ಬೆಂಗಳೂರು: ರಾಜಧಾನಿಯಲ್ಲಿ ಬಿಸಿಲ ಪ್ರಮಾಣ ಏರಿದಂತೆ ನೀರಿನ ಕೊರತೆಯೂ ಹೆಚ್ಚುತ್ತಲೇ ಇದೆ. ಅಂತರ್ಜಲ ಮತ್ತಷ್ಟು ಕುಸಿದು ಶೇ.55 ಕೊಳವೆ ಬಾವಿಗಳು ಬತ್ತಿ ಹೋಗಿವೆ. ಸದ್ಯ 500 ಎಂಎಲ್‌ಡಿ ನೀರಿನ ಕೊರತೆ ಉಂಟಾಗಿದ್ದು, ಜಲಮಂಡಳಿಯ ಪ್ರಕಾರ ಏಪ್ರಿಲ್ ಅಂತ್ಯಕ್ಕೆ 650 ಎಂಎಲ್‌ಡಿ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ.
ಉದ್ಯಾನನಗರಿ ಜನರಿಗೆ ಬೇಡಿಕೆಗೆ ಅನುಗುಣವಾಗಿ ನೀರು ಪೂರೈಸುವುದೇ ಜಲಮಂಡಳಿಗೆ ಸವಾಲಾಗಿ ಪರಿಣಮಿಸಿದೆ. ಬೆಂಗಳೂರಿನಲ್ಲಿ ಕಳೆದ ತಿಂಗಳು 250 ಎಂಎಲ್‌ಡಿ ನೀರಿನ ಅಭಾವ ಉಂಟಾಗಿತ್ತು. ಈ ಸಂದರ್ಭದಲ್ಲಿ ಬೆಂಗಳೂರಿಗೆ ಕಾವೇರಿಯಿಂದ ಪೂರೈಕೆ ಯಾಗುತ್ತಿದ್ದ 1,450 ಎಂಎಲ್‌ಡಿ ನೀರನ್ನು 1,470 ಎಂಎಲ್‌ಡಿಗೆ ಹೆಚ್ಚಿಸಲಾಗಿತ್ತು. ಬೇಡಿಕೆ ಯಷ್ಟು ನೀರು ಪೂರೈಸಲು ಸಾಧ್ಯವಾಗ ದಿದ್ದರೂ ಬೆಂಗಳೂರಿಗರು ಲಭ್ಯವಿರುವ ನೀರಿನ್ನೇ ಮಿತವಾಗಿ ಬಳಸುತ್ತಿದ್ದರು.ಆದರೆ, ಪ್ರಸ್ತುತ ಬೆಂಗಳೂರಿನಲ್ಲಿ 500 ಎಂಎಲ್‌ಡಿ ನೀರಿನ ಕೊರತೆ ಉಂಟಾಗಿದೆ. ಮಳೆ ಕೊರತೆಯಿಂದ ಅಂತರ್ಜಲ ಕುಸಿದು ದಿನದಿಂದ ದಿನಕ್ಕೆ ಕೊಳವೆ ಬಾವಿಗಳು ಬತ್ತುತ್ತಲೇ ಇದ್ದು, ಬೆಂಗ ಳೂ ರಿ ನಲ್ಲಿ ಜೂನ್‌ವರೆಗೆ ಮಳೆ ಸುರಿ ಯುವ ಲಕ್ಷಣ ಗೋಚರಿಸಿಲ್ಲ. ಹೀಗಾಗಿ, ಏಪ್ರಿಲ್ ಅಂತ್ಯಕ್ಕೆ 650 ಎಂಎಲ್‌ಡಿ ನೀರಿನ ಕೊರತೆ ಉಂಟಾಗುವ ಭೀತಿ ಇದೆ ಎಂದು ಜಲಮಂಡಳಿ ಎಂಜಿನಿಯರ್‌ಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಶೇ.55 ಕೊಳವೆ ಬಾವಿಗಳು ಬತ್ತಿವೆ: ಬೆಂಗಳೂರಿನಲ್ಲಿ 14 ಸಾವಿರ ಕೊಳವೆ ಬಾವಿಗಳಿದ್ದು, ಈ ಪೈಕಿ 7,050ಕ್ಕೂ ಹೆಚ್ಚಿನ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿದು ಬತ್ತಿವೆ. ಇದರಿಂದ ಕೊಳವೆಬಾವಿಗಳನ್ನೇ ಆಶ್ರಯಿಸುತ್ತಿದ್ದ ಬೆಂಗಳೂರಿನ ನಾಗರಿಕರು ಖಾಸಗಿ ಟ್ಯಾಂಕರ್‌ಗಳಿಗೆ ದುಪ್ಪಟ್ಟು ದುಡ್ಡು ಕೊಟ್ಟು ನೀರು ಖರೀದಿಸುತ್ತಿದ್ದಾರೆ.
