ ಹಿನ್ನೆಲೆಯಲ್ಲಿ ಕೋವಿಡ್ ವೈರಸ್‌ ನಿಯಂತ್ರಣ ಸವಾಲಾಗಿತ್ತು. ಇದಕ್ಕೆ ಸಹಕರಿಸಿದ ರೈತರು ಹಾಗೂ ಎಪಿಎಂಸಿ ಸಿಬ್ಬಂದಿಗೆ ಅಭಿನಂದಿಸುತ್ತೇನೆ. –ಸುರೇಶಗೌಡ ಪಾಟೀಲ, ವರ್ತಕರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next