ಬ್ಯಾಡಗಿ: ಆಣೂರು ಕೆರೆ ತುಂಬಿಸುವ ಯೋಜನೆಗೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಹಾಗೂ ಅನುದಾನ ಕುರಿತು ರಾಜ್ಯ ಸರ್ಕಾರದಿಂದ ಸ್ಪಷ್ಟ ನಿರ್ಧಾರ ದೊರೆಯದ ಹಿನ್ನೆಲೆ ಮಾಸಣಗಿ ಮತ್ತು ಅಂಗರಗಟ್ಟಿ ಗ್ರಾಮಸ್ಥರು ಸಾಮೂಹಿಕ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿ ಶುಕ್ರವಾರ ತಹಶೀಲ್ದಾರ್ ಗುರುಬಸವರಾಜ ಅವರಿಗೆ ಮನವಿ ಸಲ್ಲಿಸಿದರು.
ಆಣೂರ ಕೆರೆಗೆ ನೀರು ತುಂಬಿಸುವ ಯೋಜನೆ ಕುರಿತಾದ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಹೋರಾಟಕ್ಕೆ ತಾಲೂಕಿನಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಇದಕ್ಕೀಗ ಆಣೂರ ಗ್ರಾಮ ಸೇರಿದಂತೆ ಅಂಗರಗಟ್ಟಿ ಹಾಗೂ ಮಾಸಣಗಿ ಗ್ರಾಮಸ್ಥರೂ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದು ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಕಗ್ಗಂಟಾಗಿ ಪರಿಣಮಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿಕ ಸಮಾಜದ ಅಧ್ಯಕ್ಷ ಗಂಗಣ್ಣ ಎಲಿ, ಮತದಾನ ನಮ್ಮ ಸಾಂವಿಧಾನಿಕ ಹಕ್ಕು ಎನ್ನುವುದು ನಮಗೆ ಅರಿವಿದೆ. ಆದರೆ, ಎಲ್ಲ ಪಕ್ಷಗಳೂ ರೈತ ವಿರೋಧ ನಿಲುವುಗಳನ್ನೇ ತಳೆಯಲಾಗುತ್ತಿವೆ. ನೀರಿಗಾಗಿ ನಮ್ಮ ಹೋರಾಟ 40 ವರ್ಷಗಳಿಂದ ನಿರಂತರವಾಗಿ ನಡೆಯುತ್ತ ಬಂದಿದೆ. ನಮ್ಮ ನ್ಯಾಯ ಸಮ್ಮತವಾದ ಹೋರಾಟಗಳನ್ನು ಹತ್ತಿಕ್ಕಲು ಜಿಲ್ಲಾ ಉಸ್ತುವಾರಿ ಸಚಿವರು ರೈತರ ಮೇಲೆ ಕ್ರಮಕ್ಕೆ ಮುಂದಾಗುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ನೀರುಕೊಡದೆ ಹೋದಲ್ಲಿಯಾವುದೇ ಕಾರಣಕ್ಕೂ ನಾವು ಮತದಾನ ಮಾಡುವುದಿಲ್ಲ ಎಂದು ಎಚ್ಚರಿಸಿದರು.
ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಹಾವೇರಿಯಲ್ಲಿ ಗೊಬ್ಬರ ಕೇಳಿದದವರ ಮೇಲೆ ಬಿಜೆಪಿ ಸರ್ಕಾರ ಗುಂಡು ಹಾರಿಸಿತು. ಈದೀಗ ಕಾಂಗ್ರೆಸ್ ನೀರು ಕೇಳಿದ ರೈತರನ್ನ ಜೈಲಿಗಟ್ಟಿ ರೈತರ ಮೇಲಿನ ತಮ್ಮ ನಿಷ್ಠೆಯನ್ನು ತೋರಿಸಿದೆ. ನಾವು ಮತ ಹಾಕಿ ಗೆಲ್ಲಿಸಿದ ನಾಯಕರು ಇಂದು ನಮ್ಮ ಮೇಲೆಯೇ ಸವಾರಿ ಮಾಡಲು ಹೋರಟಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡಲಿದ್ದೇವೆ. ರೈತರನ್ನು ಎದುರಿಸಲು ಸಿದ್ಧರಾಗಿ ಎಂದು ಎಚ್ಚರಿಸಿದರು.