ದರ ಏರಿಕೆ: ಬೆಂಗಳೂರು ಹೊರ ವಲಯದಿಂದ ನಗರಕ್ಕೆ ನೀರು ಪೂರೈಸುತ್ತಿದ್ದ ಖಾಸಗಿ ಟ್ಯಾಂಕರ್‌ಗಳು ಇದೀಗ 2,500 ರಿಂದ 5 ಸಾವಿರ ರೂ. ವರೆಗೂ ದರ ಏರಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಜಲಮಂಡಳಿ ಕೊರೆಸಿದ 50 ಬೋರ್‌ಗಳಲ್ಲಿ ನೀರು: ಬೆಂಗಳೂರಿನಲ್ಲಿ ಹೆಚ್ಚಿನ ನೀರಿನ ಅಭಾವ ಉಂಟಾಗಿರುವ 200 ಪ್ರದೇಶಗಳನ್ನು ಗುರುತಿಸಿ ಅಂತಹ ಸ್ಥಳಗಳಲ್ಲಿ ಕೊಳವೆ ಬಾವಿ ಕೊರೆಯಿಸಿ ನೀರು ಪೂರೈಸಲು ಜಲ ಮಂಡಳಿಯು ಮಾರ್ಚ್‌ನಲ್ಲಿ ಟೆಂಡರ್ ಕರೆದಿತ್ತು. ಬೆಂಗಳೂರಿನ 50 ಕಡೆಗಳಲ್ಲಿ ಕೊಳವೆ ಬಾವಿ ಕೊರೆಯಲಾಗಿದ್ದು, 50 ಕಡೆಯೂ ನೀರಿನ ಹರಿವು ಸಿಕ್ಕಿದೆ. ಇನ್ನೂ 150 ಕಡೆಗಳಲ್ಲಿ ಕೊರೆ ಯುವ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಕೊರತೆ ಇನ್ನಷ್ಟು ಹೆಚ್ಚಾದರೆ, ಜಲಮಂಡಳಿಯಿಂದ ಮತ್ತಷ್ಟು ಕೊಳವೆ ಬಾವಿ ಕೊರೆಸಲು ಚಿಂತನೆ ನಡೆಸಲಾಗಿದೆ.
ಕೆ.ಸಿ. ವ್ಯಾಲಿಯಿಂದ ವರ್ತೂರು ಕೆರೆಗೆ ನೀರು : ಸಮರ್ಪಕ ನೀರು ಪೂರೈಸಲು ಹರಸಾಹಸ ಪಡುತ್ತಿರುವ ಜಲಮಂಡಳಿ ಅಧಿಕಾರಿಗಳು ನೀರಿನ ತಜ್ಞರ ಜೊತೆಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಅಂತರ್ಜಲ ಹೆಚ್ಚಿಸುವುದೊಂದೇ ಇದಕ್ಕಿರುವ ಪರಿಹಾರ ಎಂದು ಬಹುತೇಕ ಜಲತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿರುವ 20 ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ಹೆಚ್ಚಿಸುವ ಕಾರ್ಯಕ್ಕೆ ಜಲಮಂಡಳಿ ಗಮನಹರಿಸಿದೆ. ಸದ್ಯದಲ್ಲೇ ಕೆ.ಸಿ.ವ್ಯಾಲಿಯಿಂದ ಬೆಳ್ಳಂದೂರು, ವರ್ತೂರು ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸಲು ಯೋಜನೆ ರೂಪಿಸಲಾಗಿದೆ. ಇದರಿಂದ ಕೆರೆಗಳ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಾಗಿ ಕೊಳವೆಬಾವಿಗಳನ್ನು ರೀ-ಬೋರಿಂಗ್ ಮಾಡಿಸಿದರೆ ನೀರು ಬರಲಿದೆ ಎಂದು ಜಲ ತಜ್ಞರು ಮಂಡಳಿಗೆ ಸಲಹೆ ನೀಡಿದ್ದಾರೆ.
ಜಲಮಂಡಳಿಯು ಬೆಂಗಳೂರಿಗರಿಗೆ ನೀರು ಪೂರೈಸಲು ಎಲ್ಲ ರೀತಿಯಲ್ಲೂ ಕ್ರಮ ಕೈಗೊಂಡಿದೆ. ಟ್ಯಾಂಕರ್ ಮೂಲಕ ಉಚಿತ ನೀರು ಪೂರೈಸಲಾಗುತ್ತಿದೆ. ಕಾವೇರಿ ನೀರು ಪೂರೈಕೆ ಯಲ್ಲಿ ಯಾವುದೇ ಕೊರತೆ ಯಾಗಿಲ್ಲ. ಕೊಳವೆ ಬಾವಿಗಳು ಬತ್ತಿರುವು ದರಿಂದ ನೀರಿನ ಸಮಸ್ಯೆ ಎದುರಾಗಿದೆ
. –ಡಾ.ವಿ.ರಾಮ್ ಪ್ರಸಾತ್ ಮನೋಹರ್, ಅಧ್ಯಕ್ಷ, ಜಲಮಂಡಳಿ.
– ಅವಿನಾಶ ಮೂಡಂಬಿಕಾನ