ಮಾಸಣಗಿ ಗ್ರಾಮದ ಬಸವರಾಜ ಬನ್ನಿಹಟ್ಟಿ ಮಾತನಾಡಿ, ಸುಳ್ಳೇಶ್ವರ ಜಿಲ್ಲಾ ಉಸ್ತುವಾರಿ ಸಚಿವ ಸೇರಿದಂತೆ ಮಾಜಿ ಹಾಗೂ ಹಾಲಿ ಶಾಸಕರು, ಜಿಲ್ಲಾಧಿಕಾರಿಗಳೂ ಡಿಪಿಆರ್ ಆಗಿದೆ ಎಂದು ಹೇಳುವ ಮೂಲಕ ಗ್ರಾಮಸ್ಥರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಿಮ್ಮ ಬಳಿ ಈ ಕುರಿತಂತೆ ದಾಖಲೆಗಳಿದ್ದರೆ ನಮಗೆ ನೀಡಿ ಎಂದು ಆಗ್ರಹಿಸಿದರೆ ಯಾರ ಬಳಿಯೂ ಉತ್ತರವಿಲ್ಲ. ಜನರೆಲ್ಲ ಇದೀಗ ಪ್ರಜ್ಞಾವಂತರಾಗಿದ್ದು, ನಿಮ್ಮ ಸುಳ್ಳಿನ ಕಂತೆ ಪುರಾಣ ಇದೀಗ ನಡೆಯಲ್ಲ. ಆದೇಶ ಪ್ರತಿ ನೀಡಿ ಮತ ಕೇಳಿ ಎಂದರು.
ಶಿವನಗೌಡ ವೀರನಗೌಡ್ರ ಮಾತನಾಡಿ, ಯೋಜನೆಗೆ 212 ಕೋಟಿ ರೂ. ಬಿಡುಗಡೆ ಮಾಡುವ ಹಣವನ್ನು 6 ತಿಂಗಳಲ್ಲಿ ಪ್ರಚಾರಕ್ಕೆ ಸರ್ಕಾರಗಳು ಖರ್ಚು ಮಾಡುತ್ತಿವೆ. ಯಾರಪ್ಪನ ಸೋತ್ತು ಎಂದು ಸಾರ್ವಜನಿಕರ ತೆರಿಗೆ ಹಣ ಬೇಕಾಬಿಟ್ಟಿ ಖರ್ಚು ಮಾಡಿತ್ತಿದ್ದೀರಿ? ನೀರಿಲ್ಲದೆ ಸಾಯುತ್ತಿರುವ ಜನರಿಗಿಂತ ನಿಮ್ಮ ಪ್ರಚಾರ ದೊಡ್ಡದೆ? ಯಾವುದೇ ಸಬೂಬು ಹೇಳದೆ ಅನುದಾನ ಬಿಡುಗಡೆ ಮಾಡಿ ಕಾಮಾಗಾರಿ ಆರಂಭಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಿರಣ ಗಡಿಗೋಳ, ಪಾಂಡುರಂಗ ಸುತಾರ, ನಾಗಪ್ಪ ಬನ್ನಿಹಟ್ಟಿ, ಬಸವರಾಜ ಕುಮ್ಮೂರ, ಕರಬಸಪ್ಪ ದೇಸಾಯಿ, ಚಂದ್ರಪ್ಪ ದೇಸಾಯಿ, ನಾಗರಾಜಕುಮ್ಮೂರ, ಶಂಕ್ರಪ್ಪ ಕಾಟನಹಳ್ಳಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.